‘ಕ್ರೈಸ್ತರ ಸಮಾಜ ಸೇವೆ ಮತ್ತು ಜನಸೇವೆ ಅತ್ಯಂತ ದೊಡ್ಡದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಬೀದರ್ ಮಂಗಲಪೇಟ್‌ನ ಮೆಥೋಡಿಸ್ಟ್ ಚರ್ಚ್‌ಗೆ ಸೋಮವಾರ ಭೇಟಿ ನೀಡಿ ಪಾದ್ರಿ ಬಿಷಪ್ ಕರ್ಕರೆ ಹಾಗೂ ಅಲ್ಲಿ ಸೇರಿದವರೊಂದಿಗೆ ಮಾತನಾಡಿದ ಅವರು ‘ಆಸ್ಪತ್ರೆಗಳಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುವ ಕ್ರೈಸ್ತ ಧರ್ಮೀಯ ನರ್ಸ್‌ಗಳು ರೋಗಿಗಳಿಗೆ ಮಾಡುತ್ತಿರುವ ಸೇವೆ ಅನುಪಮವಾದದ್ದು. ಅದೇ ರೀತಿ ನೂರಾರು ಕ್ರೈಸ್ತ ಮಿಷನರಿಗಳು ಈ ಸಮಾಜದ ಏಳಿಗೆಗೆ ಉತ್ತಮ ಕೊಡುಗೆ ನೀಡಿವೆ. ಜನಸೇವೆಯ ಮೂಲಕ ಸಾರ್ಥಕತೆ ಪಡೆದಿವೆ. ಮದರ್ ತೆರೇಸಾ ಅವರು ಈ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಕನ್ನಡದ ಮೊಟ್ಟ ಮೊದಲ ನಿಘಂಟು ರಚಿಸಿದ ಫಾದರ್ ರೆವರೆಂಡ್ ಕಿಟೆಲ್ ಅವರು ಸಾಹಿತ್ಯ ಲೋಕಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಸೇವಾ ಮನೋಭಾವದಿಂದ ಕೆಲಸ ಮಾಡುವ ಈ ಸಮಾಜದ ಜನರು ಬೀದರ್‌ನಲ್ಲಿ ಸಹೋದರರಂತೆ ಬಾಳುತ್ತಿದ್ದಾರೆ’ ಎಂದರು. ಸಚಿವ ರಹೀಂ ಖಾನ್ ಹಾಜರಿದ್ದರು.