ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

371 (ಜೆ) ವಿರೋಧಿಸಿದರೆ ಸಂವಿಧಾನ ವಿರೋಧಿಸಿದಂತೆ: ಲಕ್ಷ್ಮಣ ದಸ್ತಿ

'ಪ್ರತ್ಯೇಕ ರಾಜ್ಯದ ಕುತಂತ್ರದ ಹಿಂದೆ ದೊಡ್ಡ ಶಕ್ತಿ ಕೈವಾಡ'
Published 14 ಜೂನ್ 2024, 16:12 IST
Last Updated 14 ಜೂನ್ 2024, 16:12 IST
ಅಕ್ಷರ ಗಾತ್ರ

ಬೀದರ್‌: ‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371(ಜೆ) ಕಲಂ ವಿರೋಧಿಸಿದರೆ ಸಂವಿಧಾನವನ್ನು ವಿರೋಧಿಸಿದಂತೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದರು.

ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಎಲ್ಲದರಲ್ಲೂ ಅತಿ ಹಿಂದುಳಿದಿದೆ ಎಂಬ ಕಾರಣಕ್ಕಾಗಿ ಈ ಭಾಗದವರನ್ನು ಮುಖ್ಯವಾಹಿನಿಗೆ ತರಲು ಸಂವಿಧಾನದ 371(ಜೆ) ಪ್ರಕಾರ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. 2013ರಲ್ಲಿ ತಿದ್ದುಪಡಿ ಆಗಿದ್ದು, ಈಗ ಹತ್ತು ವರ್ಷ ಪೂರೈಸಿದೆ. ಈಗಷ್ಟೇ ಈ ಭಾಗದ ಜನರಿಗೆ ಅದರ ಪ್ರಯೋಜನ ಸಿಗುತ್ತಿದೆ. ಆದರೆ, ಬೆಂಗಳೂರಿನ ಹಸಿರು ಪ್ರತಿಷ್ಠಾನ ಎಂಬ ಸಂಸ್ಥೆ ಹಾಗೂ ಕೆಲವರು 371(ಜೆ) ವಿರೋಧಿಸುತ್ತಿದ್ದಾರೆ. ಇದರ ಹಿಂದೆ ಪ್ರತ್ಯೇಕ ರಾಜ್ಯದ ಕುತಂತ್ರ ಇದೆ. ದೊಡ್ಡ ಶಕ್ತಿಗಳ ಕೈವಾಡ ಇದರ ಹಿಂದಿದೆ ಎಂದು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

371(ಜೆ) ಮುಂದುವರೆದರೆ ಕಲ್ಯಾಣ ಕರ್ನಾಟಕ ಭಾಗದವರು ಎಲ್ಲ ಹುದ್ದೆಗಳಲ್ಲಿ ಸೇರುತ್ತಾರೆ. 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಶಕ್ತಿಗಳ ಕೈವಾಡ ಇದೆ. ಕಲ್ಯಾಣ ಕರ್ನಾಟಕಕ್ಕೆ 371(ಜೆ) ಕೊಟ್ಟಿದ್ದು ಭಿಕ್ಷೆಯಲ್ಲ. ಅದು ಸಂವಿಧಾನಬದ್ಧವಾದ ಹಕ್ಕು. 371(ಜೆ) ವಿರೋಧಿಸುವವರು ಸಂವಿಧಾನ ವಿರೋಧಿಸುವ ದೇಶದ್ರೋಹಿಗಳು ಒಂದೇ. ಎಸ್ಸಿ/ಎಸ್ಟಿ ಮೀಸಲಾತಿ ಹೇಗೆ ಸಂವಿಧಾನಬದ್ಧವಾಗಿ ದೊರೆತಿದೆಯೋ ಅದೇ ರೀತಿ 371 ಕಲಂ ಕೂಡ. 371 ವಿರೋಧಿಸುತ್ತಿರುವವರ ವಿರುದ್ಧ ಈಗಾಗಲೇ ಕಲಬುರಗಿ, ಸಿಂಧನೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗಿದೆ. ಬೀದರ್‌ನಲ್ಲೂ ಬರುವ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಚಳವಳಿ ನಡೆಸಲಾಗುವುದು ಎಂದು ತಿಳಿಸಿದರು.

ಈ ಹಿಂದೆ ನಮಗೆ ಹೈದರಾಬಾದ್‌ ರಾಜ್ಯ ಸೇರುವ ಅವಕಾಶ ಇತ್ತು. ಸೇರಿದರೆ ಬಹಳಷ್ಟು ಅನುಕೂಲವಾಗುತ್ತಿತ್ತು. ಆದರೆ, ನಮ್ಮ ಹಿರಿಯರು ವಿಶಾಲ ಕರ್ನಾಟಕ ಸೇರುವ ನಿರ್ಧಾರ ಕೈಗೊಂಡರು. ಯಾವ ಷರತ್ತು ಕೂಡ ಹಾಕಿರಲಿಲ್ಲ. ಕಾವೇರಿ ನದಿ ನೀರಿನ ವಿಚಾರ ಬಂದಾಗಲೆಲ್ಲಾ ನಾವು ಬೆಂಬಲಿಸಿದ್ದೇವೆ. ಕೃಷ್ಣಾ, ತುಂಗಭದ್ರಾ, ಗೋದಾವರಿ ವಿಚಾರದಲ್ಲಿ ದಕ್ಷಿಣದವರು ಒಮ್ಮೆಯೂ ಬೆಂಬಲಿಸಿಲ್ಲ. ಈಗ ನಮ್ಮ ಹಕ್ಕು ಕಸಿದುಕೊಳ್ಳಲು ಕುತಂತ್ರ ನಡೆಸುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಕಲ್ಯಾಣ ಕರ್ನಾಟಕವು ಇಡೀ ಜಗತ್ತಿಗೆ ವಚನ ಸಾಹಿತ್ಯ, ನ್ಯಾಯಶಾಸ್ತ್ರ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ ಕೊಟ್ಟಿದೆ. ಅಪಾರ ಖನಿಜ ಸಂಪನ್ಮೂಲ ಈ ಭಾಗ ಹೊಂದಿದೆ. ದಶಕಗಳ ಹೋರಾಟದ ಫಲವಾಗಿ, ಮಲ್ಲಿಕಾರ್ಜುನ ಖರ್ಗೆ, ಎನ್‌. ಧರ್ಮಸಿಂಗ್‌ ಸೇರಿದಂತೆ ಹಲವರ ಪ್ರಯತ್ನದಿಂದ 371(ಜೆ) ಸೌಲಭ್ಯ ದೊರೆತಿದೆ. ಒಟ್ಟು ನೌಕರಿಯಲ್ಲಿ ಶೇ 9ರಷ್ಟು ಜನ ಮಾತ್ರ ಈ ಭಾಗದವರಿದ್ದಾರೆ. ಈಗಷ್ಟೇ ಮೇಲೆ ಬರುತ್ತಿದ್ದೇವೆ. ನಮ್ಮ ಹಕ್ಕಿನ ವಿರುದ್ಧ ಮಾತಾಡಿದರೆ ನಾವು ಸುಮ್ಮನೆ ಕೂರಲ್ಲ. ನಾವೇನೂ ‘ಕಮಜೋರ್‌’ ಅಲ್ಲ. ಹೋರಾಟ ಮಾಡುವ ಶಕ್ತಿ ಬಸವಣ್ಣ ನಮಗೆ ಕೊಟ್ಟಿದ್ದಾನೆ ಎಂದು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದರು.

ರಾಜ್ಯ ಒಡೆಯುವ ಮಾತುಗಳನ್ನು ಆಡುತ್ತಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಕುರಿತು ಈ ಭಾಗದ ಸಚಿವರು, ಸಂಸದರು, ಶಾಸಕರು, ಶಿಕ್ಷಣ ಸಂಸ್ಥೆಗಳವರು, ಸಾರ್ವಜನಿಕರು ದನಿ ಎತ್ತಬೇಕು ಎಂದು ಒತ್ತಾಯಿಸಿದರು.

371(ಜೆ) ಸಮರ್ಪಕ ಜಾರಿಗೆ ಪ್ರತ್ಯೇಕ ಸಚಿವಾಲಯ ಮಾಡಬೇಕು. ಕೃಪಾಂಕ ಕೊಡಬೇಕು. ಕಲಬುರಗಿಯಲ್ಲಿ ಟ್ರಿಬ್ಯೂನಲ್‌ ಸ್ಥಾಪಿಸಬೇಕು. ವಿವಿಧ ಹುದ್ದೆಗಳಿಗೆ ನೇಮಕಗೊಂಡವರಿಗೆ ತಕ್ಷಣವೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಬಿ.ಸಿ. ಗುಲಶೆಟ್ಟಿ, ಮಾಜಿದ್‌ ದಾಗಿ, ಅಸ್ಲಂ ಚೌಂಗೆ, ಚಂದ್ರಶೇಖರ ಪಾಟೀಲ ಹುಚಕನಳ್ಳಿ, ವಿನಯ್‌ ಮಾಳಗೆ, ಅನಂತ ರೆಡ್ಡಿ, ರೋಹನ್‌ ಕುಮಾರ್‌, ಬಕ್ಕಪ್ಪ ಗೊಂಡ ಹಾಜರಿದ್ದರು.

‘ಶೋಷಣೆ ಸಹಿಸಲ್ಲ’

‘ದಕ್ಷಿಣದವರು ನಮ್ಮ ಮೇಲೆ ನಿರಂತರ ಶೋಷಣೆ ಮಾಡಬಹುದು ಎಂಬ ಭಾವನೆ ಹೊಂದಿದ್ದಾರೆ. ಆದರೆ ನಾವು ಶೋಷಣೆ ಮಾಡಿಸಿಕೊಳ್ಳುವವರಲ್ಲ. 371(ಜೆ) ನಮಗೆ ಧರ್ಮಾರ್ಥವಾಗಿ ಕೊಟ್ಟಿದ್ದಲ್ಲ. ಸಾಂವಿಧಾನಿಕ ಹಕ್ಕು’ ಎಂದು ಹೋರಾಟಗಾರ ಆರ್‌.ಕೆ. ಹುಡಗಿ ತಿಳಿಸಿದರು. ಹಸಿರು ಪ್ರತಿಷ್ಠಾನದ ಸುಳ್ಳು ಅಭಿಯಾನ ಸಂವಿಧಾನ ವಿರೋಧಿ ದೇಶ ವಿರೋಧಿಯಾದದ್ದು. ಇಂತಹ ಅಭಿಯಾನ ತಡೆಯಬೇಕು. ಯಾರೂ ಸಂವಿಧಾನದ ವಿರುದ್ಧ ಧ್ವನಿ ಎತ್ತದಂತೆ ತಡೆಯಬೇಕಿದೆ ಎಂದರು.

‘ಜನಪ್ರತಿನಿಧಿಗಳ ಬಹಿಷ್ಕರಿಸಿ’

‘371(ಜೆ) ವಿರುದ್ಧ ಮಾತನಾಡುತ್ತಿರುವವರ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಮಾತನಾಡಬೇಕು. ಹೋರಾಟದಲ್ಲಿ ಭಾಗವಹಿಸಬೇಕು. ಇಲ್ಲವಾದರೆ ಅವರನ್ನು ಜನ ಬಹಿಷ್ಕರಿಸಬೇಕು’ ಎಂದು ಡಾ. ಸಿ. ಆನಂದರಾವ್‌ ಹೇಳಿದರು. ನಾಗಲ್ಯಾಂಡ್‌ ಅಸ್ಸಾಂ ಸಿಕ್ಕಿಂ ಮಿಜೋರಂ ಅರುಣಾಚಲ ಪ್ರದೇಶ ಗೋವಾ ಗುಜರಾತ್‌ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಆ ಭಾಗದ ಹಿಂದುಳಿದ ಪ್ರದೇಶದವರಿಗೆ 371ರ ಕಲಂ ಪ್ರಕಾರ ವಿಶೇಷ ಸ್ಥಾನಮಾನ ನೀಡಲಾಗಿದೆ. ನಮಗೇನೂ ಹೊಸದಾಗಿ ಕೊಟ್ಟಿಲ್ಲ ಎಂದರು.

‘ನಾವೇಕೆ ಅವರಿಗೆ ಬೆಂಬಲಿಸಬೇಕು’

‘ನಮ್ಮ ಭಾಗದ ಯಾವ ರೈತರ ಹೋರಾಟವನ್ನು ಹಳೆ ಮೈಸೂರು ಭಾಗದವರು ಬೆಂಬಲಿಸುವುದಿಲ್ಲ. ನಾವೇಕೆ ಅವರಿಗೆ ಬೆಂಬಲಿಸಬೇಕು. ಈಗ ನಮ್ಮ ಹಕ್ಕು ಕಸಿದುಕೊಳ್ಳಲು ಮುಂದಾಗಿದ್ದಾರೆ. ಅದರ ವಿರುದ್ಧ ದೊಡ್ಡ ಹೋರಾಟದ ಅಗತ್ಯವಿದೆ’ ಎಂದು ಡಾ. ಅಶೋಕ್ ನಾಗೂರೆ ಹೇಳಿದರು. ಕಲ್ಯಾಣ ಕರ್ನಾಟಕವು ಕೈಗಾರಿಕೆ ಕೃಷಿ ಶಿಕ್ಷಣ ಹೀಗೆ ಎಲ್ಲದರಲ್ಲೂ ಹಿಂದುಳಿದಿದೆ. ಹೈದರಾಬಾದ್‌ ಸಮೀಪದಲ್ಲಿ ಇರುವುದರಿಂದ ಅನೇಕ ಸೌಲಭ್ಯಗಳು ನಮಗೆ ತಪ್ಪಿದೆ. ಸಾಕಷ್ಟು ಹೋರಾಟದ ನಂತರ 371(ಜೆ) ಸಿಕ್ಕಿದೆ. ಈಗ ಅದರ ಮೇಲೆ ಕಣ್ಣು ಹಾಕಿರುವುದು ಸರಿಯಲ್ಲ. ಅದನ್ನು ಉಳಿಸಿಕೊಳ್ಳುವ ಕೆಲಸ ಎಲ್ಲರೂ ಕೂಡಿ ಮಾಡಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT