ಸೋಮವಾರ, ಮಾರ್ಚ್ 20, 2023
30 °C
ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ಬಲಪಡಿಸಲು ದಾಖಲೆ ವೀರನಿಗೆ ಕೇಂದ್ರ ಸಚಿವ ಸ್ಥಾನದ ಗೌರವ

Cabinet Reshuffle| ಭಗವಂತ ಖೂಬಾಗೆ ಬಯಸದೇ ಬಂದ ಭಾಗ್ಯ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಗವಂತನ ಚಮತ್ಕಾರ ಯಾರಿಗೂ ತಿಳಿದಿಲ್ಲ. ಬಹುಶಃ ಸಂಸದ ಭಗವಂತ ಖೂಬಾ ಅವರ ವಿಷಯದಲ್ಲೂ ಹೀಗೆಯೇ ಆಗಿದೆ. ಬೀದರ್‌ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಎರಡು ಬಾರಿಯೂ ದಾಖಲೆಯನ್ನೇ ಸೃಷ್ಟಿಸಿದರು. ಇದೀಗ ಸಚಿವ ಸ್ಥಾನ ಗಿಟ್ಟಿಸಿ ಜಿಲ್ಲೆಯ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ.

ಕಲ್ಯಾಣ ಕರ್ನಾಟಕದ ರಾಜಕೀಯ ಏಳುಬೀಳುಗಳ ಮೇಲೆ ನಿಗಾ ಇಟ್ಟಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣ ಸದೆಬಡಿಯುವ ದಿಸೆಯಲ್ಲೇ ಹೆಜ್ಜೆ ಇಟ್ಟಿದೆ. ಖೂಬಾ ಅವರಿಗೆ ಸಚಿವ ಸ್ಥಾನ ಕೊಟ್ಟು ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಬೀದರ್‌ ಲೋಕಸಭಾ ಕ್ಷೇತ್ರಕ್ಕೆ 2014ರಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್ ಅವರನ್ನು ಪರಾಭವಗೊ ಳಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಖೂಬಾ ಅವರು, 2019ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು 1,16,536 ಮತಗಳ ಅಂತರದಿಂದ ಸೋಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಬೀದರ್‌ ಜಿಲ್ಲೆಯಿಂದ ಆರಂಭಿಸಿದ ಹೊಸ ರೈಲುಗಳ ಸಂಚಾರ, ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ಹಾಗೂ ಅಭ್ಯರ್ಥಿಯ ಸರಳ ಸ್ವಭಾವ ಮತದಾರರ ಮೇಲೆ ಪ್ರಭಾವ ಬೀರಿತು. ಕ್ಷೇತ್ರದಲ್ಲಿ ಮತ್ತೊಮ್ಮೆ ನೆಲೆಯೂರಲು ಸಾಧ್ಯವಾಯಿತು. ಇವರ ಸೇವೆಯನ್ನು ಪರಿಗಣಿಸಿ ಇದೀಗ ಪಕ್ಷವೂ ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದೆ.

ರಾಜಕೀಯ ದಾಳ: ಖೂಬಾ ಅವರು ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಯಲ್ಲಿ ಶರಣು ಸಲಗರ ಅವರಿಗೆ ಟಿಕೆಟ್‌ ಕೊಡಿಸಿ ಹಗಲಿರುಳು ಶ್ರಮಿಸಿ ಗೆಲ್ಲಿಸಿದರು. ಪಕ್ಷದಲ್ಲೂ ವರ್ಚಸ್ಸು ವೃದ್ಧಿಸಿಕೊಂಡರು. ಎಲ್ಲರನ್ನೂ ಜತೆಗೆ ತೆಗೆದುಕೊಂಡು ಹೋಗುವ ಶಕ್ತಿ ಇರುವ ಕಾರಣ ಪಕ್ಷ ಅವರನ್ನು ಸಚಿವರನ್ನಾಗಿ ಮಾಡಿದೆ ಎಂದು ಪಕ್ಷದ ಹಿರಿಯ ಮುಖಂಡ ರೇವಣಸಿದ್ದಪ್ಪ ಜಲಾದೆ ಹೇಳುತ್ತಾರೆ.

ಕೇಂದ್ರ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರಯತ್ನಿಸಿದ ಶ್ರೇಯಸ್ಸು ಕೂಡ ಖೂಬಾ ಅವರಿಗೆ ಸಲ್ಲುತ್ತದೆ. ಪ್ರಧಾನಮಂತ್ರಿ ಫಸಲ್‌ ವಿಮಾ ಯೋಜನೆಯ ಅನುಷ್ಠಾನದಲ್ಲಿ ದಾಖಲೆ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕೇಂದ್ರ ಸಚಿವ ಸ್ಥಾನಕ್ಕೆ ಭಗವಂತ ಖೂಬಾ ಏಕೆ?

ಭಗವಂತ ಖೂಬಾ ಅವರಿಗೆ ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ ಚೆನ್ನಾಗಿ ಗೊತ್ತು. ಖೂಬಾ ಅವರು 47ನೇ ವಯಸ್ಸಿನಲ್ಲಿ ಸಂಸದರಾಗಿ ಆಯ್ಕೆಯಾದರು. 54ನೇ ವಯಸ್ಸಿನಲ್ಲಿ ಸಚಿವರಾಗಿದ್ದಾರೆ. ಮೆಕ್ಯಾನಿಕಲ್ ಎಂಜಿನಿಯರ್‌ ಆಗಿರುವ ಅವರು ಉತ್ಸಾಹಿ ರಾಜಕಾರಣಿಯಾಗಿದ್ದಾರೆ.

ಸವಾಲುಗಳೇನು?

ಜಿಲ್ಲೆಯಲ್ಲಿ ರಾಷ್ಟ್ರೀಯ ಸಮ ವಿಕಾಸ ಯೋಜನೆ, ಕೃಷಿ ವಿಕಾಸ, ರಾಷ್ಟ್ರೀಯ ಹೈನುಗಾರಿಕೆ ಯೋಜನೆ, ಸೋಲಾರ್‌ ಮಿಷನ್ ಯೋಜನೆ ನನೆಗುದಿಗೆ ಬಿದ್ದಿವೆ. ಹಿಂದೆ ಕೇಂದ್ರ ಸಚಿವರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ವರ್ಷದಲ್ಲೇ ಕಲಬುರ್ಗಿ ಚಿತ್ರಣ ಬದಲಿಸಿದರು. ಅದರಂತೆ ಹಿಂದುಳಿದ ಪ್ರದೇಶದ ಪ್ರತಿನಿಧಿಯಾದ ಖೂಬಾ ಅವರು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕಿದೆ.

ಭಗವಂತ ಖೂಬಾ ಪರಿಚಯ

ಹೆಸರು: ಭಗವಂತ ಖೂಬಾ
ತಂದೆ: ಗುರುಬಸಪ್ಪ ಖೂಬಾ (ರೈತರು)
ತಾಯಿ: ಮಹಾದೇವಿ ಗುರುಬಸಪ್ಪ ಖೂಬಾ
ಪತ್ನಿ: ಶೀಲಾ ಖೂಬಾ, ಮಕ್ಕಳು: ಪುತ್ರ– ಅಶುತೋಷ್ ಖೂಬಾ, ಪುತ್ರಿಯರು– ವಸುಂಧರಾ, ಮಣಿಕರ್ಣಿಕಾ
ಜನನ: ಜೂನ್ 1, 1968
ಜನನ ಸ್ಥಳ: ಔರಾದ್‌ (ಬಿ)
ಪ್ರಾಥಮಿಕ ಶಿಕ್ಷಣ: ಸರ್ಕಾರಿ ಪ್ರಾಥಮಿಕ ಶಾಲೆ, ಔರಾದ್‌
ಪ್ರೌಢ ಶಿಕ್ಷಣ: ಕರ್ನಾಟಕ ಪಬ್ಲಿಕ್ ಸ್ಕೂಲ್, ಬೀದರ್‌ (1984)
ಪಿ.ಯು.ಸಿ.: ಕರ್ನಾಟಕ ಕಾಲೇಜು ಬೀದರ್ (1986)
ಪದವಿ: ಮೆಕ್ಯಾನಿಕಲ್‍ ಎಂಜಿನಿಯರಿಂಗ್, ಸಿದ್ದಗಂಗಾ ಮಠ, 
ತುಮಕೂರು (1991)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು