ಬೀದರ್: ‘ಬೀದರ್–ಹುಮನಾಬಾದ್ ಹೆದ್ದಾರಿ ಮೇಲ್ದರ್ಜೆಗೇರಿಸುವ ಕಾಮಗಾರಿ 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಇದುವರೆಗೆ ಮುಗಿದಿಲ್ಲ. ಯಾರಪ್ಪನ ದುಡ್ಡು ಅದು. ತೆರಿಗೆ ಪಾವತಿದಾರರ ದುಡ್ಡು ಹಾಳು ಮಾಡುವುದು ಎಷ್ಟರಮಟ್ಟಿಗೆ ಸರಿ?’
ಹೀಗೆ ಪ್ರಶ್ನಿಸಿದವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಅಪಘಾತಗಳನ್ನು ತಪ್ಪಿಸಲು ಬೀದರ್–ಹುಮನಾಬಾದ್ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಆದರೆ, ರಸ್ತೆ ಗುಣಮಟ್ಟ ಬಹಳ ಕಳಪೆಯಾಗಿದೆ. ಈ ಹಿಂದಿನ ರಸ್ತೆಯೇ ಬಹಳ ಚೆನ್ನಾಗಿತ್ತು ಎಂದರು.
ಅಪಘಾತಗಳಿಂದ ಸಾಕಷ್ಟು ಜನ ಮೃತಪಡುತ್ತಿದ್ದಾರೆ. ಅದರ ಬಗ್ಗೆ ಸಮಗ್ರ ವರದಿ ತರಿಸಿಕೊಂಡು ನನಗೆ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ ಅವರಿಗೆ ಸೂಚಿಸಿದರು.
ನಾಚಿಕೆ ಆಗುವುದಿಲ್ಲವೇ?’: ಇದಕ್ಕೂ ಮುನ್ನ ಮಾತನಾಡಿದ ಸಂಸದ ಸಾಗರ್ ಖಂಡ್ರೆ, ‘ಬೀದರ್–ಔರಾದ್ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತಗಳಾಗುತ್ತಿವೆ. ಸಾಕಷ್ಟು ದೂರುಗಳು ಬರುತ್ತಿವೆ. ಇದಕ್ಕೆ ಕಾರಣವೇನು’ ಎಂದು ಪ್ರಶ್ನಿಸಿದರು.
ಅದಕ್ಕೆ ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಮಹೇಶ ಪಾಟೀಲ, ಬೀದರ್–ಔರಾದ್ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಟೋಲ್ ಆರಂಭವಾಗಲಿದೆ. ಮೊದಲು ಚತುಷ್ಪಥ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದಕ್ಕೆ ಅಗತ್ಯ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದ ಕಾರಣ ದ್ವಿಪಥ ಮಾಡಲಾಯಿತು. ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯ ಆಗುವುದಿಲ್ಲ ಎಂದರು.
ಇದರಿಂದ ಕೆರಳಿದ ಸಚಿವ ಈಶ್ವರ ಬಿ. ಖಂಡ್ರೆ, ‘ನೀವೇನೂ ಮಾತನಾಡುತ್ತಿದ್ದೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ? ಕಳಪೆ ಕಾಮಗಾರಿ ಆಗಿದೆ. ಅದಕ್ಕೆ ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು’ ಎಂದು ಖಾರವಾಗಿ ಹೇಳಿದರು.
‘ಇಡೀ ಹೆದ್ದಾರಿ ಹಾಳಾಗಿದೆ. ನಿತ್ಯ ಅನೇಕ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣರಾದ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಸಾಗರ್ ಖಂಡ್ರೆ ಹೇಳಿದರು.
‘ಹೆದ್ದಾರಿ ಗುಣಮಟ್ಟ, ಸ್ಥಿತಿಗತಿ ಕುರಿತು ನನಗೆ 15 ದಿನಗಳಲ್ಲಿ ವರದಿ ಸಲ್ಲಿಸಬೇಕು. ಭವಿಷ್ಯದಲ್ಲಿ ಈ ಹೆದ್ದಾರಿಯಲ್ಲಿ ಅಪಘಾತಗಳಾದರೆ ಎನ್‌ಎಚ್‌ಎಐ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು’ ಎಂದು ಈಶ್ವರ ಬಿ. ಖಂಡ್ರೆಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರಿಗೆ ಸೂಚಿಸಿದರು.
ಭಾಲ್ಕಿ–ನೀಲಂಗಾ, ನೌಬಾದ್–ಕಮಲನಗರ, ನೌಬಾದ್–ಹುಮನಾಬಾದ್ ರಸ್ತೆಗಳು ಕಳಪೆಯಾಗಿವೆ. ಹಿಂದಿನ ಸಭೆಗಳಲ್ಲೂ ಈ ಬಗ್ಗೆ ಹೇಳಿದ್ದೆ. ಹಿಂದೆ ನಾನು ಶಾಸಕನಿದ್ದಾಗ ದೂರು ಕೂಡ ಸಲ್ಲಿಸಿದ್ದೆ. ಆದರೂ ಸರಿಪಡಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎನ್‌ಎಚ್‌ಪಿಡಬ್ಲ್ಯುಡಿ ಅಧಿಕಾರಿ ಮಾತನಾಡಿ, ‘ಗುಣಮಟ್ಟದ ಪರೀಕ್ಷೆ ವರದಿ ಇನ್ನೂ ಬಂದಿಲ್ಲ’ ಎಂದು ಹೇಳಿದರು. ಇದರಿಂದ ಮತ್ತಷ್ಟು ಸಿಟ್ಟಿಗಾದ ಖಂಡ್ರೆ, ‘ಜನ ಸತ್ತ ನಂತರ ವರದಿ ಕೊಡುತ್ತಾರಾ? ಈ ರಸ್ತೆ ಗುಣಮಟ್ಟದಿಂದ ಕೂಡಿಲ್ಲ ಎನ್ನುವುದು ಮೇಲ್ನೋಟಕ್ಕೆ ನೋಡಿದರೆ ಗೊತ್ತಾಗುತ್ತದೆ. ಇನ್ನೂ ರಸ್ತೆಯೇ ಉದ್ಘಾಟನೆ ಆಗಿಲ್ಲ. ಮತ್ತೆ ಮತ್ತೆ ದುರಸ್ತಿ ಮಾಡಲಾಗುತ್ತಿದೆ. ನಾನು ಕೂಡ ಇದೇ ರಸ್ತೆಗಳ ಮೂಲಕ ಓಡಾಡುತ್ತೇನೆ. ನನಗೆ ಅಪಾಯ ಅನಿಸುತ್ತದೆ. ಡಿಸಿಯವರು ನೀವು ನೋಡಿದ್ರಾ’ ಎಂದು ಪ್ರಶ್ನಿಸಿದರು. ಅದಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ರಸ್ತೆ ಇಳಿಜಾರಿನಂತಿದೆ ಎಂದು ಕೈತೋರಿಸಿ ವಿವರಿಸಿದರು.
ಏನು ಮಾಡುತ್ತೀರೋ ಗೊತ್ತಿಲ್ಲ 15 ದಿನಗಳಲ್ಲಿ ಹೆದ್ದಾರಿಯಲ್ಲಿ ಬಿದ್ದಿರುವ ಎಲ್ಲ ಗುಂಡಿಗಳನ್ನು ಮುಚ್ಚಬೇಕು. ಅದರ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರು ನನಗೆ ವರದಿ ಕೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಪ್ರದೀಪ್ ಗುಂಟಿ, ಡಿಎಫ್‌ಒ ವಾನತಿ ಎಂ.ಎಂ. ಹಾಜರಿದ್ದರು.
‘ನಿಮ್ಮ ಜವಾಬ್ದಾರಿ ಗೊತ್ತಾಗುವುದಿಲ್ಲವೇ?’
‘ರಸ್ತೆ ಮೇಲೆ ಜಾನುವಾರುಗಳು ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಜಾನುವಾರುಗಳನ್ನು ಸರ್ಕಾರಿ ಗೋಶಾಲೆಗಳಿಗೆ ಏಕೆ ಕಳಿಸುತ್ತಿಲ್ಲ. ನಿಮ್ಮ ಜವಾಬ್ದಾರಿ ಏನೆಂಬುದು ನಿಮಗೆ ಗೊತ್ತಾಗುವುದಿಲ್ಲವೇ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅವರು ಬೀದರ್ ನಗರಸಭೆ ಪೌರಾಯುಕ್ತ ಶಿವರಾಜ ರಾಠೋಡ್ ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ನರಸಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಪಶು ಇಲಾಖೆಯ ಜತೆಗೆ ಸೇರಿಕೊಂಡು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಪೌರಾಯುಕ್ತರು ತಿಳಿಸಿದರು.
ನರಸಪ್ಪ ಮಾತನಾಡಿ ‘ಜಾನುವಾರುಗಳನ್ನು ಬೀದರ್ ಸಮೀಪದ ಖಾಸಗಿ ಗೋಶಾಲೆಗಳಿಗೆ ಸಾಗಿಸಲಾಗುತ್ತಿದೆ. ಬೀದರ್‌ನ ಸೋಲಪೂರದಲ್ಲಿ 10 ಎಕರೆ ಜಾಗವಿದೆ. ₹50 ಲಕ್ಷ ಅನುದಾನ ಕೂಡ ಬಂದಿದೆ’ ಎಂದರು.
‘ಹೀಗಿದ್ದರೂ ಕೆಲಸವೇಕೆ ಮಾಡುತ್ತಿಲ್ಲ. ಜಾನುವಾರುಗಳನ್ನು ಅಲ್ಲಿಗೇಕೆ ಕಳಿಸುತ್ತಿಲ್ಲ. ಬೀದರ್ ನಗರದಲ್ಲಿ 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ’ ಎಂದು ಖಂಡ್ರೆ ಹೇಳಿದರು. ಅದಕ್ಕೆ ನರಸಪ್ಪ ‘ಸ್ವಲ್ಪ ಜಾಗ ಒತ್ತುವರಿ ಆಗಿದ್ದು ಅದನ್ನು ತೆರವುಗೊಳಿಸಲಾಗುತ್ತಿದೆ. ಈ ಸರ್ಕಾರ ಬಂದ ನಂತರ ₹50 ಲಕ್ಷ ಅನುದಾನ ಬಳಸಬೇಡಿ ಎಂದು ಸೂಚಿಸಿದ್ದರಿಂದ ಕಾಮಗಾರಿ ಕೈಗೆತ್ತಿಕೊಂಡಿಲ್ಲ’ ಎಂದರು. ‘ಈ ವಿಷಯ ನನ್ನ ಗಮನಕ್ಕೆ ತರಬೇಕಲ್ಲ. ಪ್ರಸ್ತಾವ ಕಳಿಸಿಕೊಟ್ಟರೆ ನಾನು ಅನುಮತಿ ಕೊಡಿಸುವೆ. ಇನ್ಮುಂದೆ ರಸ್ತೆಗಳಲ್ಲಿ ಜಾನುವಾರುಗಳು ಓಡಾಡಬಾರದು’ ಎಂದು ತಾಕೀತು ಮಾಡಿದರು.
ಗೋಶಾಲೆಗಳ ಪರಿಸ್ಥಿತಿ ಪರಿಶೀಲನೆಗೆ ಸೂಚನೆ
‘ಜಿಲ್ಲೆಯಲ್ಲಿರುವ ಗೋಶಾಲೆಗಳ ಪರಿಸ್ಥಿತಿ ಪರಿಶೀಲನೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ವರದಿ ತರಿಸಿಕೊಳ್ಳಬೇಕು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಅವರು ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ ಅವರಿಗೆ ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಅವರು ‘ಸರ್ಕಾರದ ಅನುದಾನದ ಅಡಿಯಲ್ಲಿ ಜಿಲ್ಲೆಯಲ್ಲಿ ಎಷ್ಟು ಗೋಶಾಲೆಗಳು ನಡೆಯುತ್ತಿವೆ. ಅವುಗಳನ್ನು ನೋಡಿದ್ದೀರಾ’ ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕ ನರಸಪ್ಪ ಅವರನ್ನು ಪ್ರಶ್ನಿಸಿದರು.
ಒಂಬತ್ತು ಗೋಶಾಲೆಗಳು ಪುಣ್ಯಕೋಟಿ ದತ್ತು ಯೋಜನೆಯಡಿ ನಡೆಯುತ್ತಿವೆ. ಬಸವಕಲ್ಯಾಣ ತಾಲ್ಲೂಕಿನ ಸರ್ಜೋಳಗಾದಲ್ಲಿ 2015ರಲ್ಲಿ ₹5 ಲಕ್ಷ ಅನುದಾನದಲ್ಲಿ ಗೋಶಾಲೆ ಆರಂಭಿಸಲಾಗಿತ್ತು. ಈಗ ಅಲ್ಲಿ ಯಾವುದೇ ಗೋವುಗಳು ಇಲ್ಲ ಎಂದರು. ‘ಸರ್ಕಾರಿ ಗೋಶಾಲೆಗಳಿದ್ದರೂ ಅಲ್ಲಿ ಜಾನುವಾರುಗಳು ಏಕಿಲ್ಲ. ಗೋಶಾಲೆಗಳೇಕೆ ಸರಿಯಾಗಿ ಬಳಕೆ ಆಗುತ್ತಿಲ್ಲ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು’ ಎಂದು ಸಂಸದ ಸಾಗರ್ ಖಂಡ್ರೆ ತಾಕೀತು ಮಾಡಿದರು.
‘ನಮ್ಮ ಹಾಲಿನ ಗುಣಮಟ್ಟ ಕಡಿಮೆ ಇದೆಯಾ?’
‘ನಮ್ಮ ಜಿಲ್ಲೆಯ ಹಾಲಿನ ಗುಣಮಟ್ಟ ಕಡಿಮೆ ಇದೆಯಾ? ಇಲ್ಲದಿದ್ದರೆ ನಮ್ಮ ಹಾಲು ಮಾರಾಟ ಆಗಬೇಕಲ್ಲ. ನಮ್ಮಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಆಗುತ್ತಿದ್ದರೂ ಮಹಾರಾಷ್ಟ್ರದಿಂದ ಹಾಲು ಜಿಲ್ಲೆಗೇಕೆ ಬರುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಜಿ. ಮುಳೆ ಪ್ರಶ್ನಿಸಿದರು. ಅದಕ್ಕೆ ದನಿಗೂಡಿಸಿದ ಸಂಸದ ಸಾಗರ್ ಖಂಡ್ರೆ ‘ನಮ್ಮ ಹಾಲಿನ ಗುಣಮಟ್ಟ ಸರಿಯಿದ್ದರೆ ಬೇರೆ ರಾಜ್ಯದ ಹಾಲು ಜಿಲ್ಲೆಗೆ ಬರಬಾರದು ಅಲ್ಲವೇ’ ಎಂದು ಕೇಳಿದರು. ಅದಕ್ಕೆ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ನರಸಪ್ಪ ಪ್ರತಿಕ್ರಿಯಿಸಿ ‘ನಮ್ಮ ಜಿಲ್ಲೆಯಲ್ಲಿ ದಿನಕ್ಕೆ 1.75 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತದೆ. 50 ಸಾವಿರ ಲೀಟರ್ ಹಾಲು ಕೆಎಂಎಫ್‌ಗೆ ಹೋಗುತ್ತದೆ. ಮಿಕ್ಕುಳಿದದ್ದು ಖಾಸಗಿಯವರಿಗೆ ಮಾರಾಟ ಮಾಡುತ್ತಾರೆ. ಕೆಎಂಎಫ್‌ನವರು ಪ್ಯಾಕೆಟ್‌ಗಳಲ್ಲಿ ಹಾಲು ಮಾರುತ್ತಾರೆ. ಆದರೆ ಜನರು ಬೇರೆ ರಾಜ್ಯದ ಹಾಲು ಖರೀದಿಸಲು ಸಿದ್ಧರಿದ್ದರೆ ತಡೆಯಲು ಆಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.