ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನಕಲಿ ನೋಟು ಜಾಲ ಪತ್ತೆ; 6 ಜನ ಆರೋಪಿಗಳ ಬಂಧನ

Last Updated 2 ಆಗಸ್ಟ್ 2021, 15:22 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಹರಡಿಕೊಂಡಿದ್ದ ನಕಲಿ ನೋಟು ಜಾಲ ಪತ್ತೆ ಹಚ್ಚಿರುವ ಪೊಲೀಸರು, ನಕಲಿ ನೋಟುಗಳು, ನೋಟು ತಯಾರಿಕೆಗೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು.

ಪ್ರಕರಣ ಸಂಬಂಧ ಬೀದರ್‌ನ ಸಿಎಂಸಿ ಕಾಲೊನಿಯ ಅಶೋಕ ಸಿದ್ರಾಮಪ್ಪ, ಬೋರಗಿ(ಜೆ)ಯ ಸೈಯದ್ ಇಬ್ರಾಹಿಂ ಸೈಯದ್ ಅಫ್ಜಲ್, ಬೀರಿ (ಕೆ) ಗ್ರಾಮದ ಉಮಾಕಾಂತ ರಮೇಶ, ಸದ್ಯ ಭಾಲ್ಕಿಯಲ್ಲಿ ನೆಲೆಸಿರುವ ಅಳವಾಯಿಯ ಜವೇದ್ ಮೂಸಾ ಪಟೇಲ್, ಬೀದರ್‍ನ ಲಾಡಗೇರಿಯ ರಾಕೇಶ ದಯಾನಂದ, ಕುಂಬಾರವಾಡದ ಚಿಯೋನ್ ಕಾಲೊನಿಯ ಶರತಕುಮಾರ ಶ್ಯಾಮರಾವ್ ಸಾಗರ್ ಅವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ ಎಂದು ಹೇಳಿದರು.

ಆರೋಪಿಗಳಿಂದ ₹ 500 ಮುಖಬೆಲೆಯ ಒಟ್ಟು 274 ನಕಲಿ ನೋಟುಗಳು, ನೋಟು ತಯಾರಿಕೆಗೆ ಉಪಯೋಗಿಸಿದ್ದ ಲ್ಯಾಪ್‍ಟಾಪ್, ಪ್ರಿಂಟರ್ ಹಾಗೂ ಇತರ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಖೋಟಾ ನೋಟಿಗೆ ಸಂಬಂಧಿಸಿದಂತೆ ನಗರದ ರಾಜಾ ಬಾರ್ ಆ್ಯಂಡ್ ರೆಸ್ಟೊರಂಟ್ ಕ್ಯಾಶಿಯರ್ ಧೂಳಪ್ಪ ವೀರಸಂಗಪ್ಪ ಕೊಳಾರೆ ಗಾಂಧಿಗಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಾರ್‌ಗೆ ಬಂದಿದ್ದ ಇಬ್ಬರು ಗ್ರಾಹಕರು ₹ 500 ಮುಖಬೆಲೆಯ ನೋಟುಗಳನ್ನು ನೀಡಿ ಮದ್ಯ ಖರೀದಿಸಿದ್ದರು. ಪರಿಶೀಲನೆ ನಡೆಸಿದಾಗ ನೋಟುಗಳು ಖೋಟಾ ನೋಟಿನಂತೆ ಕಂಡು ಬಂದಿದ್ದವು. ಗಾಹಕರನ್ನು ವಿಚಾರಿಸಿದಾಗ ಗಂಜ್‍ನಲ್ಲಿ ಕೆಲಸ ಮಾಡುತ್ತಿದ್ದ ಯರನಳ್ಳಿ ಗ್ರಾಮದ ಅಶೋಕ ಸಿದ್ರಾಮಪ್ಪ ದೇಶಮುಖ ಎನ್ನುವವರು ನೋಟುಗಳನ್ನು ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದರು. ಅದರ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಗಾಂಧಿಗಂಜ್ ಪೊಲೀಸ್ ಇನ್‍ಸ್ಪೆಕ್ಟರ್ ಮಲ್ಲಮ್ಮ ಚೌಬೆ, ಪಿಎಸ್‍ಐಗಳಾದ ಜಗದೀಶ ನಾಯ್ಕ, ಸೈಯದ್ ಪಟೇಲ್, ಎಎಸ್‍ಐ ಅಶೋಕ ಕೋಟೆ, ಕಾನ್‍ಸ್ಟೆಬಲ್‍ಗಳಾದ ಡೇವಿಡ್, ನವೀನ್, ಪ್ರವೀಣ, ದೇವಣ್ಣ, ರಾಜಕುಮಾರ ಚಿಕ್ಕಬಸೆ ಅವರು ಪ್ರಕರಣ ಬೇಧಿಸಿದ್ದಾರೆ ಎಂದು ತಿಳಿಸಿದರು.

ಪ್ರಕರಣ ಬೇಧಿಸಿದ ತಂಡಕ್ಕೆ ಯೋಗ್ಯ ಬಹುಮಾನ ನೀಡಲಾಗುವುದು ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT