ಗುರುವಾರ , ಜುಲೈ 7, 2022
21 °C
ಕಿರಗುಣವಾಡಿ: ಬತ್ತಿ ಹೋದ ಜಲಮೂಲಗಳು

ಔರಾದ್: ನೀರಿಲ್ಲದೆ ಗುಳೆ ಹೊರಟ ಗ್ರಾಮಸ್ಥರು, ಎರಡು ತಿಂಗಳಿನಿಂದ ಸಮಸ್ಯೆ

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ಬೇಸಿಗೆ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತೀವ್ರಗೊಳ್ಳುತ್ತಿದೆ.

ಬಹುತೇಕ ಮಳೆಯಾಶ್ರಿತ ಪ್ರದೇಶವಾದ ತಾಲ್ಲೂಕಿನಲ್ಲಿ ತಾಪ ಹೆಚ್ಚುತ್ತಿದ್ದಂತೆ ನೀರಿನ ಮೂಲಗಳು ಬತ್ತಿ ಹೋಗುತ್ತಿವೆ.

ಕುಡಿಯುವ ನೀರಿಗಾಗಿ ಜನ ತೆರೆದ ಬಾವಿ ಹಾಗೂ ಕೊಳವೆಬಾವಿಗಳನ್ನು ಅವಲಂಬಿಸಿದ್ದಾರೆ. ಈಗಾಗಲೇ ಸಾಕಷ್ಟು ಕಡೆ ತೆರೆದ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕೊಳವೆ ಬಾವಿಗಳು ಕೂಡ ಕೈಕೊಟ್ಟಿವೆ. ಹೀಗಾಗಿ ತಾಲ್ಲೂಕಿನ ಗಡಿ ಗ್ರಾಮಗಳ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪಕ್ಕದ ಮಹಾರಾಷ್ಟ್ರಕ್ಕೆ ಗುಳೆ ಹೋಗುವ ಅನಿವಾರ್ಯತೆ ಎದುರಾಗಿದೆ.

‘ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಕಿರಗುಣವಾಡಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೊಳವೆಬಾವಿ ಅವಲಂಬಿಸಿದ್ದಾರೆ. ಆದರೆ ಎರಡು ಕೊಳವೆಬಾವಿಗಳು ಬತ್ತಿವೆ. ಇರುವ ಒಂದು ಕೊಳವೆ ಬಾವಿಯಲ್ಲಿ ಗಂಟೆಗೆ ಒಂದು ಕೊಡ ನೀರು ಬರುತ್ತಿದೆ. ಇದರಿಂದ ಇಡೀ ಊರಿನ ಜನ ಅಹೋರಾತ್ರಿ ಕೊಡ ನೀರಿಗಾಗಿ ಸರತಿಗಾಗಿ ನಿಲ್ಲಬೇಕಾಗಿದೆ’ ಎಂದು ಗ್ರಾಮದ ಜನ ಹೇಳುತ್ತಾರೆ.

‘ಪ್ರತಿ ವರ್ಷ ಬೇಸಿಗೆಯಲ್ಲಿ ನಮ್ಮ ಊರಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಕಳೆದ ಎರಡು ತಿಂಗಳಿನಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಆದರೆ ಸಂಬಂಧಿಸಿದವರು ನಮ್ಮ ಊರಲ್ಲಿ ಒಂದು ಹೊಸ ಕೊಳವೆಬಾವಿ ತೋಡಲು ತಯಾರಿಲ್ಲ’ ಎಂದು ಗ್ರಾಮದ ಹಿರಿಯ ಜೀವಿ ಕೊಂಡಿಬಾರಾವ ಪಾಟೀಲ ಆಕ್ರೋಶ ಹೊರ ಹಾಕಿದ್ದಾರೆ.

‘ನಮಗೆ ಕುಡಿಯುವ ನೀರಿನ ಸಮಸ್ಯೆ ತುಂಬಾ ಕಾಡುತ್ತಿದೆ. ನಮ್ಮ ಮೂಲ ಕಸಬು ಜಾನುವಾರು ಸಾಕಾಣಿಕೆ. ಜಾನುವಾರುಗಳಿಗೆ ನೀರು ಸಿಗುವುದಿಲ್ಲ ಎಂದರೆ ನಾವು ಊರಲ್ಲಿ ಇರಲು ಆಗುವುದಿಲ್ಲ. ಹೀಗಾಗಿ ಅನೇಕ ರೈತ ಕುಟುಂಬಗಳು ಪಕ್ಕದ ಮಹಾರಾಷ್ಟ್ರದ ಕಬೀರವಾಡಿಗೆ ಗುಳೆ ಹೊರಟಿವೆ’ ಎಂದು ವೆಂಕಟರಾವ ಪಾಟೀಲ ಸಮಸ್ಯೆಯ ಗಂಭೀರತೆ ವಿವರಿಸಿದ್ದಾರೆ.

‘ಎರಡು ತಿಂಗಳಿನಿಂದ ಸಮಸ್ಯೆ ಪರಿಸಬೇಕು ಎಂದು ಒತ್ತಾಯಿಸಿ ಹಲವು ಸಲ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಮಾಡುತ್ತೇವೆ, ನೋಡುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ’ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಕಿರಗುಣವಾಡಿಯಲ್ಲಿ ಇರುವ ನೀರಿನ ಮೂಲ ಬತ್ತಿ ಹೋಗಿದೆ. ಒಂದು ಕೊಳವೆಬಾವಿಯಲ್ಲಿ ಮಾತ್ರ ನೀರು ಬರುತ್ತಿದೆ. ಅಲ್ಲಿ ಹೊಸ ಕೊಳವೆ ಬಾವಿ ಕೊರೆಯಲು ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ ನೀಡಿದ್ದಾರೆ. ಹೊಸ ಕೊಳವೆ ಬಾವಿಯಲ್ಲೂ ನೀರು ಸಿಗದೆ ಇದ್ದಾಗ ಆ ಊರಿಗೆ ಟ್ಯಾಂಕರ್ ವ್ಯವಸ್ಥೆ ಮಾಡುವುದು ಅನಿವಾರ್ಯವಾಗಲಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು