ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸಿ: ಸರ್ಕಾರಕ್ಕೆ ಗೊ.ರು.ಚನ್ನಬಸಪ್ಪ ಮನವಿ

Last Updated 21 ಸೆಪ್ಟೆಂಬರ್ 2019, 14:13 IST
ಅಕ್ಷರ ಗಾತ್ರ

ಬೀದರ್‌: ‘ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ಹಾಗೂ ಅಧ್ಯಯನಕ್ಕೆ ಬರುವವರಿಗೆ ಅನುಕೂಲವಾಗುವಂತೆ ಪ್ರವಾಸಿ ಮಂದಿರ ನಿರ್ಮಾಣ ಮಾಡಬೇಕು’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಸರ್ಕಾರಕ್ಕೆ ಮನವಿ ಮಾಡಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಆಶ್ರಯದಲ್ಲಿ ಆಯೋಜಿಸಿದ್ದ ‘ಗೊರುಚ ರಾಷ್ಟ್ರೀಯ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಹಾಗೂ ಜಿಲ್ಲಾ ಭಜನಾ ಉತ್ಸವದಲ್ಲಿ ಅವರು ಮಾತನಾಡಿದರು.

‘ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅನೇಕ ಬಾರಿ ಪತ್ರ ಬರೆದಿದ್ದೇನೆ. ಆದರೆ, ಅನುಭವ ಮಂಟಪ ನಿರ್ಮಾಣ ಕಾರ್ಯ ಆರಂಭವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿರುವುದು ಹಾಗೂ ನನ್ನ ಹೆಸರಿನಲ್ಲಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿ ಗೌರವಿಸಿರುವುದು ಖುಷಿ ಉಂಟು ಮಾಡಿದೆ. 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಜನಪದ ಉತ್ಸವದ ಯಶಸ್ವಿಗೆ ಪ್ರತಿಯೊಬ್ಬರೂ ಶ್ರಮಿಸೋಣ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಇಟಲಿಯ ಅಂತರರಾಷ್ಟ್ರೀಯ ಜನಪದ ಕಲಾ ಸಂಸ್ಥೆಯ ಭಾರತದ ರಾಷ್ಟ್ರೀಯ ಅಧ್ಯಕ್ಷ ದೀಪಕ ತೋಮರ್ ಮಾತನಾಡಿ, ‘ಬೀದರ್‌ನಲ್ಲಿ ಕಲೆ ಹಾಗೂ ಸಂಸ್ಕೃತಿ ನೆಲೆಯೂರಿದೆ. ಬಹುಮುಖ ಪ್ರತಿಭೆ ಪ್ರೊ.ಎಚ್.ಎಂ. ಮಹೇಶ್ವರಯ್ಯ ಅವರಿಗೆ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ’ಎಂದು ಹೇಳಿದರು.

ಹಾವೇರಿಯ ಜನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ ಮಾತನಾಡಿ, ‘ಪ್ರತಿಭೆ ಇದ್ದವರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದಕ್ಕೆ ಮಹೇಶ್ವರಯ್ಯ ಉತ್ತಮ ನಿದರ್ಶನ’ ಎಂದು ಬಣ್ಣಿಸಿದರು.

‘ಇಂದು ಸುಸ್ಥಿರ ಅಭಿವೃದ್ಧಿ ಆಗುತ್ತಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸುಸ್ಥಿರ ಅಭಿವೃದ್ಧಿಗೆ ಬಳಸಿಕೊಳ್ಳಬೇಕಿದೆ. ಪರಿಸರ ನಾಶದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಇದರಿಂದ ಸಂತಾನೋತ್ಪತ್ತಿಯ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ. ವಿಶ್ವದಲ್ಲಿ 700 ಕೋಟಿ ಜನಸಂಖ್ಯೆ ಇದೆ. 30 ವರ್ಷಗಳ ಅವಧಿಯಲ್ಲಿ ಜನಸಂಖ್ಯೆ ಅರ್ಧಕ್ಕೆ ಕುಸಿಯಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್‌ ವೈದ್ಯ ಮಾತನಾಡಿದರು. ಡಾ.ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರು.

ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹಾಸನ ರಘು, ಡಾ. ಚನ್ನಬಸಪ್ಪ ಹಾಲಹಳ್ಳಿ, ಮನ್ನಾನ್ ಸೇಠ್, ಪ್ರೊ.ಎಸ್.ಬಿ.ಬಿರಾದಾರ, ಡಾ.ಎಸ್.ಎಸ್.ಯಾಳವಾರ, ಡಾ.ಜಗನ್ನಾಥ ಹೆಬ್ಬಾಳೆ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ, ಎಸ್.ಬಿ.ಕುಚಬಾಳ, ಯೋಗೇಂದ್ರ ಯದಲಾಪೂರೆ, ಮಲ್ಲಮ್ಮ ಸಂತಾಜಿ, ಮಹಾರುದ್ರ ಡಾಕುಳಗಿ ಇದ್ದರು.

ಸಂಜೀವಕುಮಾರ ಜುಮ್ಮಾ ನಿರೂಪಿಸಿದರು. ನಿಜಲಿಂಗಪ್ಪ ತಗಾರೆ ಸ್ವಾಗತಿಸಿದರು. ಡಾ.ರಾಜಕುಮಾರ ಹೆಬ್ಬಾಳೆ ವಂದಿಸಿದರು.


ಮಹೇಶ್ವರಯ್ಯಗೆ ಗೊರುಚ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬೀದರ್‌ನಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ವತಿಯಿಂದ ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಎಚ್.ಎಂ.ಮಹೇಶ್ವರಯ್ಯ ಅವರಿಗೆ ಗೊರುಚ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ತಿನ ಅಧ್ಯಕ್ಷ ನಿರ್ಮಲ್‌ ವೈದ್ಯ ಅವರು ಮಹೇಶ್ವರಯ್ಯ ಅವರಿಗೆ ಶಾಲು ಹೊದಿಸಿ, ₹ 51 ಸಾವಿರ ಮೊತ್ತದ ಚೆಕ್‌, ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಹೇಶ್ವರಯ್ಯ, ‘ಜನಪದ ಕ್ಷೇತ್ರ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಾಹಿತ್ಯ ಅಧ್ಯಯನ ಮೂಲಕ ಬದುಕುವ ಕಲೆಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು’ ಎಂದರು.

‘ಪ್ರಾಮಾಣಿಕವಾಗಿ ಬದುಕಿದವರಿಗೆ ಸಮಾಜದಲ್ಲಿ ಅಂತಿಮವಾಗಿ ಗೌರವ ದೊರೆಯುತ್ತದೆ. ಅಜಗಣ್ಣ, ಮುಕ್ತಾಯಕ್ಕ ಮತ್ತು ಸತ್ಯಕ್ಕರು ನನಗೆ ಸದಾ ಸ್ಫೂರ್ತಿ. ಬೀದರ್ ಜಿಲ್ಲೆಯ ಬರಹಗಾರರ ಮತ್ತು ಕಲಾವಿದರ ಸಂಘಕ್ಕೆ ನಾನು ಸದಾ ಋಣಿಯಾಗಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT