ಸೋಮವಾರ, ಆಗಸ್ಟ್ 2, 2021
25 °C
ಹೋಬಳಿ ಕೇಂದ್ರ ಮಂಠಾಳದಲ್ಲಿ ಅಸ್ವಚ್ಛತೆ ವಾತಾವರಣಕ್ಕಿಲ್ಲ ಮುಕ್ತಿ

ಬಸವಕಲ್ಯಾಣ: ಶಾಲೆಗಳ ಸುತ್ತ ಚರಂಡಿ ದುರ್ನಾತ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರವಾದ ಮಂಠಾಳದ ಎಲ್ಲೆಡೆ ಅಸ್ವಚ್ಛತೆ ವಾತಾವರಣ ಇದೆ. ಸರ್ಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಸುತ್ತಲಿನ ಚರಂಡಿಗಳು ಹೊಲಸು ನೀರಿನಿಂದ ತುಂಬಿಕೊಂಡಿದ್ದು ದುರ್ನಾತ ಬೀರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿಯಿದೆ.

ಉರ್ದು ಪ್ರೌಢಶಾಲೆ ಗ್ರಾಮ ಪಂಚಾಯಿತಿ ಕಚೇರಿಯ ಹಿಂದುಗಡೆಯೇ ಇದೆ. ಇದರ ಪ್ರವೇಶ ದ್ವಾರದಲ್ಲಿ ಹಾಗೂ ಎದುರಿನ ರಸ್ತೆಯಲ್ಲಿ ಯಾವಾಗಲೂ ಕಲ್ಮಷ ನೀರು ಸಂಗ್ರಹಗೊಂಡಿರುತ್ತದೆ. ಕೆಸರಿನಲ್ಲಿ ಸೊಳ್ಳೆಗಳು ಗುಂಯ್ಯಗುಡುತ್ತವೆ. ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವಾಗ ಕೆಲಸಲ ಕಾಲು ಜಾರಿ ಬಿದ್ದಿದ್ದಾರೆ. ಇಲ್ಲಿನ ನೀರು ಮುಂದೆ ಸಾಗುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪಂಚಾಯಿತಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ಇದೇ ಭಾಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಕರ್ನಾಟಕ ಪಬ್ಲಿಕ್ ಶಾಲೆ, ಕನ್ನಡ ಪ್ರೌಢಶಾಲೆ, ರೈತ ಸಂಪರ್ಕ ಕೇಂದ್ರಗಳು ಇದ್ದು, ಇವುಗಳ ಆವರಣಗೋಡೆಗಳ ಹೊರ ಭಾಗದಲ್ಲಿನ ಚರಂಡಿಗಳು ಯಾವಾಗಲೂ ನೀರು, ಕಸ, ಕೆಸರಿನಿಂದ ತುಂಬಿಕೊಂಡಿರುತ್ತವೆ. ಮುಳ್ಳುಕಂಟೆಗಳು ಬೆಳೆದಿವೆ. ಈ ನೀರು ಮುಂದೆ ಸಾಗುವುದಕ್ಕೆ ವ್ಯವಸ್ಥೆ ಕಲ್ಪಿಸಲು ವಿನಂತಿಸಿದ್ದರೂ ಕೆಲಸ ಆಗಿಲ್ಲ. ಇದು ಇಳಿಜಾರು ಪ್ರದೇಶವಾದ್ದರಿಂದ ಊರಲ್ಲಿನ ಮಳೆ ನೀರು ಶಾಲಾ, ಕಾಲೇಜಿನ ಆವರಣಕ್ಕೆ ನುಗ್ಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಪ್ರತಿವರ್ಷ ಸಂಕಟ ಅನುಭವಿಸುತ್ತಿದ್ದಾರೆ.

‘ಶಾಲಾ ಆವರಣಕ್ಕೆ ನೀರು ನುಗ್ಗದಂತೆ ಮಳೆ ಹಾಗೂ ಚರಂಡಿ ನೀರಿಗೆ ದಾರಿ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿಗೆ ಹತ್ತಾರು ಸಲ ಮನವಿಪತ್ರ ಸಲ್ಲಿಸಿದ್ದರೂ ನಿರ್ಲಕ್ಷ್ಯ ತೋರಲಾಗಿದೆ’ ಎಂದು ಮುಖ್ಯಶಿಕ್ಷಕ ವೈಜನಾಥ ಮಾನೆಗೋಪಾಳೆ ದೂರಿದ್ದಾರೆ.

ಗ್ರಾಮ ಪಂಚಾಯಿತಿ ಎದುರಿನಿಂದ ಕರ್ಣಾಟಕ ಬ್ಯಾಂಕ್ ಕಡೆಗೆ ಹೋಗುವ ರಸ್ತೆಯಲ್ಲಿ, ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಡಾ.ಅಂಬೇಡ್ಕರ್ ವೃತ್ತದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆಯಲ್ಲಿ, ಬಸವೇಶ್ವರ ವೃತ್ತದ ಸಮೀಪದಲ್ಲಿ ಚರಂಡಿಗಳ ಸ್ವಚ್ಛತೆ ಕೈಗೊಳ್ಳದೆ ತೊಂದರೆ ಆಗಿದೆ.

‘ಸ್ವಚ್ಛತಾ ಅಭಿಯಾನದಲ್ಲಿ ಕೋಟಿಗಟ್ಟಲೇ ಅನುದಾನ ಬಂದಿದೆ. ವಿವಿಧ ಹಣಕಾಸು ಯೋಜನೆಗಳ ಹಣವೂ ಸ್ವಚ್ಛತೆಗಾಗಿ ಖರ್ಚಾಗುತ್ತಿದೆ. ಆದರೂ ಕೆಲಸ ಆಗಿಲ್ಲ. ಉದ್ಯೋಗ ಖಾತರಿ ಯೋಜನೆಯಲ್ಲೂ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಕೆಲ ವರ್ಷಗಳಿಂದ ಇಲ್ಲಿ ಎಲ್ಲಿಯೂ ಹೊಸ ಚರಂಡಿ ನಿರ್ಮಿಸಿಲ್ಲ. ಈ ಕಾರಣ ಅಸ್ವಚ್ಛತೆಯ ವಾತಾವರಣವಿದೆ’ ಎಂದು ಮಹ್ಮದಸಾಬ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ!

‌ಮಂಠಾಳ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ಬಂದಿದೆ. ಈಚೆಗೆ ನಡೆದ ತಾಲ್ಲೂಕು ಮಟ್ಟದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶರಣು ಸಲಗರ ಅವರು ‘ನಿಮಗೆ ಪುರಸ್ಕಾರ ಯಾವುದಕ್ಕೆ ಸಿಕ್ಕಿದೆ. ಆ ಕೆಲಸ ಗ್ರಾಮದಲ್ಲಿ ಆಗಿದೆಯೋ’ ಎಂದು ಇಲ್ಲಿನ ಪಿಡಿಒ ಅವರನ್ನು ಪ್ರಶ್ನಿಸಿದ್ದರು. ಮಳೆಗಾಲ ಆರಂಭ ಆಗುವುದಕ್ಕೆ ಮೊದಲು ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ ಕೈಗೊಂಡು ಮಳೆ ನೀರಿಗೆ ಸರಾಗವಾಗಿ ಹೋಗಲು ದಾರಿ ಕಲ್ಪಿಸಬೇಕು ಎಂಬ ಸಲಹೆ ನೀಡಿದ್ದರಾದರೂ ಇಲ್ಲಿ ಆ ಕಾರ್ಯ ನಡೆದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು