ಶನಿವಾರ, ಮೇ 21, 2022
25 °C
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಸಲಹೆ

ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ಸಂಸ್ಕಾರ ನೀಡಬೇಕು. ದೇಶದ ಭಾವಿ ನಾಗರಿಕರನ್ನು ರೂಪಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ ಸಲಹೆ ನೀಡಿದರು.

ನಗರದ ಗುಮ್ಮೆ ಕಾಲೊನಿಯ ಹನುಮಾನ ಮಂದಿರ ಸಮೀಪ ಶ್ರೀ ವೈಷ್ಣೋದೇವಿ ಕಲ್ಚರಲ್ ಮತ್ತು ಚಾರಿಟಬಲ್ ಟ್ರಸ್ಟ್, ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ನಡೆದ ‘ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಕುಟುಂಬ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮಹಿಳೆಯರು ಸ್ವಸ್ಥ ಸಮಾಜ ನಿರ್ಮಾಣದಲ್ಲೂ ಮಹತ್ವದ ಪಾತ್ರ ವಹಿಸುತ್ತಾರೆ’ ಎಂದರು.

ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಮಾತನಾಡಿ, ‘ಹೆಣ್ಣು ಮಕ್ಕಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಅಕ್ಕಮಹಾದೇವಿ ಮಹಿಳಾ ಭಜನೆ ಸಂಘವನ್ನು ಹುಟ್ಟು ಹಾಕಲಾಗಿದೆ. ಶ್ರೀ ವೈಷ್ಣೋದೇವಿ ಚಾರಿಟಬಲ್ ಟ್ರಸ್ಟ್‌ ವಿಚಾರ ಸಂಕಿರಣಗಳನ್ನು ಆಯೋಜಿಸಿ ಮಹಿಳೆಯರಲ್ಲಿ ಇನ್ನಷ್ಟು ಧೈರ್ಯ ತುಂಬುವ ಕೆಲಸ ಮಾಡುತ್ತಿದೆ’ ಎಂದು ಕೊಂಡಾಡಿದರು.

ಪ್ರೊ.ವಿಜಯಲಕ್ಷ್ಮಿ ಗಡ್ಡೆ ಮಾತನಾಡಿ, ‘ಅನೇಕ ಮಹಿಳೆಯರು ಧಾರಾವಾಹಿಗಳ ವೀಕ್ಷಣೆಗಾಗಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದಾರೆ. ಟಿವಿ ನೋಡುವುದು ತಪ್ಪಲ್ಲ. ಆದರೆ, ಅದೇ ಚಟವಾಗಬಾರದು. ಮಹಿಳೆಯರು ಓದಿನಲ್ಲಿ ತೊಡಗಿಸಿಕೊಂಡರೆ ಮಕ್ಕಳು ಸಹ ಅಧ್ಯಯನಶೀಲರಾಗುತ್ತಾರೆ. ಮಕ್ಕಳಿಗೆ ತಾಯಂದಿರು ಮಾದರಿಯಾಗಬೇಕು’ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿ, ‘ಇಂದಿನ ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದೆ ಉಳಿದಿಲ್ಲ. ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮಸ್ಥೈರ್ಯ ಬೆಳೆಯುವಂತೆ ಮಾಡುತ್ತವೆ. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತವೆ’ ಎಂದು ಹೇಳಿದರು.

ಸಾಹಿತಿ ಎಂ.ಜಿ. ದೇಶಪಾಂಡೆ ಮಾತನಾಡಿ, ‘ಇಂದಿನ ಮಹಿಳೆಯರಿಗೆ ಕುಟುಂಬ ನಿರ್ವಹಣೆಯ ಮಾರ್ಗದರ್ಶನದ ಅಗತ್ಯವಿದೆ. ಹೊಸದಾಗಿ ಮದುವೆಯಾದವರು ಹೊಂದಾಣಿಕೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ ಮಾಡಿಕೊಂಡು ವಿಚ್ಛೇದನದ ಹಾದಿ ಹಿಡಿಯುವುದು ನಿಲ್ಲಬೇಕು’ ಎಂದರು.
ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರು ಹಾಸ್ಯ ಚಟಾಕಿಗಳ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು. ಶ್ರೀ ವೈಷ್ಣೋದೇವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂಗಮೇಶ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಅಕ್ಕಮಹಾದೇವಿ ಮಹಿಳಾ ಭಜನೆ ಮತ್ತು ಸಂಸ್ಕೃತಿ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪೇಟಾ ತೊಡಿಸಿ ಸಂಘವನ್ನು ಇನ್ನಷ್ಟು ಬಲಪಡಿಸುವ ಕುರಿತು ಪ್ರತಿಜ್ಞೆ ಮಾಡಿಸಿದರು.

ಪಾಂಡುರಂಗ ಪಾಂಚಾಳ, ಮಹೇಶ ಮಜಗೆ, ಸಂತೋಷ ಬೆಲ್ದಾಳೆ, ರಾಜಕುಮಾರ ಕಾಡವಾದ, ದೀಪಕ ಗಾದಗಿ, ಗುರುನಾಥ ಬಿರಾದಾರ ಇದ್ದರು. ಕಿರಣ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು. ಸಿದ್ರಾಮಯ್ಯ ಸ್ವಾಮಿ ಹಿರೇಮಠ ನಿರೂಪಿಸಿದರು. ಸುಭಾಷ ಬಿರಾದಾರ ಸ್ವಾಗತಿಸಿದರು. ಗೀತಾ ಪಾಟೀಲ ವಂದಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.