ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಅಂತರ್ಜಲ | ನೀರಿಲ್ಲದೆ ಒಣಗುತ್ತಿದೆ ಕಬ್ಬು: ಆರ್ಥಿಕ ಸಂಕಷ್ಟದಲ್ಲಿ ಅನ್ನದಾತ

ಹೈನೋದ್ಯಮಕ್ಕೂ ತಟ್ಟಿದ ಮಳೆ ಅಭಾವದ ಬಿಸಿ
ಗುರುಪ್ರಸಾದ ಮೆಂಟೆ
Published 29 ಏಪ್ರಿಲ್ 2024, 6:27 IST
Last Updated 29 ಏಪ್ರಿಲ್ 2024, 6:27 IST
ಅಕ್ಷರ ಗಾತ್ರ

ಹುಲಸೂರ: ತಾಲ್ಲೂಕಿನಲ್ಲಿ ಬರಗಾಲ ಆವರಿಸಿದ್ದು, ತಾಲ್ಲೂಕಿನ ಪ್ರಮುಖ ಆರ್ಥಿಕ ಬೆಳೆಯಾದ ಕಬ್ಬು ಸೇರಿದಂತೆ ಎಲ್ಲಾ ರೀತಿಯ ಬೆಳೆಗಳು ಒಣಗಿ ಹೋಗಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತ ದಾಖಲಿಸಿದ್ದು, ಕೊಳವೆಬಾವಿಗಳನ್ನು ಆಶ್ರಯಿಸಿದ್ದ ರೈತರೂ ಕೂಡ ಬೆಳೆಗಳನ್ನು ಕಳೆದುಕೊಳ್ಳುವಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

‘ದಿನದಿಂದ ದಿನಕ್ಕೆ ಬಿಸಿಲು ಹೆಚ್ಚಾಗುತ್ತಿರುವುದರಿಂದ ತೆರೆದ ಬಾವಿಗಳ ಮತ್ತು ಕೊಳವೆ ಬಾವಿಗಳ ನೀರು ಬತ್ತಿ ಹೋಗುತ್ತಿದೆ. ಇನ್ನೊಂದೆಡೆ ಬೆಳೆಗಳಿಗೆ ಎಷ್ಟು ನೀರು ಉಣಿಸಿದರೂ ಮತ್ತೇ ಎರಡು ದಿನದಲ್ಲಿ ಭೂಮಿ ಒಣಗುತ್ತಿದೆ. ಹೀಗಾಗಿ ಬೆಳೆಗಳು ಒಣಗುತ್ತಿವೆ’ ಎಂದು ರೈತರು ಹೇಳುತ್ತಾರೆ.

‘ನೆರೆ ರಾಜ್ಯ ಮಹಾರಾಷ್ಟ್ರದಿಂದ ಮಾಂಜ್ರಾ ನದಿಗೆ ನೀರು ಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಬೇಕು. ನದಿಗೆ ನೀರು ಬಿಟ್ಟಿದ್ದರೆ ಕೈಗೆ ಬಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರಲಿಲ್ಲ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಭಾಗದ ಮಿರಖಲ, ಜಮಖಂಡಿ, ಹುಲಸೂರ, ಕೋಂಗಳಿ, ಮೆಹಾಕರ, ಹಲಸಿ ತುಗಾಂವ್, ದೇವನಾಳ, ಗಡಿ ಗೌಡಗಾಂವ್, ಸಾಯಗಾಂವ್, ಬೋಳೆಗಾಂವ್, ನಾರದ ಸಂಗಮ, ಶ್ರೀಮಾಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಶೇ 30 ರಿಂದ 40 ಭಾಗದ ಅಚ್ಚುಕಟ್ಟು ಪ್ರದೇಶದಲ್ಲಿ ಮಾತ್ರ ರೈತರು ಬಿತ್ತನೆ ಮಾಡಿದ್ದರು. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಉಳಿದ ಶೇಕಡಾ 60 ರಷ್ಟು ಜಮೀನಿನಲ್ಲಿ ರೈತರು ಬೆಳೆ ಬಿತ್ತನೆ ಮಾಡಲೂ ಹಿಂದೇಟು ಹಾಕಿದ್ದರು.

ಜನವರಿ ತಿಂಗಳ ಕಬ್ಬಿನ ಫಸಲು, ಸ್ವಲ್ಪ ತಡವಾಗಿ ನಾಟಿ ಮಾಡಿದ್ದು ಸೇರಿದಂತೆ ಇತರೆ ಎಲ್ಲಾ ಬೆಳೆಗಳು, ಅದರಲ್ಲೂ ತೆರದ ಬಾವಿ/ ಕೊಳವೆ ಬಾವಿ ಆಶ್ರಿತ ಪ್ರದೇಶಗಳಲ್ಲಿನ ಬೆಳೆಗಳು ಕಳೆದ ತಿಂಗಳಿನವರೆಗೂ ಹಚ್ಚ ಹಸಿರಾಗಿದ್ದವು. ನದಿಯು ಸಂಪೂರ್ಣ ಬತ್ತಿ ಹೊದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿ ಹಳ್ಳಗಳಲ್ಲಿ ನೀರಿಲ್ಲದೆ ಎಲ್ಲಾ ಬೆಳೆ ಒಣಗಿ ಬರಿದಾಗಿವೆ.

- ನಾಗೇಶ್ ಚೌರೆ ರೈತ ಹುಲಸೂರ
- ನಾಗೇಶ್ ಚೌರೆ ರೈತ ಹುಲಸೂರ
ಆರು ಎಕರೆ ಪ್ರದೇಶದಲ್ಲಿ ಸಾಲ ಮಾಡು ಕಬ್ಬು ಬೆಳೆದಿದ್ದು ನೀರಿಲ್ಲದ ಕಾರಣ ಒಣಗಿದೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭಯ ಕಾಡುತ್ತಿದೆ
- ನಾಗೇಶ್ ಚೌರೆ ರೈತ ಹುಲಸೂರ
- ದೇವೇಂದ್ರ ಹಲಿಂಗೆ ರೈತ ಮುಖಂಡ
- ದೇವೇಂದ್ರ ಹಲಿಂಗೆ ರೈತ ಮುಖಂಡ
ಮಾಂಜ್ರಾ ನದಿಗೆ ನೀರು ಬಿಡದ ಕಾರಣ ತಾಲ್ಲೂಕಿನ ಸುತ್ತಲಿನ 500 ಎಕರೆಗೂ ಹೆಚ್ಚಿನ ಪ್ರದೇಶದ ಬೆಳೆಗಳು ರೈತರ ಕೈತಪ್ಪಲಿವೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು
- ದೇವೇಂದ್ರ ಹಲಿಂಗೆ ರೈತ ಮುಖಂಡ
ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ
ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ
ಕೆಲವರು ಕೊಳವೆ ಬಾವಿಯಿಂದ ನೀರೆತ್ತಿ ಹಸುಗಳಿಗೆ ಕುಡಿಸುತ್ತಿದ್ದಾರೆ. ಹುಲ್ಲು ತಿಂದರೆ ಮಾತ್ರ ಹಸುಗಳು ಉತ್ತಮ ಹಾಲು ಕೊಡುತ್ತವೆ
- ಪ್ರವೀಣ್ ಜೀರೋಬೇ ಹಾಲಿನ ಡೈರಿ ಮೆಹಕರ ಗ್ರಾಮ

ಹೈನೋದ್ಯಮಕ್ಕೂ ಕುತ್ತು:

ಮಳೆ ಇಲ್ಲದೇ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳಿಗೆ ಕುಡಿಯಲು ಮತ್ತು ಕೃಷಿಗೆ ನೀರಿಲ್ಲದಂತಾಗಿದೆ. ಜಾನುವಾರುಗಳಿಗೆ ಆಹಾರಕ್ಕೂ ಹಾಹಾಕಾರ ಎದುರಾಗಿದೆ. ಕುಟುಂಬದ ಆರ್ಥಿಕ ಸಂಪನ್ಮೂಲಕ್ಕೆ ಮೂಲಾಧಾರವಾಗಿದ್ದ ಹಸುಗಳಿಗೆ ಆಹಾರ ದೊರಕದೇ ಹಾಲಿನ ಪ್ರಮಾಣ ಇಳಿಮುಖವಾಗುತ್ತಿದೆ. ಒಂದು ಹಸುವಿನಿಂದ ಪ್ರತಿದಿನ ಹತ್ತು ಲೀಟರ್ ಹಾಲು ಕರೆಯುತ್ತಿದ್ದವರೂ ಈಗ ಐದು ಲೀಟರ್‌ಗೆ ಇಳಿದಿದೆ. ‘ಹಸುಗಳಿಗೆ ಹಿಂಡಿ ಮತ್ತು ಪಶು ಆಹಾರವನ್ನು ಎಷ್ಟೇ ಹಾಕಿದರೂ ಭೂಮಿಯಲ್ಲಿರುವ ಅಲ್ಪಸ್ವಲ್ಪ ಹುಲ್ಲನ್ನು ಆಹಾರವಾಗಿ ಸೇವಿಸಿದರೆ ಮಾತ್ರ ಹಾಲಿನ ಪ್ರಮಾಣ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಹಾಲಿನ ಪ್ರಮಾಣ ಕುಸಿಯುತ್ತದೆ’ ಎನ್ನುತ್ತಾರೆ ರೈತರು.

ಕೆರೆ ಕಟ್ಟೆಗಳಲ್ಲಿ ನೀರಿಲ್ಲದಿರುವುದರಿಂದ ಅಲ್ಲಿ ದೊರಕುವ ಗೋಡು ಮಣ್ಣನ್ನು ರೈತರು ಕೃಷಿ ಭೂಮಿಗಳಿಗೆ ರವಾನಿಸುತ್ತಿದ್ದು ಕೆರೆ ಅಂಗಳದಲ್ಲಿ ಹುಲ್ಲು ಇಲ್ಲವಾಗಿದೆ. ಮಳೆ ಆಗದಿರುವುದರಿಂದ ಬೇರೆಲ್ಲೂ ಹುಲ್ಲು ಬೆಳೆದಿಲ್ಲ. ಹಸುಗಳು ಮೇವಿಲ್ಲದೆ ಸೊರಗುವಂತಾಗಿವೆ. ‘ಮಳೆಯಿಲ್ಲದೆ ಒಂದೆಡೆ ಕುಡಿಯಲು ನೀರಿಲ್ಲ. ಜಾನುವಾರುಗಳಿಗೆ ಮೇಯಲು ಹುಲ್ಲು ಇಲ್ಲ. 15 ದಿನಗಳಿಂದ ಡೈರಿಗೆ ಬರುತ್ತಿದ್ದ ಹಾಲು ಶೇ 50 ರಷ್ಟು ಕಡಿಮೆಯಾಗಿದೆ. ಹೈನೋದ್ಯಮ ಕುಂಠಿತಗೊಳ್ಳುತ್ತಿರುವುದರಿಂದ ಇದನ್ನೇ ನಂಬಿದ ಕುಂಟುಂಬಗಳು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿವೆ ಸರ್ಕಾರ ನೆರವಿಗೆ ಬರಬೇಕು’ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT