ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಧಾರ್ಮಿಕ ಕಟ್ಟಡ ತೆರವುಗೊಳಿಸಿ: ಜಿಲ್ಲಾಧಿಕಾರಿ ಸೂಚನೆ

Last Updated 11 ಮಾರ್ಚ್ 2021, 15:47 IST
ಅಕ್ಷರ ಗಾತ್ರ

ಬೀದರ್: ಸಾರ್ವಜನಿಕ ರಸ್ತೆ, ಉದ್ಯಾನ ಹಾಗೂ ಇತರ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳ ಗುರುತಿಸುವಿಕೆ, ತೆರವು ಹಾಗೂ ಸ್ಥಳಾಂತರ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಶೀಲ್ದಾರರೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

ರಸ್ತೆಗಳು, ಸಾರ್ವಜನಿಕ ಸ್ವತ್ತು, ಜನ ನಿತ್ಯ ಓಡಾಡುವ ರಸ್ತೆಗಳಲ್ಲಿ ಅನುಮತಿ ಪಡೆಯದ ಧಾರ್ಮಿಕ ಕಟ್ಟಡಗಳು ಇರಕೂಡದು ಎನ್ನುವ ನಿಯಮ ಪಾಲನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅನಧಿಕೃತವಾಗಿ ಧಾರ್ಮಿಕ ಕಟ್ಟಡ, ಪ್ರತಿಮೆಗಳನ್ನು ನಿರ್ಮಿಸಿದ್ದರೆ ಅವನ್ನು ತೆರವುಗೊಳಿಸಲು ಮೊದಲು ನೋಟಿಸ್ ನೀಡಬೇಕು. ಆದರೂ ಸಂಬಂಧಿಸಿದವರು ತೆರವಿಗೆ ಮುಂದಾಗದಿದ್ದಲ್ಲಿ ಎರಡನೇ ನೋಟಿಸ್ ಕೊಟ್ಟು, ಅನಂತರ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.

ಗ್ರಾಮೀಣ ಭಾಗದಲ್ಲಿಯೂ ಈ ಕಾರ್ಯಾಚರಣೆ ನಡೆಯಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ನಿರೀಕ್ಷಕ, ಇತರ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಧಾರ್ಮಿಕ ಕಟ್ಟಡ ಮತ್ತು ಪ್ರತಿಮೆಗಳ ತೆರವು ಕಾರ್ಯಾಚರಣೆ ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಧಾರ್ಮಿಕ ಕಟ್ಟಡ ಮತ್ತು ಪ್ರತಿಮೆಗಳು ರಸ್ತೆಗಳಲ್ಲಿ ಇರಬಾರದು ಎನ್ನುವುದು ನಮ್ಮ ಉದ್ದೇಶವಲ್ಲ. ಆದರೆ, ಜನ ಸಂಚಾರಕ್ಕೆ ತೊಂದರೆ ಉಂಟು ಮಾಡುವ ಮತ್ತು ಅನಧಿಕೃತವಾಗಿ ನಿರ್ಮಿಸಿದ ಕಾರಣಕ್ಕೆ ತೆರವು ಮಾಡಲಾಗುತ್ತಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಯಾವುದೇ ರಸ್ತೆಯಲ್ಲಿ ಧಾರ್ಮಿಕ ಕಟ್ಟಡಗಳು ಯೋಗ್ಯ ರೀತಿಯಲ್ಲಿ ನಿರ್ಮಾಣವಾಗಿದ್ದರೆ, ರಸ್ತೆಯ ಸಂಚಾರಕ್ಕೆ ಆಡಚಣೆ ಇಲ್ಲದಿದ್ದರೆ ಅಂತಹವುಗಳನ್ನು ಅಧಿಕೃತಗೊಳಿಸಲು ಕೂಡ ಅವಕಾಶ ಇದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಉಪ ವಿಭಾಗಾಧಿಕಾರಿಗಳಾದ ಗರಿಮಾ ಪನ್ವಾರ್, ಭುವನೇಶ ಪಾಟೀಲ, ತಹಶೀಲ್ದಾರ್ ಗಂಗಾದೇವಿ ಸಿ.ಎಚ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಪುತೋಡೋ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT