ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಿದಾಗುತ್ತಿದೆ ಕಾರಂಜಾ ಜಲಾಶಯ: ಆತಂಕದಲ್ಲಿ ಜನ

ಜಲಾಶಯದಲ್ಲಿ 15 ದಿನಗಳಿಗೆ ಪೂರೈಸುವಷ್ಟು ನೀರು ಮಾತ್ರ ಲಭ್ಯ
Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಮೂರು ತಾಲ್ಲೂಕು ಹಾಗೂ 16 ಹಳ್ಳಿಗಳ ಜನರಿಗೆ ಕುಡಿಯುವ ನೀರಿನ ಆಸರೆಯಾಗಿರುವ ಕಾರಂಜಾ ಜಲಾಶಯ ನಿಧಾನವಾಗಿ ಬರಿದಾಗುತ್ತಿದೆ. ಪ್ರಸ್ತುತ 15 ದಿನಗಳ ವರೆಗೆ ಮಾತ್ರ ಪೂರೈಸುವಷ್ಟು ನೀರು ಜಲಾಶಯದಲ್ಲಿದ್ದು, ನಂತರ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಕಾರಂಜಾ ಜಲಾಶಯದಲ್ಲಿ ಕಳೆದ ವರ್ಷ ಜೂನ್‌ ವರೆಗೂ 7.69 ಟಿಎಂಸಿ ಅಡಿ ಪೈಕಿ 3.677 ಟಿಎಂಸಿ ಅಡಿ ನೀರು ಇತ್ತು. ಪ್ರಸ್ತುತ ಕೇವಲ 0.693 ಟಿಎಂಸಿ ಅಡಿ ನೀರು ಮಾತ್ರ ಇದೆ. ಇದರಲ್ಲಿ ಈಗ 0.318 ಟಿಎಂಸಿ ಅಡಿ ನೀರನ್ನು ಮಾತ್ರ ಬಳಸಲು ಅವಕಾಶ ಇದೆ. ಅಕಾಲಿಕ ಮಳೆ ಬಾರದಿದ್ದರೆ ಜಲಾಶಯದ ನೀರು ಮತ್ತಷ್ಟು ತಳಮಟ್ಟಕ್ಕೆ ಹೋಗಲಿದೆ.

ಬೀದರ್‌, ಹುಮನಾಬಾದ್, ಚಿಟಗುಪ್ಪ ಹಾಗೂ ಮೂರೂ ತಾಲ್ಲೂಕುಗಳ 16 ಹಳ್ಳಿಗಳಿಗೆ ಕಾರಂಜಾ ಜಲಾಶಯದಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕಳೆದ ವಾರ ಒಂದು ತಾಸು ಮಳೆ ಸುರಿದರೂ ನೀರು ಅಲ್ಲಲ್ಲೇ ಭೂಮಿಯಲ್ಲಿ ಇಂಗಿದೆ. ಜಲಾಶಯಕ್ಕೆ ಒಂದಿಂಚೂ ನೀರು ಹರಿದು ಬಂದಿಲ್ಲ. ಕುಡಿಯುವ ನೀರಿನ ಮೂಲವಾಗಿರುವ ಕಾರಂಜಾ ಜಲಾಶಯ ನಿಧಾನವಾಗಿ ಖಾಲಿಯಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

2017ರ ಸೆಪ್ಟೆಂಬರ್‌ನಲ್ಲಿ ಜಲಾಶಯ ಭರ್ತಿಯಾಗಿತ್ತು. ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಕಾರಣ ಜಲಾಶಯ ತುಂಬಿ ಹರಿದಿಲ್ಲ. ಮಳೆಯ ಕೊರತೆಯಿಂದ ಜಿಲ್ಲೆಯ ಮಾಂಜ್ರಾ ನದಿ ಆಗಲೇ ಬತ್ತಿದೆ. ಕೆರೆ ಹಾಗೂ ತೆರೆದ ಬಾವಿಗಳು ಬತ್ತಲು ಆರಂಭವಾಗಿವೆ. ಸಕಾಲದಲ್ಲಿ ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ.

ನಗರಸಭೆಯ ಸ್ಥಳೀಯ ಬಾವಿ ಹಾಗೂ ಕೊಳುವೆ ಬಾವಿಗಳಿಂದಲೂ ನೀರು ಸರಬರಾಜು ಮಾಡುತ್ತಿರುವ ಕಾರಣ ಸದ್ಯ ಗಂಭೀರ ಸಮಸ್ಯೆ ಕಂಡು ಬಂದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

ರೈತರು ಮೋಟರ್‌ ಬಳಸಿ ಹೊಲ ಗದ್ದೆಗಳಿಗೆ ನೀರು ಹರಿಸುತ್ತಿರುವ ಕಾರಣ ಜಲಾಶಯದಲ್ಲಿ
ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಇದೇ ಕಾರಣ ಜಿಲ್ಲಾಧಿಕಾರಿ ಆದೇಶವೊಂದನ್ನು ಹೊರಡಿಸಿ ಕುಡಿಯುವ ನೀರನ್ನು ಹೊಲಗದ್ದೆಗಳಿಗೆ ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.

‘ಬೀದರ್‌. ಹುಮನಾಬಾದ್‌ ಹಾಗೂ ಭಾಲ್ಕಿ ತಹಶೀಲ್ದಾರರಿಗೆ ಪತ್ರ ಬರೆದು ಅನಧಿಕೃತ ಪಂಪ್‌ಸೆಟ್‌ ಬಳಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಕಾರಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಸ್ವಾಮಿ ಹೇಳುತ್ತಾರೆ.

ಬೀದರ್‌ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಅನೇಕ ಫ್ಯಾಕ್ಟರಿ, ಹೋಟೆಲ್‌ ಹಾಗೂ ಲಾಡ್ಜ್‌ಗಳು ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಿವೆ. ನೀರಿನ ವಾಣಿಜ್ಯ ಬಳಕೆಯ ಪ್ರಮಾಣ ಕಡಿಮೆ ಇದೆ. ಲಾಕ್‌ಡೌನ್‌ ಮಾಡದೆ ಹೋಗಿದ್ದರೆ ನಗರದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಬೇಕಾದ ಸ್ಥಿತಿ ಬಂದೊದಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT