ಸೋಮವಾರ, ಜನವರಿ 18, 2021
19 °C
ಧಾರ್ಮಿಕ ಧ್ವಜಗಳ ಸಾಂಕೇತಿಕ ಮೆರವಣಿಗೆ

ಗುರುನಾನಕ್‌ ದೇವ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ ಅವರ 551ನೇ ಜಯಂತಿ ಆಚರಣೆ ಕಾರ್ಯಕ್ರಮ ಇಲ್ಲಿನ ಗುರುದ್ವಾರದ ಆವರಣದಲ್ಲಿ ಸೋಮವಾರ ಕೋವಿಡ್‌ ಸೋಂಕಿನ ಕಾರಣ ಅತ್ಯಂತ ಸರಳವಾಗಿ ನಡೆಯಿತು.

ಬೆಳಿಗ್ಗೆ ಧಾರ್ಮಿಕ ಮುಖಂಡರು ಗುರುದ್ವಾರದಲ್ಲಿ ಕೀರ್ತನ ಹಾಗೂ ಪ್ರವಚನ ಕಾರ್ಯಕ್ರಮ ನಡೆಸಿಕೊಟ್ಟರು.

ನಂತರ ಸಾಮೂಹಿಕ ಗುರುಗ್ರಂಥ ಪಠಣ ಕಾರ್ಯಕ್ರಮ ವಿಧಿಬದ್ಧವಾಗಿ ಜರುಗಿತು. ಗುರುದ್ವಾರಕ್ಕೆ ಪುಷ್ಪ ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಬೀದರ್‌ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಭಕ್ತರು ಸರತಿ ಸಾಲಿನಲ್ಲಿ ಬಂದು ಗ್ರಂಥ ಸಾಹಿಬ್‌ ದರ್ಶನ ಪಡೆದರು.

ಸಂಜೆ ಗುರುದ್ವಾರದ ಪ್ರಮುಖರು ಗುರುಗ್ರಂಥ ಸಾಹಿಬ್‌ ಹಾಗೂ ಗುರುನಾನಕ್‌ ದೇವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕ ಮೆರವಣಿಗೆಗೆ ಚಾಲನೆ ನೀಡಿದರು. ಸಾಂಪ್ರದಾಯಿಕ ವೇಷ ಧರಿಸಿದ್ದ ಯುವಕರು ಹಾಗೂ ಕರ ಸೇವಕರು ನಿಶಾನ್ ಸಾಹಿಬ್ ಹಾಗೂ ಧಾರ್ಮಿಕ ಧ್ವಜ ಹಿಡಿದು ಜಯಘೋಷ ಮೊಳಗಿಸಿದರು.

ನೀಲಿ ಹಾಗೂ ಹಳದಿ ಬಣ್ಣದ ಧಾರ್ಮಿಕ ಧ್ವಜಗಳು ಹಾಗೂ ನಿಶಾನ್‌ ಸಾಹಿಬ್‌ ಹಿಡಿದಿದ್ದ ಯುವಕರು ಗುರುದ್ವಾರ ಆವರಣ ಸುತ್ತಹಾಕಿ ಮೆರವಣಿಗೆಯನ್ನು ಮುಕ್ತಾಯಗೊಳಿಸಿದರು. ಯುವಕರು ಖಡ್ಗವನ್ನು ಗಾಳಿಯಲ್ಲಿ ತಿರುಗಿಸುತ್ತ ಕತ್ತಿ ವರಸೆ ಪ್ರದರ್ಶನ ನೀಡಿದರು. ವ್ಯಕ್ತಿಯೊಬ್ಬರು ಕುದುರೆ ಮೇಲೆ ಕುಳಿತು ನಗಾರಿ ಬಾರಿಸಿದರೆ, ಕೆಲ ಯುವಕರು ಉರಿಯುವ ದೀವಟಿಗೆ, ಖಡ್ಗ ಹಾಗೂ ಲಾಠಿ ತಿರುಗಿಸಿ ಸಾರ್ವಜನಿಕರ ಗಮನ ಸೆಳೆದರು.

ಗುರುದ್ವಾರ ಶ್ರೀ ನಾನಕ್‌ ಝೀರಾ ಪ್ರಬಂಧಕ ಕಮಿಟಿ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್, ಕಮಿಟಿ ಸದಸ್ಯರು, ಸಿಖ್‌ ಮುಖಂಡರು ಪಾಲ್ಗೊಂಡಿದ್ದರು. ಗುರುನಾನಕ ಆಸ್ಪತ್ರೆಯ ಮುಂಭಾಗದ ರಸ್ತೆ ಬದಿಯಲ್ಲಿ ಕುಳಿತು ಕೆಲವರು ಧಾರ್ಮಿಕ ಚಿಹ್ನೆವುಳ್ಳ ಸಾಮಗ್ರಿ, ಚಿಕ್ಕದಾದ ಖಡ್ಗ ಹಾಗೂ ಆಟಿಕೆ ಸಾಮಾನುಗಳನ್ನು ಮಾರಾಟ ಮಾಡಿದರು. ಆವರಣದಲ್ಲಿ ಹೆಚ್ಚಿನ ಜನ ಸೇರಿದ್ದರಿಂದ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.