ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವಾಡ: ಚಾಂಬೋಳ ಪಂಚಾಯಿತಿಗೆ ಬೀಗ

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ
Last Updated 7 ಅಕ್ಟೋಬರ್ 2020, 2:51 IST
ಅಕ್ಷರ ಗಾತ್ರ

ಜನವಾಡ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೀದರ್ ತಾಲ್ಲೂಕಿನ ಚಾಂಬೋಳ ಗ್ರಾಮಸ್ಥರು ಮಂಗಳವಾರ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪಂಚಾಯಿತಿ ಎದುರು ಜಮಾಯಿಸಿದ ಗ್ರಾಮಸ್ಥರು ಕಚೇರಿಗೆ ಬೀಗ ಜಡಿದರು. ಬಳಿಕ ಮಧ್ಯಾಹ್ನದ ವರೆಗೂ ಪಂಚಾಯಿತಿ ಎದುರು ಧರಣಿ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಜನವಾಡ ಪೊಲೀಸರು ಬೀಗ ತೆಗೆಯಲು ಸೂಚಿಸಿದಾಗ ಗ್ರಾಮಸ್ಥರು ನಿರಾಕರಿಸಿದರು. ಆಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಕೆಲವರ ಮೇಲೆ ಬೆತ್ತ ಪ್ರಹಾರವನ್ನೂ ಮಾಡಿದರು. ನಂತರ ಪ್ರತಿಭಟನಾಕಾರರು ಬೀಗ ತೆರವುಗೊಳಿಸಿದರು.

‘ಗ್ರಾಮದಲ್ಲಿ ಎರಡು ಕೊಳವೆಬಾವಿಗಳು ಇವೆ. ಮೋಟಾರ್ ಸುಟ್ಟು ಹೋಗಿರುವ ಕಾರಣ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ’ ಎಂದು ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ರವೀಂದ್ರ ದೇಸಾಯಿ ಹೇಳಿದರು.

‘ಜನ ಕಾಲ್ನಡಿಗೆ, ಸೈಕಲ್, ಬೈಕ್ ಹಾಗೂ ಆಟೊಗಳಲ್ಲಿ ದೂರದ ಹೊಲಗಳು ಹಾಗೂ ಹಳ್ಳಕ್ಕೆ ಹೋಗಿ ನೀರು ತರುತ್ತಿದ್ದಾರೆ. ಗ್ರಾಮಸ್ಥರಿಗೆ ಸದ್ಯ ನೀರು ತುಂಬುವುದೇ ದೊಡ್ಡ ಕೆಲಸವಾಗಿದೆ’ ಎಂದು ತಿಳಿಸಿದರು.

‘ಕುಡಿಯುವ ನೀರಿನ ಬವಣೆ ತಪ್ಪಿಸಲು ಆಗ್ರಹಿಸಿ ನಾಲ್ಕು ದಿನಗಳ ಹಿಂದೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾಗ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ ಗ್ರಾಮಕ್ಕೆ ಭೇಟಿ ನೀಡಿದ್ದರು. ಕೂಡಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೂ, ಪ್ರಯೋಜನವಾಗದ ಕಾರಣ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗಿದೆ’ ಎಂದು ಹೇಳಿದರು.

ಜನವಾಡ ಪಿಎಸ್‍ಐ ಹಾಗೂ ಪಂಚಾಯಿತಿ ಕಾರ್ಯದರ್ಶಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದ್ದಾರೆ. ಶೀಘ್ರ ಕುಡಿಯುವ ನೀರಿನ ವ್ಯವಸ್ಥೆ ಆಗದಿದ್ದರೆ ಮತ್ತೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮದ ಪ್ರಮುಖರಾದ ಸುಭಾಷ ಪಾಟೀಲ, ದಿಗಂಬರ ಪಾಟೀಲ, ಉಮೇಶ ಬಿರಾದಾರ, ಶ್ರೀಮಂತ ಪಾಟೀಲ, ಧನರಾಜ ಪಾಟೀಲ, ಹಣಮಂತರಾವ್ ರೊಡ್ಡಾ, ಶಿವರಾಜ ಕೋಳಿ, ಗಣಪತಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT