ಶುಕ್ರವಾರ, ಅಕ್ಟೋಬರ್ 22, 2021
21 °C
ರಾಜ್ಯದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯ

ಕ್ರೈಸ್ತರ ಪ್ರತಿಭಟನಾ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ರಾಜ್ಯದಲ್ಲಿ ಕ್ರೈಸ್ತರ ಮೇಲಿನ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರಿಗೆ ಸಲ್ಲಿಸಿದರು.

ಸಂವಿಧಾನದ ಪ್ರಕಾರ ದೇಶದ ಪ್ರತಿ ಪ್ರಜೆ ಯಾವುದೇ ಧರ್ಮ ಸ್ವೀಕರಿಸುವ, ಆಚರಿಸುವ ಹಾಗೂ ಪ್ರಚಾರ ಮಾಡುವ ಹಕ್ಕು ಹೊಂದಿದ್ದಾನೆ. ಇದನ್ನು ಮೊಟಕುಗೊಳಿಸಲು ಕೆಲ ಹಿಂದೂ ಪರ ಸಂಘಟನೆಗಳು ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಹಾಗೂ ಕ್ರೈಸ್ತರ ಮೇಲೆ ಹಲ್ಲೆ ನಡೆಸುತ್ತಿವೆ ಎಂದು ಆರೋಪಿಸಿದರು.

ಸುಮಾರು ವರ್ಷಗಳಿಂದ ಕ್ರೈಸ್ತರ ಮೇಲೆ ದಾಳಿಗಳು ನಡೆಯುತ್ತಿದ್ದರೂ ಸರ್ಕಾರ, ಅಧಿಕಾರಿಗಳು ಮೂಕ ಪ್ರೇಕ್ಷಕರಾಗಿದ್ದಾರೆ. ರಕ್ಷಣೆ ಕೊಡಬೇಕಾದ ಪೊಲೀಸರೇ ಸುಮ್ಮನಿದ್ದರೆ ನ್ಯಾಯಕ್ಕಾಗಿ ಯಾರ ಬಳಿ ಹೋಗಲು ಸಾಧ್ಯ ಎಂದು ಕೇಳಿದರು.

ಕೆಲ ಸಮಾಜ ಘಾತುಕ ವ್ಯಕ್ತಿಗಳು ಹಾಗೂ ಸಂಘಟನೆಗಳು ಒತ್ತಾಯದ ಮತಾಂತರದ ಬಣ್ಣ ಬಳಿದು ಅಮಾಯಕ ದೈವ ಸೇವಕರು ಹಾಗೂ ಅವರ ಕುಟುಂಬದವರ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಶಾಸಕ ಗೂಳಿಹಟ್ಟಿ ಶೇಖರ್ ಅವರು ಮತಾಂತರಗೊಂಡಿದ್ದಾರೆಂದು ತನ್ನ ಸ್ವಂತ ತಾಯಿಯನ್ನೇ ವಿಧಾನಸಭೆಯಲ್ಲಿ ಅವಮಾನಿಸುವುದು ಎಷ್ಟರ ಮಟ್ಟಿಗೆ ಸರಿ. ಶಾಸಕರೇ ಸುಳ್ಳು ಮತಾಂತರ ವಿಷಯ ಪ್ರಸ್ತಾಪಿಸಿ ಧರ್ಮದ ವಿಷ ಬೀಜ ಬಿತ್ತುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪ್ರಮೋದ್ ಮುತಾಲಿಕ್ ಅವರು ಬೀದರ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕ್ರೈಸ್ತರು ಹಾಗೂ ಪರಿಶಿಷ್ಟ ಜಾತಿಯ ಮಾದಿಗ ಸಮಾಜದವರ ಕುರಿತು ಬಳಸಿದ ಶಬ್ದಗಳನ್ನು ಖಂಡಿಸಲಾಗುತ್ತದೆ. ಅಂಥ ಶಬ್ದಗಳನ್ನು ನಿರ್ಬಂಧಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ನೆಲಸಮಗೊಳಿಸಲಾದ ಚರ್ಚ್‍ಗಳನ್ನು ಪುನರ್ ನಿರ್ಮಾಣ ಮಾಡಿಕೊಡಲು ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿದರು.

ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಭಾಸ್ಕರ್ ಬಾಬು ಪಾತರಪಳ್ಳಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜಯ್ ಜಾಗೀರದಾರ್, ಮುಖಂಡರಾದ ರಾಜೇಶ ಜ್ಯೋತಿ, ಸ್ಯಾಮಸನ್ ಹಿಪ್ಪಳಗಾಂವ್, ಪ್ರಕಾಶ ಕೋಟೆ, ಸುಧಾಕರ ಡೋಣೆ, ಸಾಲೋಮನ್ ಟಿ. ಮರ್ಜಾಪುರ, ಸುನೀಲ್ ಹಿರೇಮನಿ, ರಾಜಕುಮಾರ ಬರ್ಮ, ದಶರಥ ಮೀಸೆ, ಸುಂದರರಾಜ್ ಫಿರಂಗೆ, ರಾಜಕುಮಾರ ಸಿ., ಮಾಣಿಕ ಕೌಠಾ, ದತ್ತು ಸೋನೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು