ಬೀದರ್: ಡಿಸಿಸಿ ಬ್ಯಾಂಕಿನವರು ಸಾಲ ಮರುಪಾವತಿಸಿಲ್ಲ ಎಂದು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯನ್ನು (ಬಿಎಸ್‌ಎಸ್‌ಕೆ) ಜಪ್ತಿ ಮಾಡಿರುವುದು ರೈತರಿಗೆ ಮಾಡಿರುವ ಅಪಮಾನ. ಕೂಡಲೇ ಸರ್ಕಾರ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.
ಸಂಘದ ಪದಾಧಿಕಾರಿಗಳು ನಗರದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಬಿ.ಎಸ್.ಎಸ್.ಕೆ. ಕಾರ್ಖಾನೆ ಜಿಲ್ಲೆಯ ರೈತರ ಜೀವನಾಡಿಯಾಗಿದೆ. ರಾಜಕಾರಣಿಗಳು ಇದರ ಮೇಲೆ ರಾಜಕೀಯ ಮಾಡಿದ್ದರಿಂದ ಕಳೆದ ಮೂರು ವರ್ಷಗಳಿಂದ ಕಾರ್ಖಾನೆ ಬಂದ್ ಆಗಿದೆ. ಯಾವ ರಾಜಕಾರಣಿಯೂ ಕಾರ್ಖಾನೆ ಪುನಶ್ಚೇತನಕ್ಕೆ ಆಸಕ್ತಿ ತೋರಿಲ್ಲ. ರಾಜ್ಯದಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಸಾಲದ ಸುಳಿಗೆ ಸಿಲುಕಿ ಮುಚ್ಚಿದಾಗ ರಾಜ್ಯ ಸರ್ಕಾರವೇ ಹಣವನ್ನು ಕೊಟ್ಟು, ಕಾರ್ಖಾನೆಗಳನ್ನು ಆರಂಭಿಸಿರುವ ನಿದರ್ಶನಗಳಿವೆ. ಅದೇ ರೀತಿ ಬಿಎಸ್‌ಎಸ್‌ಕೆ ಕೂಡ ಪುನಶ್ಚೇತನಗೊಳಿಸಬೇಕು ಎಂದು ಆಗ್ರಹಿಸಿದರು.
2023-24ನೇ ಸಾಲಿನ ಬರಗಾಲದ ಬೆಳೆ ಪರಿಹಾರ ಇದುವರೆಗೆ ರೈತರಿಗೆ ಸಿಕ್ಕಿಲ್ಲ. ಜಿಲ್ಲೆಯ ಭಾಲ್ಕೇಶ್ವರ ಮತ್ತು ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಹಣ ಪಾವತಿಸಿಲ್ಲ. ಶೀಘ್ರದಲ್ಲಿ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ಹಕ್ಕೊತ್ತಾಯ ಮಾಡಿದರು.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಮುಖಂಡರಾದ ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಬಾಬುರಾವ ಜೋಳದಾಬಕೆ, ಭವರಾವ ಪಾಟೀಲ, ಲಕ್ಷ್ಮಣರಾವ್ ಜೋಳದಾಬಕೆ, ಪ್ರಕಾಶ ಬಾವಗೆ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ರಾಮರಾವ್ ಕೇರೂರೆ, ವಿಶ್ವನಾಥ ಧರಣೆ, ರೇವಣಸಿದ್ದಪ್ಪ ಯರಬಾಗ, ಝರಣಪ್ಪ ದೇಶಮುಖ, ಮಲ್ಲಿಕಾರ್ಜುನ ಚಕ್ಕಿ, ಬಸಪ್ಪ ಆಲೂರೆ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.