ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ ತೆಲಂಗಾಣಕ್ಕೆ ಗುಳೆ ಹೊರಟ ತಾಂಡಾ ಜನ

ಔರಾದ್‌: ಬತ್ತಿದ ಕೊಳವೆಬಾವಿ; ಬದುಕು ದುಸ್ತರ
Published 21 ಮಾರ್ಚ್ 2024, 16:25 IST
Last Updated 21 ಮಾರ್ಚ್ 2024, 16:25 IST
ಅಕ್ಷರ ಗಾತ್ರ

ಔರಾದ್ (ಬೀದರ್‌ ಜಿಲ್ಲೆ): ಈ ಬಾರಿ ಮಳೆ ಕೊರತೆಯಿಂದ ನೀರಿನ ಮೂಲಗಳು ಬತ್ತಿ ಹೋಗಿ ತಾಲ್ಲೂಕಿನ ಗಡಿ ಭಾಗದ ಜನ, ಜಾನುವಾರು ನೀರಿಗಾಗಿ ಪರಿತಪಿಸುವಂತಾಗಿದೆ.

ತಾಲ್ಲೂಕಿನ ಜಮಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಾರ್ಡರ್ ತಾಂಡಾದಲ್ಲಿ ಈ ಬಾರಿ ನೀರಿನ ಸಮಸ್ಯೆ ಪ್ರತಿ ಬಾರಿಗಿಂತಲೂ ಹೆಚ್ಚಾಗಿದೆ. ಇರುವ ಎರಡು ಕೊಳವೆಬಾವಿ ರೀಬೋರ್ ಮಾಡಿದರೂ ಹನಿ ನೀರು ಬಂದಿಲ್ಲ. ಬುಧವಾರ ಹೊಸದಾಗಿ 500 ಅಡಿ ಆಳದ ಕೊಳವೆಬಾವಿ ಕೊರೆದರೂ ವಿಫಲವಾಗಿದೆ. ಹೀಗಾಗಿ ತಾಂಡಾ ಜನ ನೀರಿಗಾಗಿ ಪಕ್ಕದ ತೆಲಂಗಾಣ ರಾಜ್ಯದ ಗ್ರಾಮಗಳಿಗೆ ವಲಸೆ ಹೋಗುತ್ತಿದ್ದಾರೆ.

‘ಎರಡು ತಿಂಗಳಿನಿಂದ ಅಲ್ಪಸ್ವಲ್ಪ ನೀರಿನಿಂದ ಜೀವನ ಮಾಡಿದೆವು. ಆದರೆ, ಈಗ ಎರಡು ವಾರಗಳಿಂದ ಹನಿ ನೀರಿಲ್ಲ. ಬದುಕು ಕಷ್ಟವಾಗಿದೆ. ನಮ್ಮ ಬದುಕಿಗೆ ಆಧಾರವಾಗಿರುವ ಜಾನುವಾರುಗಳನ್ನು ಬದುಕಿಸಿಕೊಳ್ಳಬೇಕು. ಹೀಗಾಗಿ ಜಾನುವಾರುಗಳೊಂದಿಗೆ ಪಕ್ಕದ ತೆಲಂಗಾಣದ ಕಡೆ ಹೋಗುತ್ತಿದ್ದೇವೆ’ ಎನ್ನುತ್ತಾರೆ ಬಾರ್ಡರ್ ತಾಂಡಾ ನಿವಾಸಿಗಳು.

‘ನೀರಿಲ್ಲದೆ ವಾರದಿಂದ ಸ್ನಾನ ಮಾಡಿಲ್ಲ. ಕುಡಿಯಲು 2 ಕಿ.ಮೀ. ದೂರದಿಂದ ತೋಟ– ಹೊಲಗಳನ್ನು ತಿರುಗಾಡಿ ನೀರು ತರಬೇಕಾಗಿದೆ. ಈ ಕಷ್ಟ ಇನ್ನೆಷ್ಟು ದಿನ ಇರುತ್ತದೋ ಆ ದೇವರೆ ಬಲ್ಲ’ ಎಂದು ತಾಂಡಾ ಮಹಿಳೆಯರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಇರುವ ಎರಡು ಕೊಳವೆಬಾವಿಯಲ್ಲಿ ನೀರಿಲ್ಲ. ಹೊಸದಾಗಿ ಕೊರೆದ ಬಾವಿಯಲ್ಲೂ ನೀರು ಬಂದಿಲ್ಲ. ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರ ಇದೆ. ಟ್ಯಾಂಕರ್ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ’ ಎಂದು ತಾಂಡಾದ ಮುಖಂಡ ಪಂಢರಿನಾಥ ಚವಾಣ್ ಹೇಳಿದ್ದಾರೆ.

‘ಜಮಗಿ ಪಂಚಾಯಿತಿಯಲ್ಲಿ ಬಾರ್ಡರ್ ತಾಂಡಾ, ಪೋಮಾ ತಾಂಡಾ ಹಾಗೂ ಡಾಕು ತಾಂಡಾಗಳಲ್ಲಿ ನೀರಿನ ಸಮಸ್ಯೆ ಇದೆ. ಇಲ್ಲಿ ಖಾಸಗಿಯವರಿಗೆ ಸೇರಿದ ನೀರಿನ ಮೂಲವೂ ಇಲ್ಲ. ಹೀಗಾಗಿ ಸಮಸ್ಯೆ ತೀವ್ರವಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶರಣಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT