ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ರಾಜಕೀಯ ಚಟುವಟಿಕೆ ಚುರುಕು

ಬಸವಕಲ್ಯಾಣಕ್ಕೆ ನ.13ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಭೇಟಿ
Last Updated 10 ನವೆಂಬರ್ 2020, 4:36 IST
ಅಕ್ಷರ ಗಾತ್ರ

ಬಸವಕಲ್ಯಾಣ: ಇಲ್ಲಿನ ಉಪ ಚುನಾವಣೆಯ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಲು ಹಾಗೂ ಮತದಾರರ ಒಲವು, ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದಕ್ಕಾಗಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನವೆಂಬರ್ 13 ಕ್ಕೆ ಇಲ್ಲಿಗೆ ಬರುತ್ತಿರುವ ಕಾರಣ ಪಕ್ಷದಲ್ಲಿನ ಚಟುವಟಿಕೆಗಳು ಚುರುಕುಗೊಂಡಿವೆ.

ವಿಜಯೇಂದ್ರ ಅವರ ಇಲ್ಲಿನ ಕಾರ್ಯಕ್ರಮಗಳ ರೂಪುರೇಷೆ ಸಿದ್ಧಪಡಿಸುವುದಕ್ಕಾಗಿ ಪಕ್ಷದ ಜಿಲ್ಲಾ ಮುಖಂಡರಾದ ಬಾಬು ವಾಲಿ, ಡಾ.ಶೈಲೇಂದ್ರ ಬೆಲ್ದಾಳೆ ಹಾಗೂ ಸೋಮನಾಥ ಅವರು ಸೋಮವಾರ ಇಲ್ಲಿಗೆ ಬಂದು ಪಕ್ಷದವರೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಮರಾಠಾ ಸಮಾಜಕ್ಕೆ 2 ಎ ಪ್ರವರ್ಗಕ್ಕೆ ಸೇರ್ಪಡೆ ಮಾಡುವ ಸಂಬಂಧ ಇಲ್ಲಿ ನಡೆದ ಸಮಾಜದ ಜಿಲ್ಲಾ ಮುಖಂಡರ ಸಭೆಯಲ್ಲಿಯೂ ಅವರು ಪಾಲ್ಗೊಂಡು ವಿಜಯೇಂದ್ರ ಅವರನ್ನು ಈ ಬಗ್ಗೆ ಭೇಟಿಯಾಗಿ ಮನವಿ ಸಲ್ಲಿಸುವುದಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಇವರು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ವಿಜಯೇಂದ್ರ ಅವರು ನವೆಂಬರ್ 12ಕ್ಕೆ ಬರುವವರಿದ್ದರು. ಆದರೆ, ಅನಿವಾರ್ಯ ಕಾರಣದಿಂದ ಅವರ ಭೇಟಿ ನವೆಂಬರ್ 13ಕ್ಕೆ ನಿಗದಿಯಾಗಿದೆ. ಈ ಸಂಬಂಧ ಸಿದ್ಧತೆಗಾಗಿ ನವೆಂಬರ್ 10ರಂದು ಇಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ’ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ ತಿಳಿಸಿದ್ದಾರೆ.

ಸ್ಥಳೀಯರಿಗೆ ಆದ್ಯತೆ ನಿಜವೇ: ಈಚೆಗೆ ಮಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವ ನಿರ್ಧಾರವನ್ನು ಕೋರ್ ಕಮೀಟಿ ತೆಗೆದುಕೊಂಡಿದೆ. ಇಂಥ ತೀರ್ಮಾನ ತೆಗೆದುಕೊಳ್ಳುವ ಅನಿವಾರ್ಯತೆ ಏನಿತ್ತು ಎನ್ನಲಾಗುತ್ತಿದೆ. ವಿಜಯೇಂದ್ರ ಅವರು ಇಲ್ಲಿಗೆ ಬರಲಿದ್ದಾರೆ ಎಂಬ ಸುದ್ದಿ ಹರಡಿದ್ದರಿಂದಲೇ ಪಕ್ಷ ಈ ನಿರ್ಧಾರವನ್ನು ಪ್ರಕಟಿಸಿದೆಯೇ ಅಥವಾ ಇನ್ನ್ಯಾವುದಾದರೂ ಕಾರಣವಿತ್ತೇ ಎಂಬುದು ತಿಳಿಯುತ್ತಿಲ್ಲ.

ಪಕ್ಷದಲ್ಲಿ ಸ್ಥಳೀಯ ಆಕಾಂಕ್ಷಿಗಳು ಅಧಿಕವಿರುವುದರಿಂದ ಹಾಗೂ ಇಲ್ಲಿನ ವರಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕಾಗಿ ಪಕ್ಷ ಇಂಥ ತೀರ್ಮಾನಕ್ಕೆ ಬಂದಿರಬೇಕು ಎಂಬುದು ಪಕ್ಷದ ಮುಖಂಡರೊಬ್ಬರ ಅನಿಸಿಕೆಯಾಗಿದೆ. ಏನಿದ್ದರೂ ವಿಜಯೇಂದ್ರ ಶರಣರ ನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದ್ದು ಇದಕ್ಕಾಗಿ ವೇದಿಕೆ ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಅವರು ಇಲ್ಲಿ ಸ್ಪರ್ಧಿಸುವುದು ನಿಶ್ಚಿತ ಎಂದೇ ಎಲ್ಲರೂ ಬಲವಾಗಿ ನಂಬಿದ್ದಾರೆ. ಅದಕ್ಕೆ ಅವರು ಮುಂದೆ ತೆಗೆದುಕೊಳ್ಳುವ ತೀರ್ಮಾ ನವೇ ಉತ್ತರಿಸಲಿದೆ ಎನ್ನಬಹುದು.

ವಿಜಯೇಂದ್ರ ಸ್ಪರ್ಧಿಸುವರೆ?

ಶಿರಾ ಚುನಾವಣೆಯ ಜವಾಬ್ದಾರಿ ವಹಿಸಿದ್ದ ವಿಜಯೇಂದ್ರ ಅವರಿಗೆ ಇಲ್ಲಿನ ಉಪ ಚುನಾವಣೆಯ ಉಸ್ತುವಾರಿಯೂ ವಹಿಸಿರುವುದು ನಿಜವಾಗಿದೆ. ಆದರೆ, ಇದರ ಜತೆಯಲ್ಲಿಯೇ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುವರು ಎಂಬ ಸುದ್ದಿಯೂ ಹರಡಿದೆ. ಅವರು ಈ ಬಗ್ಗೆ ಅಲ್ಲಗಳೆದಿದ್ದರೂ ಯಾವಾಗ ಏನಾಗುತ್ತದೋ ಎಂಬ ಚರ್ಚೆ ಇಲ್ಲಿ ಜೋರು ಹಿಡಿದಿದೆ. ನವೆಂಬರ್ 13ಕ್ಕೆ ಇಲ್ಲಿಗೆ ಬರುವ ಅವರು ಇಲ್ಲಿನ ಪರಿಸ್ಥಿತಿಯ ಅನುಕೂಲತೆ, ಅನಾನುಕೂಲತೆ ನೋಡಿ ಮುಂದಿನ ನಿರ್ಧಾರಕ್ಕೆ ಬರಬಹುದು ಎನ್ನಲಾಗುತ್ತಿದೆ.

ಆಕಾಂಕ್ಷಿಗಳಿಂದ ಶಕ್ತಿ ಪ್ರದರ್ಶನ

ವಿಜಯೇಂದ್ರ ಅವರ ಸ್ವಾಗತ ಕೋರುವುದಲ್ಲದೆ ಅವರ ಎದುರಲ್ಲಿ ಶಕ್ತಿ ಪ್ರದರ್ಶನ ನಡೆಸುವುದಕ್ಕೆ ಇಲ್ಲಿನ ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಸಿದ್ಧತೆ ಕೈಗೊಂಡಿರುವುದು ಕಂಡು ಬರುತ್ತಿದೆ.

ಎಲ್ಲೆಲ್ಲಿ ಸಭೆ ಆಯೋಜಿಸಬೇಕು. ಎಷ್ಟೇಷ್ಟು ಬೆಂಬಲಿಗರನ್ನು ಕರೆತರಬೇಕು ಎಂಬುದರ ಲೆಕ್ಕಾಚಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT