ಶುಕ್ರವಾರ, ಮಾರ್ಚ್ 5, 2021
18 °C
ಶಾಸಕ ಈಶ್ವರ ಖಂಡ್ರೆ ಬಗ್ಗೆ ಮಾತನಾಡುವ ನೈತಿಕತೆ ಸಂಸದರಿಗಿಲ್ಲ

ಖೂಬಾ ಹೇಳಿಕೆಗೆ ಮೂಲಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರ ಜನಪರ ಕಾಳಜಿ ಎಂತಹದ್ದು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಸಂಸದ ಭಗವಂತ ಖೂಬಾ ಅವರಿಗೆ ಇಲ್ಲ ಎಂದು ಕಾಂಗ್ರೆಸ್ ಮುಖಂಡ ದತ್ತಾತ್ರಿ ಮೂಲಗೆ ತಿರುಗೇಟು ನೀಡಿದ್ದಾರೆ.

ಊರು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದರು ಎನ್ನುವ ಗಾದೆಯಂತೆ ಕೋವಿಡ್‌ ಸೋಂಕಿನ ಸಂಕಷ್ಟ ಬಂದ 40 ದಿನಗಳ ನಂತರ ಸಂಸದರು ನಿದ್ದೆಯಿಂದ ಹೊರ ಬಂದಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.

ಆಹಾರಧಾನ್ಯ ವಿತರಿಸುವ ನೆಪದಲ್ಲಿ ಭಾನುವಾರ ಭಾಲ್ಕಿಗೆ ಹೋಗಿ ಸುಖಾಸುಮ್ಮನೆ ಖಂಡ್ರೆ ಅವರ ವಿರುದ್ಧ ಆಧಾರ ಹಾಗೂ ತಲೆ ಬುಡ ಇಲ್ಲದ ಹೇಳಿಕೆ ಕೊಟ್ಟಿರುವುದು ಅವರ ದಿವಾಳಿತನ ತೋರಿಸುತ್ತದೆ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎನ್ನುವಂತೆ ಕೊರೊನಾ ಸಂಕಷ್ಟದ ಸಮಯದಲ್ಲಿ ಸಂಸದರಿಗೆ ಆರೋಪ ಮಾಡುವುದು ಬಿಟ್ಟರೆ ಬೇರೇನೂ ಗೊತ್ತಿಲ್ಲದಂತೆ ಕಾಣುತ್ತದೆ ಎಂದು ಟೀಕಿಸಿದ್ದಾರೆ.

ಈಶ್ವರ ಖಂಡ್ರೆ ಅವರು ಬಿರು ಬಿಸಿಲು ಲೆಕ್ಕಿಸದೆ ಒಂದು ತಿಂಗಳಿಂದ ಕ್ಷೇತ್ರದಾದ್ಯಂತ ಸಂಚರಿಸಿ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು, ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು, ಯುವಕರು, ವಿದ್ಯಾರ್ಥಿಗಳು ಹಾಗೂ ಅಲೆಮಾರಿಗಳಲ್ಲಿ ಧೈರ್ಯ ತುಂಬಿದ್ದಾರೆ. ವೈಯಕ್ತಿಕವಾಗಿ ಸಾವಿರಾರು ಜನರಿಗೆ ಆಹಾರಧಾನ್ಯ, ತರಕಾರಿ ಕಿಟ್, ಹಣ್ಣು ಹಂಪಲು, ಮಾಸ್ಕ್, ಸ್ಯಾನಿಟೈಸರ್, ವೈದ್ಯರ ರಕ್ಷಣೆಗೆ ಪಿಪಿಇ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದ್ದಾರೆ.

ಗಡಿ ಭಾಗದ ಚೆಕ್‍ಪೋಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದಾರೆ. ನರೇಗಾದಡಿ ಕಾರ್ಮಿಕರಿಗೆ ಕೆಲಸ ಒದಗಿಸುವ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ಸರಣಿ ಸಭೆ ನಡೆಸಿದ್ದಾರೆ. 24 ಗಂಟೆ ಜನರ ಸೇವೆಯಲ್ಲಿದ್ದು ಕೊರೊನಾ ಸೋಂಕು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಅವರು ಪ್ರತಿ ಪಕ್ಷದ ಸ್ಥಾನದಲ್ಲಿದ್ದು ಕೊರೊನಾ ಸಂಕಟದ ಸಂದರ್ಭದಲ್ಲಿ ಸರ್ಕಾರಕ್ಕೆ ಆಗಾಗ್ಗೆ ಸಲಹೆ, ಸೂಚನೆ ಕೊಡುತ್ತ ಬಂದಿದ್ದಾರೆ. ಆಡಳಿತದಲ್ಲಿ ನ್ಯೂನ್ಯತೆ ಕಂಡು ಬಂದರೆ ಸರಿಪಡಿಸಲು ಎಚ್ಚರಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಂಸದರು ತಮ್ಮ ಕರ್ತವ್ಯ ಮರೆತು ಚಿಲ್ಲರೆ ರಾಜಕಾರಣ ಮುಂದುವರಿಸಿದ್ದಾರೆ. ಇನ್ನಾದರೂ ಕೀಳುಮಟ್ಟದ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರಲ್ಲಿ ರಾಜ್ಯ ಹಾಗೂ ಜನರ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಖೋತಾ ಆಗಿರುವ ₹ 25 ಸಾವಿರ ಕೋಟಿ ಅನುದಾನ ಮರಳಿ ತರಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.