ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸ್ಥಳದಲ್ಲಿ ಅನುಭವ ಮಂಟಪ ನಿರ್ಮಿಸಲು ಆಗ್ರಹ: ರಾಜೇಶ್ವರ ಶಿವಾಚಾರ್ಯ ಒತ್ತಾಯ

ರಾಜೇಶ್ವರ ಶಿವಾಚಾರ್ಯ ಒತ್ತಾಯ
Last Updated 5 ಜನವರಿ 2021, 15:42 IST
ಅಕ್ಷರ ಗಾತ್ರ

ಬೀದರ್: ‘ಸಮ ಸಮಾಜ ನಿರ್ಮಾಣಕ್ಕಾಗಿ ಬಸವಾದಿ ಶರಣರು 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದರು. ಈ ಸ್ಥಳ ಬಸವಕಲ್ಯಾಣ ಮಧ್ಯ ಭಾಗದಲ್ಲಿದ್ದು, ಸರ್ಕಾರ ಸ್ವಾಧೀನಕ್ಕೆ ಪಡೆದು ಭವ್ಯ ಸ್ಮಾರಕ ನಿರ್ಮಾಣ ಮಾಡಬೇಕು’ ಎಂದು 12ನೇ ಶತಮಾನದ ಮೂಲ ಅನುಭವ ಮಂಟಪ ಸ್ಮಾರಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ರಾಜೇಶ್ವರ ಶಿವಾಚಾರ್ಯ ಒತ್ತಾಯಿಸಿದರು.

‘ಬಸವಕಲ್ಯಾಣದಲ್ಲಿ 770 ಗಣಂಗಳ ಕೂಡಿಸಿದ ಸ್ಥಳವನ್ನು ಶೋಧ ಮಾಡಿಸಬೇಕು. ಅದನ್ನು ಭಕ್ತರ ದರ್ಶನಕ್ಕಾದರೂ ಅನುಕೂಲ ಮಾಡಿಕೊಡಬೇಕು’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮನವಿ ಮಾಡಿದರು.

‘ಕಾಶಿಯಲ್ಲಿ ದೊಡ್ಡ ಬಿರ್ಲಾ ಮಂದಿರ ಇದೆ. ಅಲ್ಲಿ ಸ್ತಬ್ದಚಿತ್ರ ವೀಕ್ಷಿಸಲು ಹಾಗೂ ಕತೆ ಕೇಳಲು ಅಲ್ಲಿಗೆ ಹೋದರೂ ಭಕ್ತರು ಮೂಲ ಮಂದಿರಕ್ಕೆ ಹೋಗಿ ವಿಶ್ವನಾಥನ ದರ್ಶನ ಪಡೆಯುತ್ತಾರೆ. ಅದರಂತೆ ಅನುಭವ ಮಂಟಪ ದರ್ಶನದ ಪವಿತ್ರ ಸ್ಥಾನವಾಗಿ ಉಳಿಯಬೇಕು. ಬೆಂಗಳೂರಲ್ಲಿ ಕುಳಿತರೆ ಬಸವಕಲ್ಯಾಣ ಅರ್ಥವಾಗದು. ಬಸವಕಲ್ಯಾಣಕ್ಕೆ ಬಂದು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು’ ಎಂದು ಹೇಳಿದರು.

‘ಪರುಷ ಕಟ್ಟೆ ಸ್ಥಳ ಶುಚಿಗೊಳಿಸಬೇಕು. ಪೀರ್ ಪಾಶಾ ಬಂಗ್ಲಾ ಪರಿಸರದಲ್ಲಿನ 44 ಕರಿ ಕಲ್ಲಿನ ಕಂಬಗಳ ಮಂಟಪ ಹಾಗೂ ಅದರ ಸುತ್ತಲಿನ ಖಾಸಗಿ ಒಡೆತನದ 12 ಎಕರೆ ಜಾಗವನ್ನು ಖರೀದಿಸಿ ಸ್ಮಾರಕ ನಿರ್ಮಾಣ ಮಾಡಬೇಕು’ ಎಂದು ಬೇಡಿಕೆ ಮಂಡಿಸಿದರು.

‘ಸ್ಮಾರಕಗಳ ನಿರ್ಮಾಣ ಆಗುವವರೆಗೂ ಸಮಿತಿಯು ನಿರಂತರ ಹೋರಾಟ ನಡೆಸಲಿದೆ’ ಎಂದು ತಿಳಿಸಿದರು.

‘ಬಸವಕಲ್ಯಾಣದಲ್ಲಿ ಮೂಲ ಅನುಭವ ಮಂಟಪ ಹಾಗೂ ಇತರ ಐತಿಹಾಸಿಕ ಸ್ಮಾರಕಗಳಿಗೆ ಆಯೋಧ್ಯೆ ರಾಮ ಮಂದಿರ ನಿರ್ಮಾಣದಷ್ಟೇ ಪ್ರಾಮುಖ್ಯ ಕಲ್ಪಿಸಬೇಕು’ ಎಂದು ಹೇಳಿದರು.

‘ಅಯೋಧ್ಯೆಯ ಮೂಲ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಬಸವಕಲ್ಯಾಣದ ಐತಿಹಾಸಿಕ ಸ್ಮಾರಕಗಳ ನಿರ್ಮಾಣವನ್ನೂ ತುರ್ತು ಕಾರ್ಯಗಳಾಗಿ ಪರಿಗಣಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿಯ ಸಂಚಾಲಕ ಓಂಪ್ರಕಾಶ ರೊಟ್ಟೆ ಮಾಧ್ಯಮಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT