ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ, ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

ಕಮ್ಯುನಿಷ್ಟ ಪಾರ್ಟಿ ಆಫ್‌ ಇಂಡಿಯಾ ಪದಾಧಿಕಾರಿಗಳ ಪ್ರತಿಭಟನೆ
Last Updated 15 ಜೂನ್ 2021, 13:19 IST
ಅಕ್ಷರ ಗಾತ್ರ

ಬೀದರ್: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಏಳು ವರ್ಷಗಳಿಂದ ಅಧಿಕಾರದಲ್ಲಿದ್ದರೂ ರೈತರ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಕಮ್ಯುನಿಷ್ಟ ಪಾರ್ಟಿ ಆಫ್‌ ಇಂಡಿಯಾ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದುಪಡಿಸಿದ ನಂತರ ದೇಶದ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ತೈಲ ಬೆಲೆ ಹೆಚ್ಚಳದಿಂದ ಜೀವನಾವಶ್ಯಕ ವಸ್ತುಗಳ ಬೆಲೆಗಳು ಹೆಚ್ಚಾಗಿ ಜನಸಾಮಾನ್ಯರು ತೊಂದರೆ ಅನುಭವಿಸಬೇಕಾಗಿದೆ ಎಂದು ದೂರಿದರು.

ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯಿಂದಾಗಿ ಕೃಷಿ ವಲಯದಲ್ಲಿ ಕಾರ್ಪೊರೇಟ್ ಮನೆತನಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಲೆ ದೊರೆಯುತ್ತಿಲ್ಲ. ವಿದ್ಯುತ್ ವಿತರಣಾ ಕೇಂದ್ರಗಳ ಖಾಸಗೀಕರಣದಿಂದಾಗಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

ಸರ್ಕಾರದ ಅವೈಜ್ಞಾನಿಕ ನೀತಿಯಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಮಸ್ಯೆಗಳು ಹೆಚ್ಚಾಗಿವೆ. ಆರೋಗ್ಯ ವಲಯದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು 200 ದಿವಸಗಳಿಗೆ ಹೆಚ್ಚಿಸಿ ಗ್ರಾಮೀಣ ಜನತೆ ವಲಸೆ ಹೋಗುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ಮೂರು ಕೃಷಿ ಮಾರುಕಟ್ಟೆ ತಿದ್ದುಪಡಿ ಕಾಯ್ದೆಗಳನ್ನು ರದ್ದು ಪಡಿಸಬೇಕು. ವಿದ್ಯುತ್ ವಿರತಣಾ ಕೇಂದ್ರಗಳ ಖಾಸಗೀಕರಣ ತಡೆಯಬೇಕು. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಧಿಸಿರುವ ಶುಲ್ಕವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ಕೋವಿಡ್‌ನಿಂದ ಮೃತಪಟ್ಟ ಕುಟುಂಬಕ್ಕೆ ₹10 ಲಕ್ಷ ಮಂಜೂರು ಮಾಡಬೇಕು. ಆರ್ಥಿಕ ಮುಗ್ಗಟ್ಟಿನಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರು ತಿಂಗಳ ವರೆಗೆ ಪರಿಹಾರ ಕೊಡಬೇಕು. ವಿದ್ಯುತ್‌ ದರ ಹೆಚ್ಚಳ ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಸಿಪಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಬಾಬುರಾವ್ ಹೊನ್ನ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ನಜೀರ್ ಅಹ್ಮದ್, ಅಲಿಅಹ್ಮದ್ ಖಾನ್, ಪ್ರಭು ತಗಣಿಕರ್, ಮಹಮ್ಮದ್ ಫಾಯತ್ ಅಲಿ, ಮಹಮ್ಮದ್‌ ಖಮರಪಟೇಲ್, ಸುನೀಲ ವರ್ಮಾ, ಗುರುಪಾದಯ್ಯ ಹಾಗೂ ಅಬ್ದುಲ್ ಖಾದರ ಇದ್ದರು.

ಸಚಿವರ ಕಚೇರಿ ಮುಂದೆ ಪ್ರತಿಭಟನೆ
ರೈತರಿಗೆ ಸಮರ್ಪಕ ಬಿತ್ತನೆ ಬೀಜ ವಿತರಣೆ ಮಾಡಬೆಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸಂಪರ್ಕ ಕೇಂದ್ರಗಳಲ್ಲಿ ಸಕಾಲದಲ್ಲಿ ಸೋಯಾಬೀನ್, ಉದ್ದು ಹಾಗೂ ಹೆಸರು ಸಿಗುತ್ತಿಲ್ಲ. ರೈತರು ಬಿತ್ತನೆ ಬೀಜಕ್ಕಾಗಿ ಪರದಾಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಬು ಹೊನ್ನಾ, ಅಹಮದ್ ಜಂಬಗಿ, ಬಸವರಾಜ ಪಾಟೀಲ, ಖದೀರ್‌ ಮಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT