ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪರೀತ ಚಳಿಯಲ್ಲಿ ಚುನಾವಣೆ ಬಿಸಿ: ಬೀದರ್‌ ನಗರದಲ್ಲಿ ಎಂಟು ಮದ್ಯದ ಅಂಗಡಿಗಳು ಬಂದ್

ಬೀದರ್‌ ನಗರದಲ್ಲಿ ಎಂಟು ಮದ್ಯದ ಅಂಗಡಿಗಳು ಬಂದ್
Last Updated 23 ಡಿಸೆಂಬರ್ 2020, 17:00 IST
ಅಕ್ಷರ ಗಾತ್ರ

ಬೀದರ್‌: ಗ್ರಾಮ ಪಂಚಾಯಿತಿಗಳ ಮೊದಲ ಹಂತದ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಿರುವ ಜಿಲ್ಲಾಡಳಿತ ಇದೀಗ ಎರಡನೇ ಹಂತದ ಚುನಾವಣೆಗೆ ಸಜ್ಜಾಗಿದೆ. ಚುನಾವಣೆಗೆ ಮೂರು ದಿನಗಳು ಮಾತ್ರ ಬಾಕಿ ಇರುವ ಕಾರಣ ಅಭ್ಯರ್ಥಿಗಳು ಮೈಕೊರೆಯುವ ಚಳಿಯಲ್ಲೇ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಗ್ರಾಮಗಳಲ್ಲಿ ತಡ ರಾತ್ರಿಯವರೆಗೂ ಪ್ರಚಾರ ನಡೆಯುತ್ತಿದೆ.

ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳು ಪೆನಲ್‌ ರಚಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕೆಲ ಅಭ್ಯರ್ಥಿಗಳು ಡೆಮೊ ಯಂತ್ರದೊಂದಿಗೆ ಮತದಾರರ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಚಿಕ್ಕ ಪ್ರಣಾಳಿಕೆ ರಚಿಸಿಕೊಂಡು ವಾಟ್ಸ್‌ ಆ್ಯಪ್‌ ಮೂಲಕ ಮತದಾರರನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.

ಮೂರು, ನಾಲ್ಕು ಹಾಗೂ ಐದು ಸದಸ್ಯರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಾತಿವಾರು ಯಾವ ನಾಯಕರನ್ನು ಕರೆದುಕೊಂಡು ಪ್ರಚಾರ ನಡೆಸಿದರೆ ಮತ ಸೆಳೆಯಲು ಅನುಕೂಲವಾಗಬಹುದು ಎನ್ನುವ ಲೆಕ್ಕಾಚಾರ ಹಾಕಿಕೊಂಡು ಪ್ರಚಾರ ಕಾರ್ಯಕ್ಕೆ ಇಳಿದಿದ್ದಾರೆ.

ಗ್ರಾಮದ ಹೋಟೆಲ್‌ಗಳಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಅನೇಕರು ಅಭಿವೃದ್ಧಿ ಜಪ ಮಾಡುತ್ತ ಪರಸ್ಪರರ ವಿರುದ್ಧವಾಗಿ ಸ್ಪರ್ಧಿಸಿ ಗ್ರಾಮಸ್ಥರು ಹುಬ್ಬೇರಿಸುವಂತೆ ಮಾಡಿದ್ದಾರೆ. ಮಹಿಳೆಯರು ಸ್ಪರ್ಧಿಸಿರುವ ಕ್ಷೇತ್ರಗಳು ಪ್ರತಿಷ್ಠೆಯ ಕಣಗಳಾಗಿ ಗುರುತಿಸಿಕೊಂಡಿವೆ.

ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದ ವಾರ್ಡ್‌ ಸಂಖ್ಯೆ 1ರಲ್ಲಿ ಒಬ್ಬ ಮತದಾರ ಐವರು ಸದಸ್ಯರನ್ನು ಆಯ್ಕೆ ಮಾಡಬೇಕಿದೆ. ಇಲ್ಲಿ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾನದ ಸಂದರ್ಭದಲ್ಲಿ ಗೊಂದಲ ಉಂಟಾಗದಿರಲಿ ಎಂದು ಅಭ್ಯರ್ಥಿಗಳು ಡೆಮೊ ತೋರಿಸಿ ಮತದಾನ ಮಾಡುವಂತೆ ಮನವೊಲಿಸುತ್ತಿದ್ದಾರೆ.

‘ಮತದಾರರು ಮೊದಲಿನಂತೆ ಇಲ್ಲ. ಜಾಗೃತರಾಗಿದ್ದಾರೆ. ಅವರಿಗೆ ಗ್ರಾಮದ ಅಭಿವೃದ್ಧಿ ಬೇಕಾಗಿದೆ. ಚುನಾಯಿತರಾದ ಮೇಲೆ ಉತ್ತಮ ಕೆಲಸ ಮಾಡಿ ನಮಗೆ ಬೇರೇನೂ ಬೇಕಿಲ್ಲವೆಂದು ಪ್ರಚಾರದ ಸಂದರ್ಭದಲ್ಲಿ ನಮಗೆ ಮನವರಿಕೆ ಮಾಡುತ್ತಿದ್ದಾರೆ’ ಎಂದು ಹೇಳುತ್ತಾರೆ ಮರಕಲ್‌ ಪಂಚಾಯಿತಿಗೆ ಸ್ಪರ್ಧಿಸಿರುವ ಲೋಕೇಶ ಬಿರಾದಾರ್.

ಬೀದರ್‌ ನಗರದಲ್ಲಿ ಒಂದು ವಾರದ ಹಿಂದೆಯೇ ಸಂಪೂರ್ಣ ಮದ್ಯ ಮಾರಾಟವಾಗಿ ಎಂಟು ಅಂಗಡಿಗಳು ಬಂದ್‌ ಆಗಿವೆ. ಅಬಕಾರಿ ಇಲಾಖೆ ಹೆಚ್ಚುವರಿ ಕೋಟಾ ಬಿಡುಗಡೆ ಮಾಡಿಲ್ಲ. ಹೀಗಾಗಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚುನಾವಣೆಯ ಅಬ್ಬರ ಕಡಿಮೆಯಾಗಿದೆ.

1,285 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ: ಬೀದರ್ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳ 204 ಸ್ಥಾನಗಳಿಗೆ 615 ಜನ, ಔರಾದ್ ತಾಲ್ಲೂಕಿನ 21 ಗ್ರಾಮ ಪಂಚಾಯಿತಿಗಳ 133 ಸ್ಥಾನಗಳಿಗೆ 389 ಮಂದಿ ಹಾಗೂ ಕಮಲನಗರ ತಾಲ್ಲೂಕಿನ 18 ಗ್ರಾಮ ಪಂಚಾಯಿತಿಗಳ 100 ಸ್ಥಾನಗಳಿಗೆ 281 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಡಿಸೆಂಬರ್ 27ರಂದು ನಡೆಯಲಿರುವ ಒಟ್ಟು 72 ಪಂಚಾಯಿತಿಗಳ 437 ಸ್ಥಾನಗಳಿಗೆ 1,285 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

‘2,07,886 ಪುರುಷರು, 1,94,286 ಮಹಿಳೆಯರು ಹಾಗೂ 7 ತೃತೀಯ ಲಿಂಗಿಗಳು ಸೇರಿ ಒಟ್ಟು 4,02,179 ಮತದಾರರು ಇದ್ದಾರೆ. 96 ಸೂಕ್ಷ್ಮ, 82 ಅತಿ ಸೂಕ್ಷ್ಮ ಮತಗಟ್ಟೆ ಸೇರಿ ಒಟ್ಟು 331 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 509 ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಬಳಲಾಗುತ್ತಿದೆ. ತಾಂತ್ರಿಕ ದೋಷ ಕಂಡು ಬಂದರೆ ತಕ್ಷಣ ಬದಲಾಯಿಸಲು ಶೇಕಡ 10ರಷ್ಟು ಇವಿಎಂಗಳನ್ನು ಕಾಯ್ದಿರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT