ಕೆರೆ ಹೂಳೆತ್ತಲು ನಿರ್ಧರಿಸಿದ ಜಿಲ್ಲಾ ಆಡಳಿತ

7
ಕೆರೆ ಒತ್ತುವರಿ ತೆರವುಗೊಳಿಸಲು ಪಂಚಾಯಿತಿಗಳಿಗೆ ಸೂಚನೆ

ಕೆರೆ ಹೂಳೆತ್ತಲು ನಿರ್ಧರಿಸಿದ ಜಿಲ್ಲಾ ಆಡಳಿತ

Published:
Updated:
Deccan Herald

ಬೀದರ್‌: ಜಿಲ್ಲೆಯಲ್ಲಿ  ಬರ ಗಂಭೀರ ಸ್ಥಿತಿ ಪಡೆಯುತ್ತಿದ್ದು, ತೆರೆದ ಬಾವಿಗಳಲ್ಲಿನ ನೀರು ಬತ್ತುತ್ತಿದೆ. ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆಡಳಿತ ಜಿಲ್ಲೆಯಲ್ಲಿ ಇರುವ ಎಲ್ಲ ಕೆರೆಗಳ ಹೂಳು ತೆಗೆಯಲು ನಿರ್ಧರಿಸಿದೆ.

ಭೂಸೇನಾ ನಿಗಮದ ಜೆಸಿಬಿಗಳನ್ನು ಬಳಸಿ ಕೆರೆಗಳ ಹೂಳು ತೆಗೆಯಲಿದೆ. ಯಾವ ಗ್ರಾಮಗಳ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಮಣ್ಣು ಒಯ್ಯಲು ಮುಂದು ಬರುವರೋ ಅಂತಹ ಗ್ರಾಮಗಳ ಕೆರೆಯ ಹೂಳೆತ್ತಲು ಮೊದಲ ಆದ್ಯತೆ ನೀಡಲು ತೀರ್ಮಾನಿಸಿದೆ. ಸ್ವಯಂ ಪ್ರೇರಣೆಯಿಂದ ಕೆರೆಯ ಫಲವತ್ತಾದ ಮಣ್ಣು ಒಯ್ಯುವಂತೆ ರೈತರ ಮನವೊಲಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆಯನ್ನೂ ನೀಡಿದೆ.

‘ಜಿಲ್ಲೆಯಲ್ಲಿ ಇರುವ ಎಲ್ಲ ಹಿಟಾಚಿ ಹಾಗೂ ಜೆಸಿಬಿಗಳನ್ನು ಬಳಸಿಕೊಂಡು ಏಕಕಾಲಕ್ಕೆ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅಕಾಲಿಕ ಮಳೆ ಬಂದರೂ ಒಂದಿಷ್ಟು ನೀರು ಸಂಗ್ರಹವಾಗಲಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರು ದೊರೆಯಲಿದೆ’ ಎಂದು ಜಿಲ್ಲಾಧಿಕಾರಿ ಎಚ್.ಆರ್‌.ಮಹಾದೇವ ತಿಳಿಸಿದರು.

‘ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ 126 ಕೆರೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 496 ಕೆರೆಗಳು ಇರುವ ಮಾಹಿತಿ ಇದೆ. 2015ರಲ್ಲಿ ಹೂಳು ತೆಗೆಯಲಾದ ಕೆರೆಗಳಲ್ಲೂ ಈಗ ಮತ್ತೆ ಹೂಳು ತುಂಬಿಕೊಂಡಿದೆ. ಈ ಬಾರಿ ಹೂಳು ತೆಗೆದು ಸಾಧ್ಯವಾದರೆ ಕೆರೆಗಳ ಒಡ್ಡುಗಳನ್ನೂ ಬಲಪಡಿಸಲಾಗುವುದು’ ಎಂದು ಹೇಳಿದರು.

‘ಬರ ಪರಿಸ್ಥಿತಿಯನ್ನು ನಿಭಾಯಿಸಲು ಪ್ರತಿ ಹಳ್ಳಿಯಲ್ಲಿ ಅಧಿಕಾರಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ. ಗ್ರಾಮ ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳು ಇವೆ , ಅತಿಕ್ರಮಣಗೊಂಡ ಕೆರೆಗಳು ಎಷ್ಟು ಎನ್ನುವ ಮಾಹಿತಿ ನೀಡುವಂತೆ ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ಕೆರೆ ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಮುಲಾಜಿಲ್ಲದೆ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನುರಾಗ ತಿವಾರಿ ಅವರು ಕೇವಲ ₹ 50 ಲಕ್ಷ ವೆಚ್ಚದಲ್ಲಿ 130 ಕೆರೆಗಳ ಹೂಳು ತೆಗೆಸಿ ಜಲಮೂಲಗಳು ಪುನಃಶ್ಚೇತನಗೊಳ್ಳುವಂತೆ ಮಾಡಿದ್ದರು. ಮಳೆ ಸುರಿದು ಸಹಜವಾಗಿ ಅಂತರ್ಜಲಮಟ್ಟ ಮೇಲಕ್ಕೆ ಬಂದ ನಂತರ ಬೀದರ್‌ ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳಲ್ಲಿ ಇರುವ 132 ತೆರೆದ ಬಾವಿ ಹಾಗೂ 15 ಕಲ್ಯಾಣಿಗಳಲ್ಲಿನ ಹೂಳು ತೆಗೆಸಿದ್ದರು. ಇದೇ ಮಾದರಿಯಲ್ಲೇ ಜಿಲ್ಲಾ ಆಡಳಿತವು ಮತ್ತೆ ಕಾಲ ಮಿತಿಯೊಳಗೆ ಜಿಲ್ಲೆಯ ಎಲ್ಲ ಕೆರೆಗಳ ಹೂಳು ತೆಗೆಯಲು ಮುಂದಾಗಿದೆ.

‘ಬೀದರ್‌ ತಾಲ್ಲೂಕಿನ ಜನವಾಡದಲ್ಲಿ ಇರುವ ಎರಡೂ ಕೆರೆಗಳಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಹೆಚ್ಚು ನೀರು ಸಂಗ್ರಹವಾಗಿಲ್ಲ. ಹೂಳು ಎತ್ತಿದರೆ ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗಿ ಕೊಳವೆಬಾವಿಗಳು ಪುನಃಶ್ಚೇತನಗೊಳ್ಳಲಿವೆ’ ಎಂದು ಜನವಾಡದ ಸಂಗಮೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ಬಸವರಾಜ ಪನಸಾಲೆ ಹೇಳಿದರು.

‘2004ರಲ್ಲಿ ಔರಾದ್‌ ಸಮೀಪ ₹ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕೆರೆಯಲ್ಲಿ ಒಂದು ಹನಿ ನೀರು ನಿಲ್ಲುತ್ತಿಲ್ಲ. ಇಲ್ಲಿ ನೀರು ನಿಲ್ಲುವಂತೆ ಮಾಡಿದರೆ ಗೋಶಾಲೆಯಲ್ಲಿ ಇರುವ ಗೋವುಗಳಿಗೆ ಅನುಕೂಲವಾಗಲಿದೆ. ಕೆರೆಯ ಕೆಳ ಹಂತದ ಪ್ರದೇಶದಲ್ಲಿ ಇರುವ ತೆರೆದ ಬಾವಿ ಹಾಗೂ ಕೊಳವೆಬಾವಿಗಳಲ್ಲೂ ನೀರು ಬರಲಿದೆ. ಜಿಲ್ಲಾ ಆಡಳಿತದ ನಿರ್ಧಾರ ಸ್ವಾಗತಾರ್ಹವಾಗಿದೆ’ ಎಂದು ಔರಾದ್‌ನ ಅಮರೇಶ್ವರ ಗೋಶಾಲೆಯ ಅಧ್ಯಕ್ಷ ಶಿವರಾಜ್‌ ಅಲ್ಮಾಜೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !