ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಮಾಸ್ಟರ್‌ ಟ್ರೈನರ್‌ಗಳಿಗೆ ಇವಿಎಮ್‌ ತರಬೇತಿ

Published 25 ಏಪ್ರಿಲ್ 2024, 16:30 IST
Last Updated 25 ಏಪ್ರಿಲ್ 2024, 16:30 IST
ಅಕ್ಷರ ಗಾತ್ರ

ಬೀದರ್‌: ಎಲೆಕ್ಟ್ರಾನಿಕ್‌ ಮತಯಂತ್ರಗಳ ನಿರ್ವಹಣೆ (ಇವಿಎಂ) ಕುರಿತು ಸೆಕ್ಟರ್‌ ಅಧಿಕಾರಿಗಳು ಹಾಗೂ ಆಯಾ ವಿಧಾನಸಭಾ ಕ್ಷೇತ್ರಗಳ ಮಾಸ್ಟರ್‌ ಟ್ರೈನರ್‌ಗಳಿಗೆ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ತರಬೇತಿ ನೀಡಲಾಯಿತು.

ತರಬೇತಿ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ, ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಪಾಲನೆ ಮಾಡಿದರೆ ಚುನಾವಣೆಗಳು ಸುಸೂತ್ರವಾಗಿ ನಡೆಯುತ್ತವೆ. ಸೆಕ್ಟರ್ ಅಧಿಕಾರಿಗಳ ಹಂತದಲ್ಲಿ ಇವಿಎಂಗಳನ್ನು ನೋಡಿಕೊಳ್ಳಬೇಕು. ಏ. 27, 28 ಮತ್ತು 29ರಂದು ಇವಿಎಂ ಸಿದ್ಧಪಡಿಸಿ, ಏ. 30ರಂದು ಅಣಕು ಮತದಾನ ಮಾಡಿ ತೋರಿಸಬೇಕು. ಸ್ಥಳೀಯವಾಗಿ ಈ ಮಾಹಿತಿಯನ್ನು ರಾಜಕೀಯ ವ್ಯಕ್ತಿಗಳಿಗೆ ನೀಡಬೇಕು. ಅದರ ಸಿಸಿಟಿವಿ ರೆಕಾರ್ಡ್‌ ಮಾಡಬೇಕು. ತಹಶೀಲ್ದಾರ್‌ ಹಾಗೂ ಎ.ಆರ್.ಒ.ಗಳು ಈ ಪ್ರಕ್ರಿಯೆ ಮುಗಿಯುವವರೆಗೆ ಎಲ್ಲೂ ತೆರಳುವ ಹಾಗಿಲ್ಲ ಎಂದು ನಿರ್ದೇಶನ ನೀಡಿದರು.

‘ಏನಾದರೂ ಸಮಸ್ಯೆಗಳಾದರೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರು ಎಂಜಿನಿಯರ್‌ಗಳು ಇರುತ್ತಾರೆ. ಅವರಿಂದ ಮಾಹಿತಿ ಪಡೆಯಬೇಕು. ಅವಸರ ಮಾಡಿ ತಪ್ಪು ಎಸಗುವುದು ಬೇಡ. ಹೊಸ ಪೇಪರ್ ರೋಲ್ ಬಳಸಬೇಕು. ಸೀರಿಯಲ್ ನಂಬರ್ ಒತ್ತಿದಾಗ ಅಭ್ಯರ್ಥಿ ಹೆಸರು ಮತ್ತು ಸೀರಿಯಲ್ ನಂಬರ್ ಸರಿಯಾಗಿ ಬರುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು’ ಎಂದು ತಿಳಿಸಿದರು.

‘ವಿವಿ ಪ್ಯಾಟ್ ಕೆಲಸ ಮಾಡದೇ ಇದ್ದಾಗ ಸಮತಲವಾಗಿ ಇಡಬೇಕು. ಕಾಯ್ದಿರಿಸಿದ ಇವಿಎಂಗಳಿಗೆ 1,2,3 ಎಂದು ಬರೆದು ದೊಡ್ಡ ಸ್ಟಿಕರ್‌ಗಳನ್ನು ಅಂಟಿಸಬೇಕು. ಸಿಸಿಟಿವಿ ಜೊತೆಗೆ ವಿಡಿಯೋಗ್ರಫಿ ಮಾಡಬೇಕು. ಚುನಾವಣೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಧರಿಸಿಕೊಂಡಿರಬೇಕು. ಬ್ಯಾಲೆಟ್ ಪೇಪರ್‌ ಸೀರಿಯಲ್ ನಂಬರ್ ಹಾಗೂ ವಿ.ವಿ ಪ್ಯಾಟ್‌ ಒಂದೇ ರೀತಿ ಇರಬೇಕು. ಒಂದು ಇವಿಎಂ ಸೆಟ್ ಮಾಡಲು 15 ನಿಮಿಷಗಳ ಸಮಯ ಸಾಕು. ನಾವು ಹೇಳಿದ ನಿಯಮಗಳನ್ನು ಪಾಲನೆ ಮಾಡಿದರೆ ಸಾಕು’ ಎಂದು ಹೇಳಿದರು.

‘ಸೆಕ್ಟರ್ ಅಧಿಕಾರಿಗಳು ಮೇ 2, 3 ಮತ್ತು 5 ತಾರೀಖು ಎಲ್ಲ ಮತಗಟ್ಟೆಗಳಿಗೆ ಭೇಟಿ ಕೊಡಬೇಕು. ಅಲ್ಲಿ ವಿದ್ಯುತ್‌, ಟೇಬಲ್, ಕುರ್ಚಿ, ಬೆಂಚ್‌  ವ್ಯವಸ್ಥೆ, ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಇರುವ ಕುರಿತು ಖಾತರಿ ಪಡಿಸಿಕೊಳ್ಳಬೇಕು. ಮತದಾನಕ್ಕಿಂತ 5 ದಿನ ಮುಂಚೆ ಮತದಾರರ ಚೀಟಿಗಳನ್ನು ವಿತರಿಸಬೇಕು. ಚುನಾವಣಾ ಅಧಿಕಾರಿ ಮತ್ತು ಸಿಬ್ಬಂದಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ನೀರಿನ ವ್ಯವಸ್ಥೆ ಮಾಡಬೇಕು. ಈ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯತಿ ಪಿ.ಡಿ.ಒ.ಗಳಿಗೆ ಒಪ್ಪಿಸಬೇಕು’ ಎಂದು ಸೂಚಿಸಿದರು.

ಸಾಮಾನ್ಯ ಚುನಾವಣಾ ವೀಕ್ಷಕ ದೀಪಂಕರ ಮೋಹಪಾತ್ರ, ಬೀದರ್‌ ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಚುನಾವಣಾ ತಹಶೀಲ್ದಾರ್‌ ಅಣ್ಣಾರಾವ್ ಪಾಟೀಲ, ಸೆಕ್ಟರ್ ಅಧಿಕಾರಿಗಳು ಹಾಗೂ ವಿಧಾನಸಭಾ ಕ್ಷೇತ್ರಗಳ ಸೆಕ್ಟರ್ ಅಧಿಕಾರಿಗಳು ಪಾಲ್ಗೊಂಡಿದ್ದರು.

Cut-off box - ಗೌಪ್ಯತೆ ಕಾಪಾಡಲು ಸೂಚನೆ ಬೀದರ್‌ ಲೋಕಸಭಾ ಚುನಾವಣೆಯಲ್ಲಿ 85 ವರ್ಷ ಮೇಲಿನವರಿಗೆ ಹಾಗೂ ವಿಶೇಷಚೇತನರಿಗೆ ಮನೆಯಿಂದ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದ್ದು ಏ. 26 ಮತ್ತು 29ರಂದು ನಡೆಯುವ ಮತದಾನ ದಿನದಂದು ಅಧಿಕಾರಿಗಳು ಗೌಪ್ಯತೆ ಕಾಪಾಡಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು. ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮತದಾನ ದಿನದಂದು ಮನೆ ಮನೆಗೆ ತೆರಳಿ ಮತ ಹಾಕಿಸಿಕೊಳ್ಳುವಾಗ ಮೈಕ್ರೋ ಅಬ್ಸರವರ್ ವಿಡಿಯೋ ಗ್ರಾಫರ್‌ಗಳು ಜೊತೆಗೆ ಇರಬೇಕು. ಮತದಾರರು ಗೌಪ್ಯವಾಗಿ ಮತ ಚಲಾಯಿಸಲು ಜೊತೆಯಲ್ಲಿ ಕಂಪಾರ್ಟ್‌ಮೆಂಟ್‌ ತೆಗೆದುಕೊಂಡು ಹೋಗಬೇಕು. ಜಿಲ್ಲೆಯಲ್ಲಿ 85 ವರ್ಷ ಮೇಲಿನವರು ಹಾಗೂ ವಿಶೇಷ ಚೇತನರು ಸೇರಿ ಒಟ್ಟು 968 ಜನ ಮನೆಯಿಂದ ಮತದಾನ ಮಾಡುತ್ತಿದ್ದಾರೆ. ಮತಪತ್ರಗಳ ಮೂಲಕ ಅವರು ಮತ ಚಲಾಯಿಸುತ್ತಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT