ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಗೆ ಆಗ್ರಹ

Published 26 ಜನವರಿ 2024, 7:29 IST
Last Updated 26 ಜನವರಿ 2024, 7:29 IST
ಅಕ್ಷರ ಗಾತ್ರ

ಬೀದರ್‌: ಬೀದರ್‌, ಕಲಬುರಗಿ ಭಾಗದಲ್ಲಿ ಹೊಸ ರೈಲುಗಳ ಸಂಚಾರ, ರೈಲ್ವೆ ಸೌಲಭ್ಯ ಉತ್ತಮವಾಗಬೇಕಾದರೆ ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಜಿಲ್ಲಾಧ್ಯಕ್ಷ ಬಿ.ಜಿ. ಶೆಟಕಾರ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಶಾಸ್ತ್ರಿ ಆಗ್ರಹಿಸಿದ್ದಾರೆ.

ಈ ಸಂಬಂಧ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಪತ್ರ ಬರೆದಿರುವ ಅವರು, ಬೀದರ್‌, ಕಲಬುರಗಿ ಭಾಗದಲ್ಲಿ ಉತ್ತಮ ರೈಲ್ವೆ ಸೌಲಭ್ಯ ಕಲ್ಪಿಸಬೇಕು. ಕೇಂದ್ರ ಸಚಿವ ಭಗವಂತ ಖೂಬಾ ಅವರು ಮುಂದಾಳತ್ವ ವಹಿಸಿ ಪ್ರಧಾನಿ, ರೈಲ್ವೆ ಸಚಿವರ ಗಮನ ಸೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.

ಬೀದರ್‌ ಪಟ್ಟಣ ಮತ್ತು ಜಿಲ್ಲೆ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಪರಂಪರೆ ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ರೈಲು ಸೇವೆ ವಿಸ್ತರಿಸುವುದು, ಅಭಿವೃದ್ಧಿಪಡಿಸುವುದು ಬಹಳ ಅಗತ್ಯ. ಹೊಸ ರೈಲುಗಳನ್ನು ಓಡಿಸಿ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಹೈದರಾಬಾದ್‌–ಹುಬ್ಬಳ್ಳಿ ನಡುವೆ ಸಂಚರಿಸುತ್ತಿರುವ ರೈಲನ್ನು ಬೀದರ್‌–ಕಲಬುರಗಿ ಮಾರ್ಗವಾಗಿ ಓಡಿಸಬೇಕು. ವಿಜಯಪುರ–ಮಂಗಳೂರು ರೈಲು ಕಲಬುರಗಿಯಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಬೇಕು. ಬೀದರ್‌ ಖಾನಾಪುರ, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬಾದಾಮಿ, ಗದಗ, ಹುಬ್ಬಳ್ಳಿ, ಹಾವೇರಿ, ಗೋಕರ್ಣ, ಉಡುಪಿ ಮಾರ್ಗವಾಗಿ ಮಂಗಳೂರಿಗೆ ಚಲಿಸುವಂತಾಗಬೇಕು. ಕಾಜಿಪೇಟ್‌–ಬೆಳಗಾವಿ ರೈಲಿನ ಮಾರ್ಗ ಬದಲಿಸಿ ಕಾಜಿಪೇಟ್‌–ಜಹೀರಾಬಾದ್‌–ಬೀದರ್‌–ಕಲಬುರಗಿ–ಹುಬ್ಬಳ್ಳಿ–ಧಾರವಾಡ–ಬೆಳಗಾವಿ ವರೆಗೆ ಓಡಿಸಬೇಕು. ಭುವನೇಶ್ವರ–ಮುಂಬೈ ಕೊನಾರ್ಕ್‌ ಎಕ್ಸ್‌ಪ್ರೆಸ್‌ ರೈಲನ್ನು ವಿಕಾರಾಬಾದ್‌–ಜಹೀರಾಬಾದ್‌–ಬೀದರ್‌–ಕಲಬುರಗಿ–ಸೋಲಾಪುರ ಮಾರ್ಗವಾಗಿ ಮುಂಬೈವರೆಗೆ ಓಡಿಸಬೇಕು. ನಾಂದೇಡ್‌–ಅಮೃತಸರ, ನಾಂದೇಡ್‌–ಗಂಗಾನಗರ, ಅನಂತಪುರ–ನಾಂದೇಡ್‌ ರೈಲು ಬೀದರ್‌ ಮಾರ್ಗವಾಗಿ ಓಡಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಕಲಬುರಗಿ–ಯಶವಂತಪುರ–ಹಾಸನ ರೈಲನ್ನು ಬೀದರ್‌ ವರೆಗೆ ವಿಸ್ತರಿಸಬೇಕು. ಬೀದರ್‌ನಲ್ಲಿ ಹೆಚ್ಚು ರೈಲುಗಳ ನಿಲುಗಡೆ ಟ್ರೈನ್‌ ಪಾರ್ಕಿಂಗ್‌ ಲೈನ್‌ ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT