ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಹೆಚ್ಚುವರಿ ಟ್ಯಾಂಕರ್: ಕಾಶೆಂಪೂರ ಸೂಚನೆ

ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಸೂಚನೆ
Last Updated 3 ಜೂನ್ 2019, 14:15 IST
ಅಕ್ಷರ ಗಾತ್ರ

ಬೀದರ್: ‘ಕುಡಿಯುವ ನೀರಿನ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಲು ಸದ್ಯ ಇರುವ ಟ್ಯಾಂಕರ್‌ಗಳ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 10 ಟ್ಯಾಂಕರ್‌ಗಳನ್ನು ಒದಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಬರ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಹೆಚ್ಚುವರಿ ಟ್ಯಾಂಕರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಟ್ಯಾಂಕರ್‌ ನೀರು ಪೂರೈಕೆ ಮಾಡಬೇಕು. ನೀರಿನ ಸಮಸ್ಯೆ ಅರಿಯಲು ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಡಬೇಕು. ಕಿರಿಯ ಎಂಜಿನಿಯರ್‌ಗಳು ಕೇಂದ್ರ ಸ್ಥಾನದಲ್ಲಿ ಇರಬೇಕು’ ಎಂದು ತಿಳಿಸಿದರು.

‘ಸಮಸ್ಯಾತ್ಮಕ ಗ್ರಾಮಗಳಿಗೆ ಜೂನ್ 20 ರ ವರೆಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಹೊಸದಾಗಿ ಕೊರೆಯಲಾದ ಕೊಳವೆಬಾವಿಗಳಿಗೆ ಕೂಡಲೇ ಮೋಟರ್ ಅಳವಡಿಸಬೇಕು. ವಾರದಲ್ಲಿ ಎರಡು ದಿನದ ಬದಲು ಬೀದರ್ ನಗರದಲ್ಲಿ ಎರಡು ದಿನಕ್ಕೊಮ್ಮೆ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ ನೀರು ಪೂರೈಸಬೇಕು. ಪ್ರತಿ ಹೋಬಳಿಗೊಂದು ಮೇವು ಕೇಂದ್ರ ತೆರೆಯಬೇಕು’ ಎಂದು ನಿರ್ದೇಶನ ನೀಡಿದರು.

ಔರಾದ್‌ನಲ್ಲಿ ನೀರಿನ ಸಮಸ್ಯೆ ಗಂಭೀರ:‘ಔರಾದ್ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಎಕಲಾರ, ಎಕಲಾರ ತಾಂಡಾ, ಮಾಣಿಕ ತಾಂಡಾ, ಪಾಶಾಪುರ, ಸಂತಪುರ, ಹೆಡಗಾಪುರ, ಹಲ್ಲ್ಯಾಳ ಸೇರಿದಂತೆ 28 ಗ್ರಾಮಗಳಲ್ಲಿ ತೀವ್ರ ಸಮಸ್ಯೆ ಉಲ್ಬಣಗೊಂಡಿದೆ. ನೀರಿಗಾಗಿ ನಿತ್ಯ ಜಗಳಗಳು ನಡೆಯುತ್ತಿವೆ’ ಎಂದು ಔರಾದ್ ಶಾಸಕ ಪ್ರಭು ಚವಾಣ್‌ ಸಭೆಯ ಗಮನ ಸೆಳೆದರು.

‘ಸಣ್ಣ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬಹುದು. ಆದರೆ, ನಾಲ್ಕು-ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಗಳಿಗೆ ಸರಬರಾಜು ಮಾಡುವುದು ಕಷ್ಟ. ಅಂಥ ಗ್ರಾಮಗಳಲ್ಲಿ ಜಲಮೂಲಗಳ ಸಮೀಕ್ಷೆ ನಡೆಸಿ 50 ಹೊಸ ಕೊಳವೆಬಾವಿಗಳನ್ನು ಕೊರೆಸಬೇಕು’ ಎಂದು ಒತ್ತಾಯಿಸಿದರು.

‘ತಾಲ್ಲೂಕಿನಲ್ಲಿ 25-30 ಕಡೆಗಳಲ್ಲಿ ಕೊಳವೆಬಾವಿ ಕೊರೆಸಿದರೂ ಮೋಟರ್ ಕೂಡಿಸಿಲ್ಲ. ಧನಸಿಂಗ್ ತಾಂಡಾದಲ್ಲಿ ಕೊಳವೆಬಾವಿ ಕೊರೆದು ಮೂರು ತಿಂಗಳಾದರೂ ಮೋಟರ್ ಅಳವಡಿಸಿಲ್ಲ. ಕೊಳವೆಬಾವಿಗಳಿಗೆ ತಕ್ಷಣ ಮೋಟರ್ ಅಳವಡಿಸಬೇಕು. ಮೇವು ಕೇಂದ್ರ, ಗೋಶಾಲೆ ಆರಂಭಿಸಬೇಕು. ಅಧಿಕಾರಿಗಳು ಮೊಬೈಲ್ ಕರೆಗಳನ್ನು ಸ್ವೀಕರಿಸಿ ಜನರ ಸಮಸ್ಯೆಗೆ ತುರ್ತಾಗಿ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಆಡಳಿತ ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿದೆ. ಬೀದರ್ ನಗರದಲ್ಲಿ ದಿನದ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಯ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ವಾರದಲ್ಲಿ ಒಂದೆರಡು ಬಾರಿ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ರಘುನಾಥ ಮಲ್ಕಾಪುರೆ ಆರೋಪಿಸಿದರು.

ಔರಾದ್ ತಾಲ್ಲೂಕಿನಲ್ಲಿ 108 ಕೊಳವೆಬಾವಿಗಳನ್ನು ಕೊರೆಸಲಾಗಿದೆ. 41 ರಲ್ಲಿ ಕಡಿಮೆ ನೀರು ಇದೆ. 46 ಕೊಳವೆಬಾವಿಗಳಿಗೆ ಮೋಟರ್ ಕೂಡಿಸಲಾಗಿದೆ. ಇನ್ನೂ 9ಕ್ಕೆ ಮೋಟರ್ ಅಳವಡಿಸಬೇಕಿದೆ. 50 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಭಾಲ್ಕಿ ತಾಲ್ಲೂಕಿನ 54 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. 24 ಟ್ಯಾಂಕರ್ ಮೂಲಕ ನಿತ್ಯ 103 ಟ್ರಿಪ್ ನೀರು ಪೂರೈಕೆ ಮಾಡಲಾಗುತ್ತಿದೆ. 76 ಖಾಸಗಿ ಕೊಳವೆಬಾವಿಗಳ ಸೇವೆ ಪಡೆದುಕೊಳ್ಳಲಾಗಿದೆ ಎಂದು ಭಾಲ್ಕಿ ತಹಶೀಲ್ದಾರ್ ತಿಳಿಸಿದರು.

ಬೀದರ್ ತಾಲ್ಲೂಕಿನ 16 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. 19 ಗ್ರಾಮಗಳಲ್ಲಿ 33 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದು ಬೀದರ್ ತಹಶೀಲ್ದಾರ್ ಹೇಳಿದರು.

ಬಸವಕಲ್ಯಾಣ ತಾಲ್ಲೂಕಿನ 22 ಗ್ರಾಮಗಳಿಗೆ 31 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. 28 ಖಾಸಗಿ ಕೊಳವೆಬಾವಿಗಳ ಸೇವೆ ಪಡೆದುಕೊಳ್ಳಲಾಗುತ್ತಿದೆ ಎಂದು ಬಸವಕಲ್ಯಾಣ ತಹಶೀಲ್ದಾರ್ ತಿಳಿಸಿದರು.

ಹುಮನಾಬಾದ್ ತಾಲ್ಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ. ಟ್ಯಾಂಕರ್ ಮೂಲಕ ಯಾವ ಗ್ರಾಮಕ್ಕೂ ನೀರು ಸರಬರಾಜು ಮಾಡುತ್ತಿಲ್ಲ. ಆದರೆ, 9 ಗ್ರಾಮಗಳಲ್ಲಿ ನೀರು ಪೂರೈಕೆಗಾಗಿ 11 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದು ಹುಮನಾಬಾದ್ ತಹಶೀಲ್ದಾರ್ ಹೇಳಿದರು.

ಬೀದರ್ ನಗರದಲ್ಲಿ ದಿನದ 24 ಗಂಟೆ ನೀರು ಪೂರೈಕೆ ಯೋಜನೆ ಪೂರ್ಣಗೊಂಡಿಲ್ಲ. ವಿದ್ಯುತ್‌ ಸಹ ಕೈಕೊಡುತ್ತಿದೆ. ಹೀಗಾಗಿ ನೀರಿನ ಸಮಸ್ಯೆ ಇದೆ. ನಗರದಲ್ಲಿ 3 ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಬೀದರ್ ನಗರಸಭೆಯ ಎಇಇ ಮೊಯಿಸ್ ಹುಸೇನ್ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ನಾರಾಯಣರಾವ್, ಸಂಸದ ಭಗವಂತ ಖೂಬಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT