ಬುಧವಾರ, ಜೂನ್ 23, 2021
28 °C
ಕೊರೊನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ

ಬೀದರ್‌: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಡೆದ ಅವ್ಯವಹಾರದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರ ನೇತೃತ್ವದಲ್ಲಿ ಶಿವನಗರದಲ್ಲಿ ಇರುವ ಪಕ್ಷದ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ರಾಜ್ಯ ಸರ್ಕಾರವು ಕೊರೊನಾ ನಿಯಂತ್ರಣಕ್ಕೆ 8 ಇಲಾಖೆಗಳಿಂದ ಈವರೆಗೆ ₹ 4,167 ಕೋಟಿ ಬಿಡುಗಡೆ ಮಾಡಿದೆ. ಸರ್ಕಾರ ಖರೀದಿಸಿರುವ ಸಾಮಗ್ರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ದೂರಿದರು.

ವೆಂಟಲೇಟರ್ಸ್, ಪಿಪಿಇ ಕಿಟ್, 500 ಎಂ.ಎಲ್. ಹ್ಯಾಂಡ್ ಸ್ಯಾನಿಟೈಸರ್, ಆರ್.ಟಿ., ಡಿ.ಸಿ.ಆರ್., ಆರ್.ಎನ್.ಎ. ಕಿಟ್, ಎನ್. 95 ಮಾಸ್ಕ್, ಆಕ್ಸಿಜನ್ ಉಪಕರಣ, ಆಕ್ಸಿಜನ್ ಸಿಲಿಂಡರ್, ಧರ್ಮಲ್ ಸ್ಕ್ಯಾನರ್ಗಳ ಖರೀದಿಯಲ್ಲಿ ಭ್ರಷ್ಟಾಚಾರ ಎಸಗಲಾಗಿದೆ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದರೂ ಸಾಮಗ್ರಿಗಳಿಗೆ ದುಬಾರಿ ದರ ನೀಡಲಾಗಿದೆ. ಕೆಲ ಸಾಮಗ್ರಿಗಳು ಸರಬರಾಜು ಆಗದಿದ್ದರೂ ಹಣ ಪಾವತಿಸಲಾಗಿದೆ. ಇನ್ನು ಸರಬರಾಜು ಆಗಿರುವ ಸಾಮಗ್ರಿಗಳು ಕಳಪೆಯಾಗಿವೆ. ಕೊರೊನಾ ನಿಯಂತ್ರಣದಲ್ಲಿ ₹2 ಸಾವಿರ ಕೋಟಿಯಷ್ಟು ಹಣ ಹೆಚ್ಚಿಗೆ ಪಾವತಿಸಿ ಅವ್ಯವಹಾರ ನಡೆಸಲಾಗಿದೆ ಎಂದು ದೂರಿದರು.

ರಾಜ್ಯ ಉಚ್ಚ ನ್ಯಾಯಾಲಯದ ಒಬ್ಬರು ಹಾಲಿ ನ್ಯಾಯಾಧೀಶರಿಂದ ಭ್ರಷ್ಟಾಚಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿಯಾಗಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ, ಕೈಗಾರಿಕಾ ವಿವಾದಗಳ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆ ವಾಪಸ್ ಪಡೆಯಬೇಕು. ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದ್ದು, ಕಳೆದ ವರ್ಷ ಘೋಷಿಸಿದ ಪರಿಹಾರ ಮೊತ್ತ, ಎಷ್ಟು ಜನರಿಗೆ ವಿತರಿಸಲಾಗಿದೆ, ಎಷ್ಟು ಮನೆಗಳನ್ನು ಕಟ್ಟಲಾಗಿದೆ, ಎಷ್ಟು ಕೃಷಿಕರಿಗೆ ಪರಿಹಾರ ನೀಡಲಾಗಿದೆ ಎನ್ನುವ ಲೆಕ್ಕ ಕೊಡಬೇಕು ಎಂದು ಆಗ್ರಹಿಸಿದರು.

ಎಐಸಿಸಿ ಸದಸ್ಯ ಆನಂದ ದೇವಪ್ಪ, ಮುಖಂಡರಾದ ಅಮೃತರಾವ್ ಚಿಮಕೋಡೆ, ಶಂಕರ ದೊಡ್ಡಿ, ರೋಹಿದಾಸ್ ಘೋಡೆ, ಪ್ರದೀಪ ಕುಶನೂರ್, ಪರ್ವೇಜ್ ಕಮಲ್, ಶಿವರಾಜ ಹಾಸನಕರ್, ಅಬ್ದುಲ್ ಮನ್ನಾನ್ ಸೇಠ್, ಶಂಕರ ರೆಡ್ಡಿ, ಸಂಜಯ ಜಾಗೀರದಾರ್, ಚಂದ್ರಕಾಂತ ಹಿಪ್ಪಗಾಂವ್, ಮಹಮ್ಮದ್ ಯುಸೂಫ್, ಡಿ.ಕೆ. ಸಂಜುಕುಮಾರ ಪಾಲ್ಗೊಂಡಿದ್ದರು.

ಜಯಂತಿ ಆಚರಣೆ: ಇದಕ್ಕೂ ಮುನ್ನ ನಗರದ ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜಯಂತಿ ಆಚರಿಸಲಾಯಿತು.

ಕಮಠಾಣದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಜನವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ಮತ್ತು ರೈತ ವಿರೋಧಿ ನೀತಿಗಳನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೀದರ್ ತಾಲ್ಲೂಕಿನ ಕಮಠಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಾಡ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ನಾಡ ತಹಶೀಲ್ದಾರ್ ಶ್ರೀನಿವಾಸ ಅವರಿಗೆ ಸಲ್ಲಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು. ಕೊರೊನಾ ನಿಯಂತ್ರಣದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಚನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ, ಪಕ್ಷದ ಕಾರ್ಮಿಕ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕರೀಂಸಾಬ್ ಕಮಠಾಣ, ಉಪಾಧ್ಯಕ್ಷ ರಮೇಶ ಹೌದಖಾನಿ, ಸಾಮಾಜಿಕ ಜಾಲತಾಣ ಸಂಚಾಲಕ ಲೋಕೇಶ ಕನಶೆಟ್ಟಿ, ಅಜ್ಮತ್ ಅಲ್ಲೂರಿ, ಸಾಯಿನಾಥ ತೇಗಂಪುರ, ಇಮ್ಯಾನುವೆಲ್ ಮಂದಕನಳ್ಳಿ, ಖಾಲೇದ್, ಖಮರ್, ರಾಜು, ಸತೀಶ ವರ್ಮಾ, ಪ್ರಶಾಂತ ಜೈನ್, ಖಲೀಲಮಿಯಾ ಮೊದಲಾದವರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು