ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಗ್ಗಿದ ಹಿರೇಕಾಯಿ, ಸೊರಗಿದ ಸೋರೆಕಾಯಿ: ಬೆಲೆಗೆ ಬಾಗಿದ ತರಕಾರಿ ರಾಜ

Last Updated 8 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಬೀದರ್‌: ಕೋವಿಡ್‌ ಸೋಂಕಿನ ಭಯದಿಂದ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಳೆಯ ಅಬ್ಬರಕ್ಕೆ ಹೊರ ಜಿಲ್ಲೆಗಳಿಂದ ಹೆಚ್ಚು ತರಕಾರಿ ಬರುತ್ತಿಲ್ಲ. ಕೊಳ್ಳುವವರ ಸಂಖ್ಯೆಯೂ ಕಡಿಮೆಯಾಗಿರುವ ಕಾರಣ ಬೆಳ್ಳುಳ್ಳಿ ಹೊರತು ಪಡಿಸಿ ಉಳಿದೆಲ್ಲ ತರಕಾರಿ ಬೆಲೆ ಕುಸಿದಿದೆ.

ಈ ವಾರ ನಿರೀಕ್ಷಿಸಿದಷ್ಟು ಸೊಪ್ಪು ಮಾರುಕಟ್ಟೆಗೆ ಬಂದಿಲ್ಲ. ಇದೇ ಕಾರಣಕ್ಕೆ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಏರಿಕೆಯಾಗಿದೆ. ಬೆಳ್ಳುಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 10 ಸಾವಿರದಿಂದ ₹ 12 ಸಾವಿರ ವರೆಗೆ ಇದೆ.

ಕೋವಿಡ್‌ ಬರುವ ಮೊದಲು ಮಾರುಕಟ್ಟೆಯಲ್ಲಿ ತಲ್ಲಣ ಉಂಟು ಮಾಡಿದ್ದ ಈರುಳ್ಳಿ ಬೆಲೆ ಇದೀಗ ದಿಢೀರ್‌ ಕುಸಿದಿದೆ. ಕ್ವಿಂಟಲ್‌ಗೆ ₹ 2,500 ಇದ್ದ ಈರುಳ್ಳಿ ಬೆಲೆ ₹ 2 ಸಾವಿರಕ್ಕೆ ಇಳಿದಿದೆ. ಕಳೆದ ವಾರ ಹಿಗ್ಗಿದ್ದ ಹಿರೇಕಾಯಿ ಬೆಲೆ ಸಮರಕ್ಕೆ ಬಳಲಿ ಬೆಂಡಾಗಿದ್ದು, ₹ 2 ಸಾವಿರದಿಂದ ₹ 4 ಸಾವಿರಕ್ಕೆ ಕುಸಿದಿದೆ. ಹಸಿ ಮೆಣಸಿನಕಾಯಿ ಬೆಲೆ ₹ 1,500ಕ್ಕೆ ಇಳಿದಿದೆ.

ಗಜ್ಜರಿ, ಬೀನ್ಸ್‌, ಹೂಕೋಸು, ₹ 3 ಸಾವಿರ ವರೆಗೆ ಕಡಿಮೆಯಾದರೆ, ಬೀಟ್‌ರೂಟ್‌ ₹ 4 ಸಾವಿರ ವರೆಗೆ ಕುಸಿದಿದೆ. ಸಬ್ಬಸಗಿ ಬೆಲೆ ₹ 4 ಸಾವಿರದಿಂದ ₹ 2 ಸಾವಿರಕ್ಕೆ ಇಳಿದಿದೆ. ಸಬ್ಬಸಗಿ ಬೆಲೆ ಇಷ್ಟು ಕಡಿಮೆಯಾಗಲಿದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಎರಡು ವಾರ ಬಿಟ್ಟು ಬರುವ ಗಣೇಶನ ಹಬ್ಬದ ವೇಳೆ ಸೊಪ್ಪಿನ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ತೊಂಡೆಕಾಯಿ ಬೆಲೆ ₹ 1 ಸಾವಿರದಿಂದ ₹ 1,500 ವರೆಗೂ ಇಳಿದಿದೆ. ನುಗ್ಗೆಕಾಯಿ ಬೆಲೆ ₹ 3 ಸಾವಿರದಿಂದ ₹ 4 ಸಾವಿರ ವರೆಗೆ ಕಡಿಮೆಯಾಗಿದೆ.

ನಗರದ ಮಾರುಕಟ್ಟೆಗೆ ಹೈದರಾಬಾದ್‌ನಿಂದ ಮೆಣಸಿನಕಾಯಿ, ಆಲೂಗಡ್ಡೆ, ಬೀನ್ಸ್, ಬೀಟ್‌ರೂಟ್‌, ತೊಂಡೆಕಾಯಿ, ಬೆಂಡೆಕಾಯಿ, ಸೋಲಾಪುರದಿಂದ ಬೆಳ್ಳುಳ್ಳಿ, ಬೆಳಗಾವಿಯಿಂದ ಗಜ್ಜರಿ, ನುಗ್ಗೆಕಾಯಿ, ತುಮಕೂರಿನಿಂದ ಟೊಮೊಟೊ, ಬೀದರ್, ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್‌ ತಾಲ್ಲೂಕಿನಿಂದ ಬದನೆಕಾಯಿ, ಹಿರೇಕಾಯಿ, ಎಲೆಕೋಸು, ಹೂಕೋಸು, ಮೆಂತೆ, ಪಾಲಕ್, ಸಬ್ಬಸಗಿ, ಕರಿಬೇವು ಹಾಗೂ ಕೊತಂಬರಿ ಬಂದಿದೆ.

‘ಮಾರುಕಟ್ಟೆ ಮೇಲೂ ಕೋವಿಡ್‌ ಸೋಂಕು ಪರಿಣಾಮ ಬೀರಿದೆ. ಜನ ಹೆಚ್ಚು ತರಕಾರಿ ಕೊಳ್ಳಲು ಮುಂದೆ ಬರುತ್ತಿಲ್ಲ. ಬೇಡಿಕೆ ಕಡಿಮೆಯಾಗಿ, ಬಹುತೇಕ ತರಕಾರಿ ಬೆಲೆ ಕುಸಿದಿದೆ’ ಎಂದು ತರಕಾರಿ ವ್ಯಾಪಾರಿ ಆಕಾಶ ಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT