ಬೀದರ್: ಕರ್ತವ್ಯನಿರತ ಮಹಿಳಾ ಠಾಣೆ ಪಿಎಸ್‌ಐ ಮಲ್ಲಮ್ಮ ಎಂಬವರ ಮೇಲೆ ಹಲ್ಲೆ ನಡೆಸಿದ ಇಲ್ಲಿನ ನ್ಯೂಟೌನ್ ಠಾಣೆ ಕಾನ್‌ಸ್ಟೆಬಲ್ ಧನರಾಜ್ ಎಂಬಾತನನ್ನು ಭಾನುವಾರ ಅಮಾನತುಗೊಳಿಸಲಾಗಿದೆ.
‘ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಭಾನುವಾರ ಕನ್ನಡ ಕಡ್ಡಾಯ ಪರೀಕ್ಷೆ ಇತ್ತು. ಮಾಧವ ನಗರದ ಆರ್.ಆರ್.ಕೆ. ಕಾಲೇಜಿನ ಪರೀಕ್ಷಾ ಕೇಂದ್ರದ ಬಂದೋಬಸ್ತ್‌ನ ಮೇಲುಸ್ತುವಾರಿಯಾಗಿ ಪಿಎಸ್‌ಐ ಮಲ್ಲಮ್ಮ ನಿಯೋಜನೆಗೊಂಡಿದ್ದರು. ಅದೇ ಪರೀಕ್ಷಾ ಕೇಂದ್ರಕ್ಕೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಕಾನ್‌ಸ್ಟೆಬಲ್ ಧನರಾಜ್ ನಿಗದಿತ ಸಮಯಕ್ಕಿಂತ ಸಾಕಷ್ಟು ವಿಳಂಬ ಮಾಡಿ ಕೇಂದ್ರಕ್ಕೆ ಬಂದಿದ್ದ. ಇದನ್ನು ಮಲ್ಲಮ್ಮ ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಕಾನ್‌ಸ್ಟೆಬಲ್ ಹಲ್ಲೆ ನಡೆಸಿದ್ದು, ಅಶಿಸ್ತಿನ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ಕೆಲಸಕ್ಕೆ ವಿಳಂಬ ಮಾಡಿ ಬಂದಿರುವುದನ್ನು ಕಾನ್‌ಸ್ಟೆಬಲ್‌ಗೆ ಪ್ರಶ್ನಿಸಿದ್ದಕ್ಕೆ ಮೇಲಧಿಕಾರಿ ಹಾಗೂ ಮಹಿಳೆ ಎಂಬುದನ್ನು ನೋಡದೇ ನನ್ನ ಶರ್ಟ್ ಹಾಗೂ ಕುತ್ತಿಗೆಯ ಭಾಗಕ್ಕೆ ಹಿಡಿದು ಬೇವಿನ ಮರಕ್ಕೆ ಗುದ್ದಿದ್ದಾನೆ. ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬ್ಲಡ್ ಕ್ಲಾಟ್ ಆಗಿದೆ ಎಂದು ಎಕ್ಸ್‌ರೇಯಿಂದ ಗೊತ್ತಾಗಿದೆ. ಬ್ರಿಮ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳುತ್ತಿದ್ದೇನೆ’ ಎಂದು ಬ್ರಿಮ್ಸ್‌ನಲ್ಲಿ ದಾಖಲಾಗಿದ್ದ ಮಲ್ಲಮ್ಮ ತಿಳಿಸಿದ್ದಾರೆ.