ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಯಿಂದ ಹಾಳಾದ ಬೆಳೆಗೆ ಪರಿಹಾರ ನೀಡಿ: ಕೋಡಿಹಳ್ಳಿ ಚಂದ್ರಶೇಖರ ಆಗ್ರಹ

Last Updated 21 ಆಗಸ್ಟ್ 2020, 10:30 IST
ಅಕ್ಷರ ಗಾತ್ರ

ಭಾಲ್ಕಿ: ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಳಾದ ಹೆಸರು ಸೇರಿದಂತೆ ಇತರ ಬೆಳೆಗಳಿಗೆ ಸರ್ಕಾರ ಶೀಘ್ರದಲ್ಲಿ ಪರಿಹಾರ ನೀಡಿ ರೈತ ಸಮುದಾಯಕ್ಕೆ ಅನುಕೂಲಿಸಬೇಕು ಎಂದು ರೈತ ಸಂಘದ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿದರು.

ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳ ಪ್ರತಿಜ್ಞೆ ವಿಧಿ, ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ಉಳುವವನೇ ಭೂಮಿಯ ಒಡೆಯ ಎಂಬ ಪರಿಕಲ್ಪನೆಗೆ ತಿಲಾಂಜಲಿ ಇಟ್ಟು ಉಳ್ಳವರು ಮಾತ್ರ ಭೂಮಿ ಹೊಂದಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಸಣ್ಣ ಹಿಡುವಳಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ಬದುಕು ಬೀದಿಗೆ ಬೀಳಲಿದೆ. ರೈತಾಪಿ ಕೃಷಿ ಸಂಸ್ಕೃತಿ ಮಾಯವಾಗಿ ಬಂಡವಾಳಗಾರ ಕೃಷಿ ಸಂಸ್ಕೃತಿ ಬೆಳೆಯುತ್ತದೆ. ಹಾಗಾಗಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗೆ ತಗುಲುವ ವೆಚ್ಚ ಹೆಚ್ಚಿದ್ದು ಕಾರ್ಖಾನೆಗಳು ಎಫ್‍ಆರ್‍ಪಿ ದರವನ್ನು ಹೆಚ್ಚಿಸಬೇಕು. ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದರು. ಸರ್ಕಾರದ ರೈತ ವಿರೋಧಿಯ ಪ್ರತಿ ನಡೆಯನ್ನು ಸಂಘ ವಿರೋಧಿಸುತ್ತದೆ. ರೈತರಿಗೆ ಎಲ್ಲ ವಿಷಯಗಳಲ್ಲಿ ನ್ಯಾಯ ದೊರಕಿಸಿ ಕೊಡಲು ರಾಜ್ಯ ಮಟ್ಟದಿಂದ ಎಲ್ಲ ಹಂತದವರೆಗೆ ಹೋರಾಟ ಮಾಡಲು ಮುಂದಾಗಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ತತ್ವಗಳ ಅನುಸಾರ ನಡೆದುಕೊಳ್ಳುವಂತೆ ಪ್ರತಿಜ್ಞೆ ಬೋಧಿಸಲಾಯಿತು.

ನೂತನ ಪದಾಧಿಕಾರಿಗಳ ವಿವರ: ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ, ಶ್ರೀಮಂತ ಬಿರಾದರ ಕಾರ್ಯಾಧ್ಯಕ್ಷ, ದಯಾನಂದ ಸ್ವಾಮಿ ಪ್ರಧಾನ ಕಾರ್ಯದರ್ಶಿ, ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ಭತ್ತರಹಳ್ಳಿ ಭೈರೇಗೌಡ, ಕಾರ್ತಿಕ, ಶೇಷಾರಾವ್ ಕಣಜಿ, ಬಾಬುರಾವ್ ಜೊಳದಪಕೆ, ಸತ್ಯವಾನ ಪಾಟೀಲ, ರಮೇಶ ಮೊರ್ಗೆ, ಅಮೃತಪ್ಪಾ ಎಂ.ಪಿ., ಶಂಕರಪ್ಪ ಪಾರಾ, ವೈಜಿನಾಥಪ್ಪ ನೌಬಾದೆ ಇದ್ದರು. ಚಂದ್ರಶೇಖರ ಜಮಖಂಡಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣಾ ಕುಂಬಾರ ನಿರೂಪಿಸಿದರು. ಸತೀಶ ನನ್ನೂರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT