ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಸುಳ್ಳು ಸುದ್ದಿ; ಇ–ಕೆವೈಸಿಗೆ ಮುಗಿಬಿದ್ದ ಜನ

ಗ್ಯಾಸ್‌ ಏಜೆನ್ಸಿಗಳ ಎದುರು ನೂಕು ನುಗ್ಗಲು; ಕೆಲಸ ಬಿಟ್ಟು ಸರತಿಯಲ್ಲಿ ನಿಲ್ಲುತ್ತಿರುವ ಜನ
Published 28 ಡಿಸೆಂಬರ್ 2023, 6:07 IST
Last Updated 28 ಡಿಸೆಂಬರ್ 2023, 6:07 IST
ಅಕ್ಷರ ಗಾತ್ರ

ಬೀದರ್‌: ಗ್ಯಾಸ್‌ ಅನಿಲ ಸಂಪರ್ಕ ಹೊಂದಿದವರು ಕಡ್ಡಾಯವಾಗಿ ಇ–ಕೆವೈಸಿ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ, ಅದರ ದಿನಾಂಕ ಕೂಡ ವಿಸ್ತರಿಸಿದೆ. ಆದರೆ, ಆ ವಿಷಯ ಹೆಚ್ಚಿನವರಿಗೆ ಗೊತ್ತಿಲ್ಲದ ಕಾರಣ ಜನ ಗ್ಯಾಸ್‌ ಏಜೆನ್ಸಿಗಳ ಕಚೇರಿ ಎದುರು ತಾ ಮುಂದು, ನಾ ಮುಂದು ಎಂದು ಮುಗಿ ಬೀಳುತ್ತಿದ್ದಾರೆ. ನಿತ್ಯ ನೂಕು ನುಗ್ಗಲು ಉಂಟಾಗುತ್ತಿದೆ.

ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, ಗ್ಯಾಸ್‌ ಸಂಪರ್ಕ ಹೊಂದಿದ ಪ್ರತಿಯೊಬ್ಬರೂ ಡಿಸೆಂಬರ್‌ 31ರೊಳಗೆ ಇ–ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ತಿಳಿಸಲಾಗಿತ್ತು. ಬಳಿಕ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿ, 2024ರ ಮಾರ್ಚ್‌ 31ರೊಳಗೆ ಇ–ಕೆವೈಸಿ ಮಾಡಿಸಬೇಕೆಂದು ಸೂಚಿಸಿದೆ. ಆದರೆ, ದಿನಾಂಕ ವಿಸ್ತರಿಸಿದ ವಿಷಯದ ಕುರಿತು ಸೂಕ್ತ ರೀತಿಯಲ್ಲಿ ಪ್ರಚಾರವಾಗಿಲ್ಲ. ಜನರಿಗೆ ವಿಷಯ ತಿಳಿಯದ ಕಾರಣ ನಿತ್ಯ ಗ್ಯಾಸ್‌ ಏಜೆನ್ಸಿ ಕಚೇರಿಗಳಿಗೆ ದೌಡಾಯಿಸುತ್ತಿದ್ದಾರೆ. ದೈನಂದಿನ ಕೆಲಸ ಬಿಟ್ಟು ಅಲ್ಲಿಯೇ ಹೋಗುತ್ತಿರುವುದರಿಂದ ಕಚೇರಿಗಳ ಎದುರು ನಿತ್ಯ ಜನಜಾತ್ರೆ ಕಂಡು ಬರುತ್ತಿದೆ. ಅದರಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ನಗರದ ಓಲ್ಡ್‌ ಸಿಟಿ ಸೇರಿದಂತೆ ಎಲ್ಲ ಗ್ಯಾಸ್‌ ಏಜೆನ್ಸಿಗಳ ಎದುರು ಭಾರಿ ಪ್ರಮಾಣದಲ್ಲಿ ಜನ ಸೇರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದನ್ನು ನೋಡಿ ಕೆಲವರು ಏನಾಗಿದೆ ಎಂದು ವಿಚಾರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಇ–ಕೆವೈಸಿ ಪೂರ್ಣಗೊಳಿಸಿದ ನಂತರ ₹500 ಬೆಲೆಗೆ ಒಂದು ಸಿಲಿಂಡರ್‌ ನೀಡುತ್ತಾರೆ. ಒಂದುವೇಳೆ ಇ–ಕೆವೈಸಿ ಮಾಡಿಸದಿದ್ದರೆ ಗ್ಯಾಸ್‌ ಸಂಪರ್ಕ ಕಡಿತಗೊಳಿಸುತ್ತಾರೆ ಎಂಬ ಸುಳ್ಳು ಸುದ್ದಿ ಕೂಡ ವ್ಯಾಪಕವಾಗಿ ಹರಡಿದೆ. ಜನ ಅದನ್ನೇ ಸತ್ಯವೆಂದು ನಂಬಿ ಬೇಗ ಇ–ಕೆವೈಸಿ ಮುಗಿಸಿ ಅದರ ಪ್ರಯೋಜನ ಪಡೆಯಬೇಕು. ಸಂಪರ್ಕ ಕಡಿತದಿಂದ ದೂರ ಇರಬೇಕು ಎಂಬ ಭಾವನೆಯಿಂದ ಗ್ಯಾಸ್‌ ಏಜೆನ್ಸಿಗಳಿಗೆ ಹೋಗುತ್ತಿದ್ದಾರೆ. ಇದರಿಂದ ಏಜೆನ್ಸಿಯವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನರನ್ನು ನಿಯಂತ್ರಿಸಲು ಹೆಣಗಾಟ ನಡೆಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

‘ಸರ್ಕಾರ ಇ–ಕೆವೈಸಿ ಕುರಿತು ಸೂಕ್ತ ರೀತಿಯಲ್ಲಿ ಜಾಗೃತಿ ಮೂಡಿಸಬೇಕು. ಇನ್ನೂ ಸಾಕಷ್ಟು ಕಾಲಾವಕಾಶ ಇದೆ. ಎಲ್ಲರೂ ಸುಲಭವಾಗಿ ಮಾಡಿಸಬಹುದು. ಅನಗತ್ಯವಾಗಿ ಜನ ಸೇರುತ್ತಿದ್ದಾರೆ. ಕೇಳಬಾರದ ಪ್ರಶ್ನೆಗಳನ್ನೆಲ್ಲ ಕೇಳಿ ಕಾಲಹರಣ ಮಾಡುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಗ್ಯಾಸ್‌ ಡೀಲರ್‌ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ಯಾಸ್‌ ಏಜೆನ್ಸಿ ಕೌಂಟರ್‌ನಲ್ಲಿ ಇ–ಕೆವೈಸಿ ಮಾಡಿಸುತ್ತಿರುವ ಜನ
ಗ್ಯಾಸ್‌ ಏಜೆನ್ಸಿ ಕೌಂಟರ್‌ನಲ್ಲಿ ಇ–ಕೆವೈಸಿ ಮಾಡಿಸುತ್ತಿರುವ ಜನ
ಸುಳ್ಳು ಸುದ್ದಿ ಹರಡಿದ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ಜನ ಇ–ಕೆವೈಸಿ ಮಾಡಿಸಲು ಬರುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ.
–ಸಚಿನ್‌ ಗ್ರಾಮಲೇ ಹಿಂದೂಸ್ತಾನ ಗ್ಯಾಸ್‌ ಡೀಲರ್‌ ಬೀದರ್‌
ಇ–ಕೆವೈಸಿ ಮಾಡಿಸಿದರೆ ಅರ್ಧ ಬೆಲೆಗೆ ಸಿಲಿಂಡರ್‌ ಕೊಡುತ್ತಾರೆ ಎಂದು ವಿಷಯ ತಿಳಿಯಿತು. ಕೂಲಿ ಕೆಲಸ ಬಿಟ್ಟು ಅದನ್ನು ಮಾಡಿಸಲು ಬಂದಿರುವೆ.
–ಗಂಗಮ್ಮ ಚಿಟ್ಟಾ ನಿವಾಸಿ

ಔರಾದ್‌ನಲ್ಲೂ ನೂಕು ನುಗ್ಗಲು

ಅಡುಗೆ ಅನಿಲ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯ ಮಾಡಿರುವುದರಿಂದ ಗ್ರಾಹಕರು ಅದಕ್ಕಾಗಿ ನೂಕು ನುಗ್ಗಲಿನಲ್ಲಿ ಪರದಾಡುವ ದೃಶ್ಯ ಔರಾದ್‌ ಪಟ್ಟಣದಲ್ಲಿ ಬುಧವಾರ ಕಂಡು ಬಂತು. ಪಟ್ಟಣದ ಭಾರತ ಗೌರಿ ಗ್ಯಾಸ್ ಏಜೆನ್ಸಿ ಬಳಿ ಗ್ರಾಹಕರು ಇ-ಕೆವೈಸಿ ಮಾಡಿಸಲು ಮುಗಿ ಬೀಳುತ್ತಿದ್ದಾರೆ. ಆಧಾರ್ ಕಾರ್ಡ್ ಕೊಟ್ಟು ಇ-ಕೆವೈಸಿ ಮಾಡಿಸದಿದ್ದರೆ ನಮ್ಮ ಅಡುಗೆ ಅನಿಲ ಸಂಪರ್ಕ ಕಡಿತ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ನಾವು ಇದಕ್ಕಾಗಿ ಬೆಳಿಗ್ಗೆಯಿಂದಲೇ ಇಲ್ಲಿ ನಿಂತಿದ್ದೇವೆ ಎಂದು ಸರತಿಯಲ್ಲಿ ನಿಂತಿರುವ ಮಹಿಳೆಯೊಬ್ಬರು ತಿಳಿಸಿದರು. ‘ಅಡುಗೆ ಅನಿಲ ಗ್ರಾಹಕರಿಗೆ ಇ-ಕೆವೈಸಿ ಮಾಡಿಸಲು ನಮಗೆ ಕಂಪನಿಯಿಂದ ಮಾಹಿತಿ ಬಂದಿದೆ. ಹೀಗಾಗಿ ಎಲ್ಲ ಗ್ರಾಹಕರ ಇ-ಕೆವೈಸಿ ಮಾಡಿಸುತ್ತಿದ್ದೇವೆ. ಡೆಲಿವರಿ ಬಾಯ್‍ಗಳು ಆಯಾ ಗ್ರಾಹಕರ ಮನೆಗೆ ಹೋಗಿ ಮೊಬೈಲ್‍ನಲ್ಲಿ ಇ-ಕೆವೈಸಿ ಮಾಡುವ ವ್ಯವಸ್ಥೆ ಮಾಡಿದ್ದೇವೆ. ಸಾಧ್ಯವಾದವರು ಗ್ಯಾಸ್ ಏಜೆನ್ಸಿ ಕೇಂದ್ರಕ್ಕೆ ಬಂದು ಇ-ಕೆವೈಸಿ ಮಾಡಿಕೊಳ್ಳಬಹುದು. ಅಡುಗೆ ಅನಿಲ ಗ್ರಾಹಕರಿಗೆ ಇ-ಕೆವೈಸಿ ಮಾಡಲು ಕಂಪನಿಯವರು ತಿಳಿಸಿದ್ದಾರೆ. ಆದರೆ ಅದಕ್ಕಾಗಿ ದಿನಾಂಕ ನಿಗದಿ ಮಾಡಿಲ್ಲ. ಗ್ರಾಹಕರು ಆತುರ ಪಡಬಾರದು’ ಎಂದು ಇಲ್ಲಿಯ ಗೌರಿ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಮೀಸೆ ತಿಳಿಸಿದ್ದಾರೆ.

ಅನ್ನಭಾಗ್ಯ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಶಿಬಿರ :

ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ವ್ಯಾಪ್ತಿಗೆ ಸೇರದವರಿಗೆ ಸೂಕ್ತ ತಿಳಿವಳಿಕೆ ಮೂಡಿಸಿ ಅದರ ಲಾಭ ದೊರಕಿಸಿಕೊಡಲು ಆಹಾರ ಇಲಾಖೆ ಮುಂದಾಗಿದ್ದು ಡಿ. 28 29ರಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಶಿಬಿರಗಳನ್ನು ಆಯೋಜಿಸಿದೆ. ಜನ ಶಿಬಿರಗಳಲ್ಲಿ ಭಾಗವಹಿಸಿ ಎರಡೂ ಯೋಜನೆಗಳ ಲಾಭ ಯಾವ ರೀತಿ ಪಡೆಯಬೇಕು ಎಂಬ ಮಾಹಿತಿ ಪಡೆಯಬಹುದು. ಬ್ಯಾಂಕ್‌ ಖಾತೆ ಇಲ್ಲದವರು ಪಡಿತರ ಚೀಟಿಗಳಲ್ಲಿ ಇ–ಕೆವೈಸಿ ಮಾಡಿಸದವರು ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಆದಷ್ಟು ಶೀಘ್ರ ಸರಿಪಡಿಸಿಕೊಂಡರೆ ಯೋಜನೆಗೆ ಅರ್ಹರಾಗುವರು. ಅಂತಹವರ ಹೆಸರು ಆಯಾ ನ್ಯಾಯಬೆಲೆ ಅಂಗಡಿಗಳ ಎದುರು ಹಾಕಲಾಗುವುದು. ಜನವರಿಯಿಂದ ನೇರ ನಗದು ವರ್ಗಾವಣೆಯ ಪ್ರಯೋಜನ ಪಡೆಯಬಹುದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT