ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ವೈದ್ಯರ ಪ್ರತಿಭಟನೆ

ಒಪಿಡಿ ಸೇವೆ ಬಂದ್‌; ರೋಗಿಗಳ ಪರದಾಟ
Published 17 ಆಗಸ್ಟ್ 2024, 11:30 IST
Last Updated 17 ಆಗಸ್ಟ್ 2024, 11:30 IST
ಅಕ್ಷರ ಗಾತ್ರ

ಬೀದರ್‌: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಘಟನೆಯನ್ನು ಖಂಡಿಸಿ ವೈದ್ಯರು ಕೆಲಸ ಬಹಿಷ್ಕರಿಸಿ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿನಿ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಕರೆ ಕೊಟ್ಟಿದ್ದ ರಾಷ್ಟ್ರವ್ಯಾಪ್ತಿ ಪ್ರತಿಭಟನೆಯನ್ನು ಬೆಂಬಲಿಸಿ ನಗರದಲ್ಲಿ ವೈದ್ಯರು ಕೆಲಸದಿಂದ ದೂರ ಉಳಿದು ಬೀದಿಗಿಳಿದರು.

ಹಿರಿಯ ಹಾಗೂ ಕಿರಿಯ ವೈದ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸಕ್ಕೆ ಗೈರು ಹಾಜರಾದರು. ನಗರದ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬ್ರಿಮ್ಸ್‌), ಅದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಆಸ್ಪತ್ರೆ, ಓಲ್ಡ್‌ ಸಿಟಿಯಲ್ಲಿರುವ ತಾಯಿ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಕೊಠಡಿಗಳು ಬಿಕೋ ಎನ್ನುತ್ತಿದ್ದವು. ಹೊರರೋಗಿಗಳ ವಿಭಾಗ (ಒಪಿಡಿ) ಬಂದ್‌ ಆಗಿತ್ತು. ವಿವಿಧ ಕಡೆಗಳಿಂದ ಜನ ಬಂದು ವಾಪಸ್‌ ಹೋಗುವ ದೃಶ್ಯ ಕಂಡು ಬಂತು. ದಿನವಿಡೀ ಇದೇ ಪರಿಸ್ಥಿತಿ ಇತ್ತು. ತುರ್ತು ಸೇವೆ ಎಂದಿನಂತೆ ಇತ್ತು.

ನಗರದ ಬ್ರಿಮ್ಸ್‌ ಎದುರು ಸೇರಿದ ವೈದ್ಯರು ಶಾಂತಿಯುತವಾಗಿ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದ ವರೆಗೆ ಪ್ರತಿಭಟನೆ ನಡೆಸಿದರು. ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಘೋಷಣೆಗಳನ್ನು ಹಾಕಿದರು. ಆನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಐಎಂಎ ಜಿಲ್ಲಾಧ್ಯಕ್ಷ ಸಂಜಯ್‌ ಚಂದಾ, ಕಾರ್ಯದರ್ಶಿ ಡಾ. ವೀರೇಂದ್ರ ಪಾಟೀಲ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಡಾ. ಎ.ಸಿ. ಲಲಿತಮ್ಮ, ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಉಮಾ ದೇಶಮುಖ, ದಂತ ವೈದ್ಯ ಸಂಘದ ಅಧ್ಯಕ್ಷ ಕಪಿಲ್‌ ಪಾಟೀಲ, ಡಾ. ರಘು ಕೃಷ್ಣಮೂರ್ತಿ, ಡಾ. ಹನುಮಶೆಟ್ಟಿ, ಡಾ. ಮಕ್ಸೂದ್‌ ಚಂದಾ, ಡಾ. ಸಿ. ಆನಂದರಾವ್‌, ಡಾ. ವಿಜಯಶ್ರೀ ಬಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT