ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಬೀದರ್‌ ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರ ದೌರ್ಜನ್ಯದ ಆರೋಪ
Published 19 ಮಾರ್ಚ್ 2024, 3:11 IST
Last Updated 19 ಮಾರ್ಚ್ 2024, 3:11 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ಶೋಷಿತರ ಸಂರಕ್ಷಣಾ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ಜನ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿದರು. ಕೆಲಹೊತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು. ಆನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಸಲ್ಲಿಸಿದರು.

‘ಜಿಲ್ಲೆಯಲ್ಲಿ ದಲಿತರು, ಶೋಷಿತರು, ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ಅತ್ಯಾಚಾರ, ದಬ್ಬಾಳಿಕೆ, ದೌರ್ಜನ್ಯ ನಡೆಸಲಾಗುತ್ತಿದೆ. ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮೂರ್ತಿಗೆ ಅಪಮಾನ ಮಾಡುವ ಕುಕೃತ್ಯಗಳು ನಡೆಯುತ್ತಿವೆ. ಬಾಬಾ ಸಾಹೇಬರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದನ್ನು ಬರೆದು ಪೋಸ್ಟ್‌ ಮಾಡಲಾಗುತ್ತಿದೆ. ಇನ್ನೊಂದೆಡೆ ಸಂಸದ ಅನಂತಕುಮಾರ ಹೆಗಡೆ ಪುನಃ ಪುನಃ ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ಧಾರೆ. ಇಷ್ಟೆಲ್ಲ ಆಗುತ್ತಿದ್ದರೂ ಸರ್ಕಾರ ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ವಿಷಾದಕರ’ ಎಂದರು.

‘ಯಾವುದೇ ಜಿಲ್ಲೆಯಲ್ಲಿ ದಲಿತರ ಮೇಲೆ ದೌರ್ಜನ್ಯಗಳು ನಡೆದರೆ ಅಲ್ಲಿನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಆದರೆ, ಆದೇಶಕ್ಕಷ್ಟೇ ಸೀಮಿತವಾಗಿದೆ. ಡಿಸಿ, ಎಸ್ಪಿಯವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಕುಮ್ಮಕ್ಕು ಇರುವುದರಿಂದ ಇಬ್ಬರೂ ಕೈಗೊಂಬೆಗಳಾಗಿದ್ದಾರೆ’ ಎಂದು ಆರೋಪಿಸಿದರು.

ಸುಮಾರು 50ಕ್ಕೂ ಹೆಚ್ಚು ವರ್ಷಗಳಿಂದ ದಲಿತರು ಕೃಷಿ ನೆಚ್ಚಿಕೊಂಡು ಬದುಕು ನಡೆಸುತ್ತಿದ್ದರು. ಅನ್ಯಾಯವಾಗಿ ಅರಣ್ಯ ಅಧಿಕಾರಿಗಳು ಬಡವರ ಜಮೀನು ಕಸಿದುಕೊಂಡಿದ್ದಾರೆ. ರೈತರ ಹೆಸರಿನಲ್ಲಿದ್ದ ಪಹಣಿ, ಮ್ಯುಟೇಶನ್‌, ‘ಸಿ’ ಫಾರಂ ರದ್ದುಪಡಿಸಿದ್ದಾರೆ. ಇನ್ನೊಂದೆಡೆ ಬಗರ್‌ ಹುಕುಂ ಸಾಗುವಳಿ ಜಮೀನಲ್ಲಿ ಜಾತಿ ಬಲಾಢ್ಯರು ಉಳುಮೆ ಮಾಡುತ್ತಿದ್ಧಾರೆ. ಅವರ ವಿರುದ್ಧ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

ಸಮಿತಿ ಜಿಲ್ಲಾಧ್ಯಕ್ಷ ವಿಷ್ಣುವರ್ಧನ್‌ ವಾಲದೊಡ್ಡಿ, ಕಾರ್ಯಾಧ್ಯಕ್ಷ ವಿನೋದ್‌ ರತ್ನಾಕರ್‌, ಗೌರವ ಅಧ್ಯಕ್ಷ ರಾಜಕುಮಾರ ಮೂಲಭಾರತಿ, ಪ್ರಮುಖರಾವ ಬಸವರಾಜ ಮಿಠಾರೆ, ದಯಾನಂದ ನೌಲೆ, ಅಂಬರೀಷ್ ಕುದರೆ, ರಾಹುಲ್‌ ಖಂದಾರೆ, ರಾಜಕುಮಾರ ಸಿಂಧೆ, ಸುರೇಶ ಜೋಜನಾಕರ್‌, ಮಹೇಶ ಗೋನಾಳಕರ್‌ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT