ಮಂಗಳವಾರ, ಮೇ 18, 2021
30 °C
ಮತಹಕ್ಕು ಚಲಾಯಿಸಲಿದ್ದಾರೆ 2,39,782 ಮತದಾರರು

ಉಪ ಚುನಾವಣೆ: ಇಂದು ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ/ಬೀದರ್‌: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತೇರು ಮೈದಾನದಲ್ಲಿ ಚುನಾವಣಾ ಸಿಬ್ಬಂದಿ ಚುನಾವಣಾ ಸಾಮಗ್ರಿಗಳನ್ನು ಪಡೆದು ತಮಗೆ ವಹಿಸಿಕೊಟ್ಟ ಮತಗಟ್ಟೆಗಳಿಗೆ ಶುಕ್ರವಾರ ಸಂಜೆ ತೆರಳಿದರು.

ಕ್ಷೇತ್ರದಲ್ಲಿ ಒಟ್ಟು 326 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇವುಗಳಲ್ಲಿ 95 ಸೂಕ್ಷ್ಮ ಹಾಗೂ 231 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,14,794 ಮಹಿಳೆಯರು, 1,24,984 ಪುರುಷರು ಹಾಗೂ ನಾಲ್ವರು ಲೈಂಗಿಕ ಅಲ್ಪಸಂಖ್ಯಾತರು ಸೇರಿ ಒಟ್ಟು 2,39,782 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಬಾರಿ 2,163 ಮಹಿಳೆಯರು ಮತ್ತು 1,384 ಪುರುಷರು ಸೇರಿ ಒಟ್ಟು 3,547 ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ.

ಚುನಾವಣೆಯಲ್ಲಿ 457 ಸಿಯು, 457 ಬಿಯು ಹಾಗೂ 489 ವಿವಿಪ್ಯಾಟ್ ಬಳಸಲಾಗುತ್ತಿದೆ. ಹೆಚ್ಚುವರಿಯಾಗಿ ಶೇಕಡ 50ರಷ್ಟು ವಿವಿಪ್ಯಾಟ್, ಶೇಕಡ 40ರಷ್ಟು ಬಿಯು ಹಾಗೂ ಸಿಯುಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

172 ಮತಗಟ್ಟೆಗಳಲ್ಲಿ ಅಂಗವಿಕಲರು ಇರುವುದನ್ನು ಗುರುತಿಸಲಾಗಿದ್ದು, ಅಲ್ಲಿ ವ್ಹೀಲ್‌ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ.
163 ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 40 ಮತಗಟ್ಟೆಗಳಲ್ಲಿ 50 ಮೈಕ್ರೊ ವೀಕ್ಷಕರನ್ನು ನೇಮಿಸಲಾಗಿದೆ.

ನಗರದ ತೇರು ಮೈದಾನದಲ್ಲಿನ ಬಸವೇಶ್ವರ ಪ್ರೌಢಶಾಲೆಯಲ್ಲಿ ಶುಕ್ರವಾರ ಇವಿಎಂ ಮತಯಂತ್ರ, ವಿವಿ ಪ್ಯಾಟ್ ಹಾಗೂ ಕಂಟ್ರೋಲರ್ ಯಂತ್ರಗಳನ್ನು ಜೋಡಣೆ ಹಾಗೂ ವಿತರಣೆ ನಡೆಯಿತು. ನಂತರ ಅವುಗಳನ್ನು ಪಡೆದ ಸಿಬ್ಬಂದಿಗಳು ಬಸ್ ಹಾಗೂ ಬಾಡಿಗೆಗೆ ಪಡೆದ ಖಾಸಗಿ ಕ್ರೂಸರ್ ವಾಹನಗಳ ಮೂಲಕ ಮತಗಟ್ಟೆಗಳಿಗೆ ತೆರಳಿದರು.

‘ಶಾಂತಿಯುತ, ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಗೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ತಿಳಿಸಿದ್ದಾರೆ.

ಭದ್ರತಾ ಪಡೆಗಳ ಪಥ ಸಂಚಲನ

ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿರುವ ಭದ್ರತಾ ಪಡೆಗಳ ಸಿಬ್ಬಂದಿ ಹಾಗೂ ಪೊಲೀಸರು ವಿಧಾನಸಭಾ ಕ್ಷೇತ್ರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು. ಶಾಂತಿಯುತ ಮತದಾನಕ್ಕೆ ಸಹಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

‘ಮತದಾನದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಇಬ್ಬರು ಡಿವೈಎಸ್‌ಪಿ, ಐವರು ಪೊಲೀಸ್‌ ಇನ್‌ಸ್ಪೆಕ್ಟರ್, 21 ಪಿಎಸ್‌ಐ, 70 ಎಎಸ್‌ಐ, 224 ಹೆಡ್‌ ಕಾನ್‌ಸ್ಟೆಬಲ್, 378 ಕಾನ್‌ಸ್ಟೆಬಲ್ ಹಾಗೂ ಗೃಹರಕ್ಷಕ ದಳದ 42 ಸಿಬ್ಬಂದಿ ಸೇರಿ ಒಟ್ಟು 742 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ ಒಂದು ತಂಡ, ರಾಜ್ಯ ಮೀಸಲು ಪೊಲೀಸ್ ಪಡೆಯ ಐದು ಪ್ಲಾಟೂನ್‌ಗಳು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಎಂಟು ತುಕ್ಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು

ಮಾಲಾ ನಾರಾಯಣರಾವ್; ಕಾಂಗ್ರೆಸ್
ಶರಣು ಸಲಗರ; ಬಿಜೆಪಿ
ಸಯ್ಯದ್‌ ಯಸ್ರಬ್ಅಲಿ ಖಾದ್ರಿ; ಜೆಡಿಎಸ್
ಅಂಕುಶ್‌ ಮಹಾದೇವ; ಶಿವಸೇನಾ
ಶ್ರೀ ವೆಂಕಟೇಶ್ವರ ಮಹಾಸ್ವಾಮಿ: ಹಿಂದೂಸ್ತಾನ್‌ ಜನತಾ ಪಾರ್ಟಿ
ಮಂಜುನಾಥ ಶೃಂಗೇರಿ; ಕರ್ನಾಟಕ ರಾಷ್ಟ್ರ ಸಮಿತಿ
ಅಬ್ದುಲ್‌ ರಜಾಕ್; ಎಐಎಂಐಎಂ
ಫರ್ಜಾನಾ ಬೇಗಂ; ಅಖಿಲ ಭಾರತೀಯ ಮುಸ್ಲಿಂ ಲೀಗ್(ಸೆಕ್ಯುಲರ್)
ಮಲ್ಲಿಕಾರ್ಜುನ ಖೂಬಾ; ಪಕ್ಷೇತರ
ಅಂಬ್ರೋಸ್ ಮೆಲೊ; ಪಕ್ಷೇತರ
ಅಲ್ತಾಫ್ ಫತ್ರುಸಾಬ; ಪಕ್ಷೇತರ
ರವಿಕಿರಣ ನರಸೇಗೌಡ; ಪಕ್ಷೇತರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.