ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ಮಾದಿಗ ಸಮುದಾಯಕ್ಕೆ ಅನ್ಯಾಯ: ಫರ್ನಾಂಡಿಸ್‌ ಹಿಪ್ಪಳಗಾಂ

Published 1 ಮಾರ್ಚ್ 2024, 8:56 IST
Last Updated 1 ಮಾರ್ಚ್ 2024, 8:56 IST
ಅಕ್ಷರ ಗಾತ್ರ

ಬೀದರ್‌: ‘70 ವರ್ಷಗಳಿಂದ ಕಣ್ಮುಚ್ಚಿ ಕಾಂಗ್ರೆಸ್‌ ಪಕ್ಷಕ್ಕೆ ಮಾದಿಗ ಸಮುದಾಯದವರು ಮತ ಹಾಕುತ್ತ ಬಂದಿದ್ದಾರೆ. ಆದರೆ, ಪಕ್ಷ ಎಲ್ಲದರಲ್ಲೂ ಸಮುದಾಯಕ್ಕೆ ಅನ್ಯಾಯ ಮಾಡುತ್ತ ಬರುತ್ತಿದೆ’ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಫರ್ನಾಂಡಿಸ್‌ ಹಿಪ್ಪಳಗಾಂವ ಆರೋಪಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಸಮುದಾಯದ ಒಬ್ಬರಿಗೂ ಪಕ್ಷದಿಂದ ಟಿಕೆಟ್‌ ನೀಡಿರಲಿಲ್ಲ. ವಿಧಾನ ಪರಿಷತ್‌ನಲ್ಲೂ ಅವಕಾಶ ಕೊಡಲಿಲ್ಲ. ಈಗ ನಿಗಮ, ಮಂಡಳಿಯಲ್ಲೂ ಸ್ಥಾನ ಕೊಟ್ಟಿಲ್ಲ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿದರು.

ಕಾಂಗ್ರೆಸ್‌ ಪಕ್ಷವು ನಿಗಮ, ಮಂಡಳಿಗಳ ನೇಮಕಾತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಪ್ರಾತಿನಿಧ್ಯ ಕೊಟ್ಟಿದೆ. ಆದರೆ, ಮಾದಿಗರನ್ನು ಕಡೆಗಣಿಸಿದೆ. ನಮ್ಮ ಸಮುದಾಯದ ಮತಗಳು ಬೇಕು. ಆದರೆ, ಅಧಿಕಾರ ಕೊಡುವುದಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಮಾದಿಗರಲ್ಲಿ ಸ್ವಾಭಿಮಾನ ಇದ್ದರೆ ಪಾಠ ಕಲಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಅವರ ಮಗ ಸಾಗರ್‌ ಖಂಡ್ರೆಯವರ ಫ್ಲೆಕ್ಸ್‌ಗಳನ್ನು ಜಿಲ್ಲೆಯಾದ್ಯಂತ ಹಾಕಿಸಿದ್ದಾರೆ. ಅದರಲ್ಲಿ ಕುರುಬರು, ಲಿಂಗಾಯತರು, ಪರಿಶಿಷ್ಟರು ಸೇರಿದಂತೆ ಇತರೆ ಸಮುದಾಯದ ಮುಖಂಡರ ಭಾವಚಿತ್ರಗಳನ್ನು ಹಾಕಿಸಿದ್ದಾರೆ. ಮಾದಿಗ ಸಮುದಾಯದ ಒಬ್ಬ ಮುಖಂಡನ ಭಾವಚಿತ್ರವೂ ಹಾಕಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಮಾದಿಗ ಸಮುದಾಯದಿಂದ ಹಿಂದಿನ ಸಲ ರಾಜ್ಯಸಭೆಗೆ ಎಲ್‌. ಹನುಮಂತಯ್ಯ ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಈ ಸಲ ಅವರಿಗೆ ಟಿಕೆಟ್‌ ಕೊಡಲಿಲ್ಲ. ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡಿದ್ದಾರೆ. ಮಾದಿಗರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಸಮಾರಂಭಕ್ಕೂ ಎಲ್ಲಾ ಸಮುದಾಯದವರನ್ನು ಆಹ್ವಾನಿಸಲಾಗಿತ್ತು. ಆದರೆ, ಮಾದಿಗರನ್ನು ಕಡೆಗಣಿಸಲಾಗಿತ್ತು ಎಂದು ದೂರಿದರು.

ಸಮಿತಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ, ಉಪಾಧ್ಯಕ್ಷ ಕಮಲಾಕರ ಎಲ್‌. ಹೆಗಡೆ, ಕಾರ್ಯಾಧ್ಯಕ್ಷರಾದ ದತ್ತಾತ್ರಿ ಜ್ಯೋತಿ, ಪೀಟರ್‌ ಚಿಟಗುಪ್ಪ, ಸಂಘಟನಾ ಕಾರ್ಯದರ್ಶಿ ಜೈಶೀಲ್‌ ಕಲವಾಡೆ, ಪ್ರಮುಖರಾದ ವೀರಾಶೆಟ್ಟಿ, ರವಿ ಸೂರ್ಯವಂಶಿ, ಓಂಕಾರ ನೂರೆ, ದೀಪಕ್‌, ಲಾಲಪ್ಪ ನಿರ್ಣಾ, ದಯಾನಂದ ರೇಕುಳಗಿ ಹಾಜರಿದ್ದರು.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ನಂತರ ಮಾದಿಗರನ್ನು ತುಳಿಯಲಾಗುತ್ತಿದೆ. ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಮಾದಿಗರ ಮತ ಪಡೆದು ಗೆದ್ದು, ಈಗ ಮಾದಿಗರ ನಿರ್ಲಕ್ಷಿಸುತ್ತಿದ್ದಾರೆ.
–ಫರ್ನಾಂಡಿಸ್‌ ಹಿಪ್ಪಳಗಾಂವ, ರಾಜ್ಯ ಕಾರ್ಯಾಧ್ಯಕ್ಷ, ಮಾದಿಗರ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT