ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಬಂದ್, ರಸ್ತೆಗೆ ಬಾರದ ಜನ

ಮಾರುಕಟ್ಟೆಗೆ ಬೈಕ್‌, ಇತರೆ ವಾಹನ ತರುವಂತಿಲ್ಲ
Last Updated 11 ಮೇ 2021, 7:54 IST
ಅಕ್ಷರ ಗಾತ್ರ

ಚಿಟಗುಪ್ಪ: ಕೊರಾನಾ ಸೋಂಕು ಹರಡುವುದನ್ನು ತಡೆಯಲು ತಾಲ್ಲೂಕು ಆಡಳಿತವು ಸೋಮವಾರ ಸರ್ಕಾರದ ಆದೇಶದಂತೆ ಪಟ್ಟಣದೆಲ್ಲೆಡೆ ಕಟ್ಟೆಚ್ಚರ ವಹಿಸಿದ ಪರಿಣಾಮ ಸಾರ್ವಜನಿಕರು ಮನೆಬಿಟ್ಟು ಹೊರ ಬರಲಿಲ್ಲ. ಪಟ್ಟಣದಲ್ಲಿ ಕರ್ಪ್ಯೂ ವಾತಾವರಣ ಕಂಡುಬಂತು.

ಪುರಸಭೆಯು ಸಂತೆ, ಅಂಗಡಿ ಮುಂಗಟ್ಟು ಸ್ಥಗಿತಗೊಳಿಸಲು ಭಾನುವಾರ ಸಂಜೆಯೇ ಹೇಳಿತ್ತು. ಹೀಗಾಗಿ ಹಳ್ಳಿಗಳಿಂದ ತರಕಾರಿ ವ್ಯಾಪಾರಿಗಳು ಪಟ್ಟಣದತ್ತ ಸುಳಿಯಲಿಲ್ಲ. ಅಲ್ಲದೆ ಗಡಿ ಮಾರ್ಗದ ಕರಕನಳ್ಳಿ, ಕುಡಂಬಲ್‌ ಗ್ರಾಮದ ರಸ್ತೆ ಮೇಲೆ ಪೊಲೀಸರು ಚೆಕ್ಕ್‌ ಪೋಸ್ಟ್‌ ನಿರ್ಮಿಸಿ ತಪಾಸಣೆ ನಡೆಸಿದ್ದು ಪ್ರಭಾವ ಬೀರಿದೆ.

ನಿತ್ಯ ಕಿಕ್ಕಿರಿದು ತುಂಬಿರುತ್ತಿದ್ದ ಬಸವರಾಜ್‌ ವೃತ್ತದಿಂದ ಗಾಂಧಿ ವೃತ್ತದ ವರೆಗಿನ ಮಾರುಕಟ್ಟೆ ಪ್ರದೇಶ ದಿನವಿಡೀ ಬಿಕೋ ಎನ್ನುತ್ತಿತ್ತು.

‘ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೂ ನಾಗರಿಕರಿಗೆ ನಿತ್ಯದ ತರಕಾರಿ ಖರೀದಿಸಲು ತರಕಾರಿ ವ್ಯಾಪಾರಿಗಳಿಗೆ, ತಳ್ಳು ಗಾಡಿ ವರ್ತಕರಿಗೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿದ್ದರಿಂದ ಜನದಟ್ಟಣೆ ನಿಯಂತ್ರಿಸಲು ಸಾಧ್ಯವಾಯಿತು’ ಎಂದು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಮಹಾಂತೇಶ ತಿಳಿಸಿದ್ದಾರೆ.

‘ನಾಗರಿಕರಿಗೆ ನಡೆದುಕೊಂಡು ಮಾರುಕಟ್ಟೆಗೆ ಬರುವ ಆದೇಶ ಸರ್ಕಾರ ಹೊರಡಿಸಿದ್ದರಿಂದ ಶೇ 90ರಷ್ಟು ಕೋವಿಡ್‌ ಸೋಂಕು ತಡೆಯಲು ಅನುಕೂಲವಾಗಿದೆ’ ಎಂದು ತಹಶೀಲ್ದಾರ್‌ ಜಿಯಾವುಲ್ಲ, ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್‌ ರಾಜಪುರೋಹಿತ್‌ ನುಡಿಯುತ್ತಾರೆ.

‘ಲಾಕ್‌ಡೌನ್‌ ಸಂಪೂರ್ಣವಾಗಿ ಯಶಸ್ಸು ಪಡೆಯಲು ಹಾಗೂ ಕೋವಿಡ್‌ ನಿಯಂತ್ರಣಕ್ಕಾಗಿ ಪಟ್ಟಣದ ಬಸವರಾಜ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ವೃತ್ತ, ಮುಸ್ತರಿ ರಸ್ತೆ, ಬೆಳಕೇರಾ ರಸ್ತೆ, ಕೊಡಂಬಲ್‌ ರಸ್ತೆ, ಇಟಗಾ ರಸ್ತೆ, ಗಾಂಧಿ ವೃತ್ತ, ಭಾಸ್ಕರ್‌ ನಗರಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ’ ಎಂದು ಸಿಪಿಐ ಅಮೂಲ ಕಾಳೆ ತಿಳಿಸಿದ್ದಾರೆ.

ಬ್ಯಾರಿಕೇಡ್‌ ದಿಗ್ಬಂಧನ

ಚಿಟಗುಪ್ಪ ಪಟ್ಟಣದ ಅಷ್ಟದಿಕ್ಕುಗಳಿಗೆ ಪೊಲೀಸರು ಬ್ಯಾರಿಕೇಡ್‌ ಮೂಲಕ ದಿಗ್ಬಂಧನ ಹಾಕಿದ್ದಾರೆ.

‘ಪಟ್ಟಣದಲ್ಲಿ 14 ದಿನಗಳ ಕಾಲ ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ, ದಿನಸಿ ಪದಾರ್ಥಗಳನ್ನು ಮಾರಾಟ ಮಾಡಲು ಅವಕಾಶವಿದೆ ಹಾಗೂ ಮದ್ಯದಂಗಡಿಯಿಂದ ಪಾರ್ಸೆಲ್‌ ಒಯ್ಯಬಹುದು. ಬೆಳಿಗ್ಗೆ 10 ಗಂಟೆಯ ಬಳಿಕ ಓಡಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಹಶೀಲ್ದಾರ್‌ ಜಿಯಾವುಲ್ಲ ತಿಳಿಸಿದ್ದಾರೆ.

‘ತಳ್ಳುಗಾಡಿಗಳ ತರಕಾರಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಿ ವಾರ್ಡ್‌ವಾರು ತರಕಾರಿ ಮಾರಾಟಕ್ಕೆ ಅವಕಾಶ ನೀಡಲಾಗು ವುದು. ನಾಗರಿಕರು ತಮ್ಮ ಮನೆಗಳ ಮುಂದೆಯೇ ಹಣ್ಣು–ತರಕಾರಿಗಳನ್ನು ಖರೀದಿಸಬಹುದು. ಆಸ್ಪತ್ರೆಗೆ ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ಸಂಚಾರಕ್ಕೂ ಅವಕಾಶ ಇರುವುದಿಲ್ಲ. ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ’ ಎಂದರು.

‘ಪಟ್ಟಣದ ಬಸವರಾಜ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ವೃತ್ತ, ಮುಸ್ತರಿ ರಸ್ತೆ, ಬೆಳಕೇರಾ ರಸ್ತೆ, ಕೊಡಂಬಲ್‌ ರಸ್ತೆ, ಇಟಗಾ ರಸ್ತೆ, ಗಾಂಧಿ ವೃತ್ತ, ಭಾಸ್ಕರ್‌ ನಗರಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀಪಾದ್‌ ರಾಜಪುರೋಹಿತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT