ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರ ಕೋಮು ಗಲಭೆಗಳಿಗೆ ಸಂಬಂಧಿಸಿ ‘ಶೂನ್ಯ ಸಹಿಷ್ಣುತೆ’ ಹೊಂದಿದೆ: ಈಶ್ವರ ಖಂಡ್ರೆ

ಸಡಗರ ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಉತ್ಸವ
Published : 17 ಸೆಪ್ಟೆಂಬರ್ 2024, 10:12 IST
Last Updated : 17 ಸೆಪ್ಟೆಂಬರ್ 2024, 10:12 IST
ಫಾಲೋ ಮಾಡಿ
Comments

ಬೀದರ್‌: ಸಡಗರ, ಸಂಭ್ರಮದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನು ನಗರದಲ್ಲಿ ಮಂಗಳವಾರ ಆಚರಿಸಲಾಯಿತು.

ಅಲಂಕರಿಸಿದ ತೆರೆದ ಜೀಪಿನಲ್ಲಿ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಭಾವಚಿತ್ರ ಇರಿಸಿ, ಅದಕ್ಕೆ ಹೂಮಾಲೆ ಹಾಕಿ ಗೌರವಿಸಲಾಯಿತು. ಬಳಿಕ ವಿವಿಧ ಮಾರ್ಗಗಳ ಮೂಲಕ ನೆಹರೂ ಕ್ರೀಡಾಂಗಣದ ವರೆಗೆ ಮೆರವಣಿಗೆ ಮಾಡಲಾಯಿತು. ಲಂಬಾಣಿ ನೃತ್ಯ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದವು.

ಜಿಲ್ಲಾಡಳಿತದಿಂದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ನಂತರ ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಆನಂತರ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಬಳಿಕ ಮಾತನಾಡಿದ ಸಚಿವ ಖಂಡ್ರೆ, ‘ನಮ್ಮ ಸರ್ಕಾರ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ‘ಶೂನ್ಯ ಸಹಿಷ್ಣುತೆ’ ನಿಲುವು ಹೊಂದಿದೆ. ಶಾಂತಿ, ಸೌಹಾರ್ದತೆ ಕಾಪಾಡುವುದು ನಮ್ಮ ಮೊದಲ ಆದ್ಯತೆ’ ಎಂದು ತಿಳಿಸಿದರು.

ಮಹಿಳೆಯರು, ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಲಾಗುವುದು. ಈ ಸಂಬಂಧ ಈಗಾಗಲೇ ಪೊಲೀಸ್‌ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಈ ಸಲ ಬೀದರ್‌ ಜಿಲ್ಲೆಗೆ ₹500 ಕೋಟಿ ಅನುದಾನ ಮಂಜೂರಾಗಿದೆ. ಈ ಸಲ 10ರಿಂದ 15 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.

ಎರಡು ವರ್ಷಗಳಲ್ಲಿ ಜಿಲ್ಲೆಯ ಹೋಬಳಿಗೊಂದು ವಸತಿ ಶಾಲೆ ನಿರ್ಮಿಸಿ, ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ಶ್ರೀಮಂತರ ಮಕ್ಕಳಿಗೆ ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಸಿಗುವ ಎಲ್ಲ ಸೌಲಭ್ಯ ವಸತಿ ಶಾಲೆಗಳಲ್ಲಿ ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಬೀದರ್‌ ಕೊಡುಗೆ ದೊಡ್ಡದು: ಕಲ್ಯಾಣ ಕರ್ನಾಟಕ ವಿಮೋಚನೆಯಲ್ಲಿ ಬೀದರ್‌ ಜಿಲ್ಲೆಯ ಕೊಡುಗೆ ಬಹಳ ದೊಡ್ಡದಿದೆ. ಈ ಭಾಗದ ಶರಣಗೌಡ ಇನಾಮದಾರ, ರಾಜಾ ವೆಂಕಟಪ್ಪ ನಾಯಕ, ದತ್ತಾತ್ರೇಯ ಅವರಾದಿ, ಶಿವಮೂರ್ತಿ ಸ್ವಾಮಿ ಅಳವಂಡಿ, ಮಟಮಾರಿ ನಾಗಪ್ಪ, ನಾರಾಯಣರಾವ್‌ ಕಾನಿಹಾಳ, ಹಕೀಕತರಾವ್‌ ಚಿಟಗುಪ್ಪಕರ್‌, ಚಂದ್ರಶೇಖರ ಪಾಟೀಲ, ರಾಮಾಚಾರ, ಡಾ. ಚರ್ಚಿಹಾಳ ಮಠ, ರಾಮಚಂದ್ರ ವೀರಪ್ಪ, ಕಪತಪ್ಪ ಬೇಳೆ, ಎ.ವಿ. ಪಾಟೀಲ, ಆರ್‌.ವಿ. ಬಿಡಪ್‌, ಅಮರಸಿಂಹ ರಾಠೋಡ, ಪುಂಡಲೀಕಪ್ಪ ಜ್ಞಾನಮೂಠೆ ಸೇರಿದಂತೆ ಅನೇಕ ಹೋರಾಟಗಾರರ ಸೇವೆ ಸ್ಮರಿಸುವುದು ಬಹಳ ಅಗತ್ಯವಿದೆ ಎಂದರು.

ಇಡೀ ದೇಶಕ್ಕೆ 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಹೈದರಾಬಾದ್‌ ನಿಜಾಮ ಭಾರತದೊಂದಿಗೆ ವಿಲೀನಗೊಳ್ಳಲು ಸಿದ್ಧವಿರಲಿಲ್ಲ. . ಆದರೆ, ಅನೇಕರ ಹೋರಾಟ ಹಾಗೂ ಭಾರತ ಸರ್ಕಾರದ ನಡೆಸಿದ ಪೊಲೀಸ್‌ ಕಾರ್ಯಾಚರಣೆ ನಂತರ ಈ ಭಾಗಕ್ಕೆ 1948ರ ಸೆಪ್ಟೆಂಬರ್‌ 17ರಂದು ಸ್ವಾತಂತ್ರ್ಯ ದೊರಕಿತು. 1956ರ, ನವೆಂಬರ್‌ 1ರಂದು ಕನ್ನಡ ಭಾಷಿಕ ಜಿಲ್ಲೆಗಳಾದ ಬೀದರ್‌, ಕಲಬುರಗಿ, ರಾಯಚೂರು ಮೈಸೂರು ರಾಜ್ಯದ ಭಾಗಗಳಾದವು ಎಂದು ನೆನಪು ಮಾಡಿದರು.

ಬೀದರ್‌ ಜಿಲ್ಲೆ ಕಲ್ಯಾಣಿ ಚಾಲುಕ್ಉಯರು ಮತ್ತು ಬಹಮನಿ ಸುಲ್ತಾನರಿಗೆ ರಾಜಧಾನಿಯಾಗಿ ಮೆರೆದಿತ್ತು. ಇಂಡೋ ಪರ್ಷಿಯನ್‌ ಸಂಸ್ಕೃತಿಗಳ ಸಮ್ಮಿಲನವಿತ್ತು. ಬಿದ್ರಿ ಕಲೆ ಬಹಮನಿ ಸುಲ್ತಾರನ ಕೊಡುಗೆಯಾಗಿದೆ. ವಡ್ಡಾರಾಧನೆ, ಮಿತಾಕ್ಷರ ಗ್ರಂಥ, ಬಿಲ್ಹಣನ ವಿಕ್ರಮಾಂಕದೇವ ಚರಿತ್ರೆ ರಚನೆಯಾಗಿದ್ದು ಇದೇ ನೆಲದಲ್ಲಿ. ಹನ್ನೆರಡನೇ ಶತಮಾನದಲ್ಲಿ ಸರ್ವಧರ್ಮ ಸಮಾನತೆ ಸ್ಥಾಪಿಸಲು ಇಡೀ ಜಗತ್ತಿಗೆ ಸಂಸದೀಯ ಪ್ರಜಾಪ್ರಭುತ್ವದ ಮಾದರಿ ಆಡಳಿತವನ್ನು ಮೊದಲು ಹೇಳಿಕೊಟ್ಟ ಕಾಯಕಯೋಗಿ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣ ಆಗಿತ್ತು. ವಚನ ವಾಙ್ಮಯವನ್ನು ಕನ್ನಡ ಸಾಹಿತ್ಯ ಲೋಕ್ಕೆ ಕೊಟ್ಟ ಶ್ರೇಯಶ್ಸು ಬೀದರ್‌ ಜಿಲ್ಲೆಗೆ ಸಲ್ಲುತ್ತದೆ. ಮಹಮೂದ್‌ ಗಾವಾನ್‌ ಇದೇ ನೆಲದಲ್ಲಿ ಮದರಸಾ (ವಿಶ್ವವಿದ್ಯಾಲಯ) ಸ್ಥಾಪಿಸಿದ್ದ ಹೆಗ್ಗಳಿಕೆ ಕೂಡ ಹೊಂದಿದೆ ಎಂದು ತಿಳಿಸಿದರು.

ಸಂಸದ ಸಾಗರ್‌ ಖಂಡ್ರೆ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ನಗರಸಭೆ ಅಧ್ಯಕ್ಷ ಮೊಹಮ್ಮದ್‌ ಗೌಸ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ, ಡಿಸಿಎಫ್‌ ವಾನತಿ ಎಂ.ಎಂ. ಹಾಜರಿದ್ದರು.

‘ಎಂಎಲ್‌ಸಿ ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ’

‘ವಿಧಾನ ಪರಿಷತ್‌ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಯಾರ ವಿರುದ್ಧವಾಗಿ ಗುರುತರವಾಗಿ, ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ಮಾತನಾಡುತ್ತಾರೆ. ಆದರೆ, ಇವರು ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ಮಾತನಾಡಿದರೆ ಕಾನೂನು ತನ್ನ ಕ್ರಮ ಜರುಗಿಸುತ್ತದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

‘ಶಾಸಕರ ನಾಲಿಗೆ ಕಟ್‌ ಮಾಡುತ್ತೇನೆ’ ಎಂದು ಹೇಳಿಕೆ ಕೊಟ್ಟಿರುವ ಎಂಎಲ್‌ಸಿ ಡಾ. ಚಂದ್ರಶೇಖರ ಪಾಟೀಲ ಅವರ ವಿರುದ್ಧ ಸರ್ಕಾರವೇಕೆ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ತನಿಖಾ ಸಂಸ್ಥೆಗಳು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ಕೆಲಸದಲ್ಲಿ ಯಾರ ಹಸ್ತಕ್ಷೇಪವೂ ಇರುವುದಿಲ್ಲ ಎಂದರು.

‘ಶೇ 48ರಷ್ಟು ಅನುಭವ ಮಂಟಪ ಕಾಮಗಾರಿ’

‘ಬಸವಕಲ್ಯಾಣದ ನೂತನ ಅನುಭವ ಮಂಟಪದ ಕಾಮಗಾರಿ ಶೇ 48ರಷ್ಟು ಪೂರ್ಣಗೊಂಡಿದೆ. ಈಗಾಗಲೇ ₹300 ಕೋಟಿ ಅನುದಾನ ನೀಡಲಾಗಿದೆ. ಇದಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ಮಿಕ್ಕುಳಿದ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. 2025ರ ಡಿಸೆಂಬರ್‌ ನೊಳಗೆ ಅನುಭವ ಮಂಟಪ ಉದ್ಘಾಟಿಸಲು ಯೋಜಿಸಲಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

‘ನ್ಯಾಯಾಲಯದಲ್ಲಿಲ್ಲ ಧ್ವಜಾರೋಹಣ; ಸರ್ಕಾರದಿಂದ ಆದೇಶ’

‘ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಧ್ವಜಾರೋಹಣ ಮಾಡದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಜೊತೆಗೂ ಚರ್ಚೆ ನಡೆಸಲಾಗುವುದು. ಏಕೆ ಲೋಪವಾಗಿದೆ ಎಂದು ತಿಳಿದು ಕೊಳ್ಳಲಾಗುವುದು. ನ್ಯಾಯಾಲಯದಲ್ಲಿ ಸೆ. 17ರಂದು ಧ್ವಜಾರೋಹಣ ನೆರವೇರಿಸುವ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

‘ಕಲ್ಯಾಣ ಕರ್ನಾಟಕಕ್ಕೆ ಸೆ. 17ರಂದು ವಿಮೋಚನೆ ದೊರೆತಿದೆ. ಈ ದಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ, ಜಿಲ್ಲಾ ನ್ಯಾಯಾಲಯದಲ್ಲಿ ಧ್ವಜಾರೋಹಣವನ್ನೇ ಮಾಡಿಲ್ಲ. ಹೋದ ವರ್ಷವೂ ಇದೇ ರೀತಿ ಆಗಿತ್ತು. ಜಿಲ್ಲಾ ನ್ಯಾಯಾಲಯ ನಮ್ಮ ಭಾಗದಲ್ಲಿದೆಯೋ ಅಥವಾ ಬೇರೆ ದೇಶದಲ್ಲಿದೆಯೋ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಬೆಳೆ ಹಾನಿ ಸಮೀಕ್ಷೆಗೆ ಸೂಚನೆ

‘ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಉದ್ದು, ಹೆಸರು, ಸೋಯಾ ಹಾಳಾಗಿದೆ. ಕೆಲವೆಡೆ ಮನೆಗಳು ಬಿದ್ದಿವೆ. ಅದರ ಸಮೀಕ್ಷೆ ಕೈಗೊಂಡು, ಸರ್ಕಾರದ ಮಾನದಂಡಗಳ ಪ್ರಕಾರ ಪರಿಹಾರ ವಿತರಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.

ಹೆಸರು ಬೆಳೆಗೆ ಬೆಂಬಲ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದು, ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲು ಸೂಚನೆ ಕೊಡಲಾಗಿದೆ ಎಂದು ಹೇಳಿದರು.

ಸಚಿವ ಈಶ್ವರ ಖಂಡ್ರೆ ಅವರು ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ಸಚಿವ ಈಶ್ವರ ಖಂಡ್ರೆ ಅವರು ತೆರೆದ ಜೀಪಿನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು.

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ

ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT