ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಅಧಿಕಾರಿಗಳ ವರ್ಗಾವಣೆಗೆ ಆಗ್ರಹ: ಶಾಸಕರ ಮನೆಗೆ ಮುತ್ತಿಗೆ ಎಚ್ಚರಿಕೆ

Published 28 ನವೆಂಬರ್ 2023, 15:30 IST
Last Updated 28 ನವೆಂಬರ್ 2023, 15:30 IST
ಅಕ್ಷರ ಗಾತ್ರ

ಬೀದರ್‌: ‘ಹುಮನಾಬಾದ್‌ನಲ್ಲಿ ಅನೇಕ ವರ್ಷಗಳಿಂದ ಬೀಡು ಬಿಟ್ಟಿರುವ ಭ್ರಷ್ಟ ಅಧಿಕಾರಿಗಳನ್ನು ಒಂದು ತಿಂಗಳೊಳಗೆ ಬೇರೆಡೆ ವರ್ಗಾವಣೆಗೊಳಿಸಬೇಕು. ಇಲ್ಲವಾದಲ್ಲಿ ಹುಮನಾಬಾದ್‌, ಚಿಟಗುಪ್ಪ ಬಂದ್‌ ಮಾಡಿ ಶಾಸಕರ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ನಾಗರಿಕರ ಒಕ್ಕೂಟ ವೇದಿಕೆಯ ಅಧ್ಯಕ್ಷ ಸೈಯದ್‌ ಯಾಸಿನ್‌ ಅಲಿ, ಸಾಮಾಜಿಕ ಕಾರ್ಯಕರ್ತ ಎಂ.ಜಿ. ಪ್ರಶಾಂತ್‌ ವಳಖಿಂಡಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹುಮನಾಬಾದ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜೂಜು, ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌, ಬಯೋ ಡೀಸೆಲ್‌ನ ದೊಡ್ಡ ದಂಧೆ ನಡೆಯುತ್ತಿದೆ. ಆದರೆ, ಯಾರೂ ಅದನ್ನು ತಡೆಯುತ್ತಿಲ್ಲ. ಈ ಹಿಂದೆ ಹುಮನಾಬಾದ್‌ನಲ್ಲಿ ಎಎಸ್‌ಪಿಯಾಗಿದ್ದ ಸುಧಾಂಶು ರಜಪೂತ ಅವರು ಇದ್ದಾಗ ಒಂದೇ ಒಂದು ಅಪರಾಧ ಕೃತ್ಯ ನಡೆಯುತ್ತಿರಲಿಲ್ಲ. ಅವರು ಹೋದ ನಂತರ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಈ ವಿಚಾರವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

ಹುಮನಾಬಾದ್‌ನವರು ಸ್ಥಳೀಯವಾಗಿ ಮರಳು ಮಾರಾಟ ಮಾಡುವಂತಿಲ್ಲ. ಆದರೆ, ಕಲಬುರಗಿಯವರು ಹುಮನಾಬಾದ್‌ಗೆ ಬಂದು ಮರಳು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಗೋವಿಂದ ಎಂಬ ಅಧಿಕಾರಿ 27 ವರ್ಷಗಳಿಂದ ಒಂದೇ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. 15 ವರ್ಷಗಳಿಂದ ತಾಲ್ಲೂಕು ಪಂಚಾಯಿತಿ ಇಒ ಆಗಿದ್ದಾರೆ. ಶಾಸಕರ ಜತೆ ವಾದ–ವಿವಾದ ನಡೆಸುತ್ತಾರೆ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಹಾಲಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ಮಾಜಿ ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್‌ ಅವರ ಜಗಳದಲ್ಲಿ ಹುಮನಾಬಾದ್‌ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ. ಹಾಲಿ ಶಾಸಕರು ತಮಗೆ ಬೇಕಾದ ಅಧಿಕಾರಿಗಳನ್ನು ತಾಲ್ಲೂಕಿಗೆ ಹಾಕಿಸಬಹುದು. ಆದರೆ, ರಾಜಶೇಖರ ಪಾಟೀಲ ಅವಕಾಶ ಕಲ್ಪಿಸುತ್ತಿಲ್ಲ. ಪೊಲೀಸರಿಗೆ ಹೋಗಿ ದೂರು ಕೊಟ್ಟರೂ ಸ್ವೀಕರಿಸುತ್ತಿಲ್ಲ. ಡಿಸಿ, ಎಸ್ಪಿ, ಸಿಇಒ ಏನು ಮಾಡುತ್ತಿದ್ದಾರೆ ಎಂದು ಕೇಳಿದರು.

ಹುಮನಾಬಾದ್‌ನಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳಿಗೆ ಅಧಿಕಾರಿಗಳ ಬೆಂಬಲವಿದೆ. ಅವರ ಹಿಂದೆ ಮಾಜಿ ಶಾಸಕ ರಾಜಶೇಖರ ಪಾಟೀಲ ಅವರು ಇದ್ದಾರೆ. ಅವರ ಪರವಾಗಿ ಉಸ್ತುವಾರಿ ಸಚಿವರು ಪತ್ರ ಕೊಡುತ್ತಿದ್ದಾರೆ. ಭ್ರಷ್ಟ ಅಧಿಕಾರಿಗಳನ್ನು ಉಸ್ತುವಾರಿ ಸಚಿವರು ಬೇಕಾದರೆ ಭಾಲ್ಕಿಗೆ ವರ್ಗಾವಣೆ ಮಾಡಿಸಿಕೊಳ್ಳಲಿ. ಹುಮನಾಬಾದ್‌ನಲ್ಲಿ ಉಳಿಸಲು ಪತ್ರ ಕೊಡುವುದು ಬೇಡ. ಇನ್ನು, ಕಣ್ಣೆದುರೇ ಎಲ್ಲಾ ಅಕ್ರಮ ನಡೆಯುತ್ತಿದ್ದರೂ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಏನು ಮಾಡುತ್ತಿಲ್ಲ. ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT