ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಜಿಲ್ಲೆಯಲ್ಲಿ ಇಳಿದ ಕೋವಿಡ್‌ ಸೋಂಕು, ಲಸಿಕಾಕರಣಕ್ಕೆ ಹೆಚ್ಚಿನ ಒತ್ತು

Last Updated 27 ಜುಲೈ 2021, 19:30 IST
ಅಕ್ಷರ ಗಾತ್ರ

ಬೀದರ್: ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೆ ಹೊಂದಿಕೊಂಡಿರುವ ಬೀದರ್‌ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

ಸೋಮವಾರ ಹಾಗೂ ಮಂಗಳವಾರ ಒಬ್ಬರಿಗೂ ಸೋಂಕು ದೃಢಪಟ್ಟಿಲ್ಲ. ಕೋವಿಡ್‌ನಿಂದ ಈವರೆಗೆ 23,850ಕ್ಕೆ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್–19 ಸಕ್ರಿಯ ಪ್ರಕರಣಗಳ ಸಂಖ್ಯೆ 6ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಚಿಕಿತ್ಸೆ ಫಲಿಸದೆ 396 ಸೋಂಕಿತರು ಮೃತಪಟ್ಟಿದ್ದಾರೆ.

ಕೋವಿಡ್‌ ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತು. ಜಿಲ್ಲಾಡಳಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸೋಂಕು ಶಂಕಿತರ ಪರೀಕ್ಷೆ ತೀವ್ರಗೊಳಿಸಿತು. ಹೀಗಾಗಿ ಪ್ರತಿದಿನವೂ 500ರ ಆಸು ಪಾಸಿನಲ್ಲಿ ಪತ್ತೆಯಾಗುತ್ತಿದ್ದ ಕೋವಿಡ್ ಪ್ರಕರಣಗಳು ಈಗ ನಿಯಂತ್ರಣಕ್ಕೆ ಬಂದಿವೆ.

ದೇಶದಲ್ಲೇ ಕಲಬುರ್ಗಿಯಲ್ಲಿ ಮೊದಲ ಕೋವಿಡ್‌ ಪ್ರಕರಣ ಕಾಣಿಸಿಕೊಂಡಿತ್ತು. ನಂತರ ಬೀದರ್‌ ನಗರದಲ್ಲೂ ಸೋಂಕು ಪತ್ತೆಯಾಗಿ ಜಿಲ್ಲೆಯ ಜನತೆಯನ್ನು ಭಯಭೀತಗೊಳಿಸಿತ್ತು. ಆರಂಭದಲ್ಲಿ ಬೀದರ್ ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗುತ್ತಿದ್ದ ಜಿಲ್ಲೆಗಳಲ್ಲಿ ಗುರುತಿಸಿಕೊಂಡಿತ್ತು.

ಕೋವಿಡ್ ವಾರಿಯರ್‌ಗಳಾದ ವೈದ್ಯರು, ನರ್ಸ್‌ಗಳಿಗೂ ಸೋಂಕು ತಗುಲಿ ಜಲ್ಲೆಯ ಜನರಲ್ಲಿ ಆತಂಕ ಮೂಡಿಸಿತ್ತು. ಎರಡನೇ ಅಲೆಯ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಲಾಯಿತು. ಕೋವಿಡ್‌ ಪರೀಕ್ಷೆ ಹೆಚ್ಚಿಸುವುದರ ಜತೆಗೆ ಕೋವಿಡ್‌ ಲಸಿಕೆ ಕೊಡುವ ಕಾರ್ಯವನ್ನು ಕೂಡ ತೀವ್ರಗೊಳಿಸಲಾಯಿತು. ಇದರಿಂದ ಕೋವಿಡ್‌ ನಿಯಂತ್ರಿಸಲು ಹೆಚ್ಚಿನ ಅನುಕೂಲವಾಯಿತು.

‘ಜಿಲ್ಲಾಡಳಿತ ಜಿಲ್ಲೆಯ ಗಡಿಯಲ್ಲಿ ಏಳು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ತಪಾಸಣೆ ನಡೆಸುತ್ತಿದೆ. ಆರ್‌ಟಿಪಿಸಿಆರ್‌ ಹಾಗೂ ಕೋವಿಡ್‌ ಲಸಿಕೆ ಪಡೆದ ಪ್ರಮಾಣಪತ್ರ ಇಲ್ಲದವರಿಗೆ ಜಿಲ್ಲೆಯೊಳಗೆ ಪ್ರವೇಶ ನೀಡುತ್ತಿಲ್ಲ. ಪೊಲೀಸ್‌ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘಟಿತ ಪ್ರಯತ್ನ ನಡೆಸಿದ್ದರ ಫಲವಾಗಿ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳುತ್ತಾರೆ.

‘ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಈಗಾಗಲೇ ಲಸಿಕೆ ಕೊಡಲಾಗಿದೆ. ಆಯಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲಾಗಿದೆ. ಕೋವಿಡ್‌ ಹತೋಟಿಗೆ ಬಂದಿದೆ. ಕೋವಿಡ್‌ ಕೆಂಪು ವಲಯದಲ್ಲಿ ಗುರುತಿಸಿಕೊಂಡಿದ್ದ ಬೀದರ್ ಜಿಲ್ಲೆ ಈಗ ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾ ರೆಡ್ಡಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT