ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡ್ರಿ: ಬದುಕಿಗೆ ಆಸರೆಯಾದ ನುಗ್ಗೆ, ಉತ್ತಮ ಆದಾಯ

ಐದು ಸಾವಿರ ಗಿಡ ನಾಟಿ; ಬೀಜ, ಸೊಪ್ಪೂ ಮಾರಾಟ
ಗುರುಪ್ರಸಾದ ಮೆಂಟೇ
Published 15 ಮಾರ್ಚ್ 2024, 5:15 IST
Last Updated 15 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಹುಲಸೂರ: ಸಮೀಪದ ಪಾಂಡ್ರಿ ಗ್ರಾಮದ ಶ್ರೀರಂಗರಾವ ಗಾಜರೆ ಐದು ಎಕರೆ ಜಮೀನಲ್ಲಿ ನುಗ್ಗೆ ಬೆಳೆದು ಯಶಸ್ಸು ಕಂಡಿದ್ದಾರೆ.

ಶ್ರೀರಂಗರಾವ ಅವರು ಕಳೆದ ವರ್ಷದ ಸಪ್ಟೆಂಬರ್‌ನಲ್ಲಿ ಒಟ್ಟು 5 ಸಾವಿರ ನುಗ್ಗೆ ಗಿಡಗಳನ್ನು ನಾಟಿ ಮಾಡಿದ್ದರು.

12 ಅಡಿಗಳ ಅಂತರದಲ್ಲಿ ಹಾಕಿದ ಗಿಡಗಳು ಆರು ತಿಂಗಳಲ್ಲಿ ಕಾಯಿ ಬಿಟ್ಟಿವೆ. ಮೊದಲ ಹಂತದಲ್ಲಿ ಒಂದು ಕ್ವಿಂಟಾಲ್‌ಗೂ ಹೆಚ್ಚು ನುಗ್ಗೆ ಮಾರಾಟ ಮಾಡಿದ್ದಾರೆ. ಬಹುವಾರ್ಷಿಕ ತರಕಾರಿ ಬೆಳೆಯಾಗಿರುವ ನುಗ್ಗೆ ಇನ್ನೂ ಹಲವು ದಿನ ಫಸಲು ನೀಡಲಿದೆ. ನಾಲ್ಕು ದಿನಕ್ಕೊಮ್ಮೆ ಕಿತ್ತು ಮಾರುಕಟ್ಟೆಗೆ ತೆಗೆದುಕೊಂಡು ಹೋಗುತ್ತಾರೆ.

‘ತೋಟಗಾರಿಕೆ ಅಧಿಕಾರಿಗಳೊಂದಿಗೆ ಚರ್ಚಿಸುವಾಗ ನುಗ್ಗೆ ಬೆಳೆಯ ಬಗ್ಗೆ ಮಾಹಿತಿ ಸಿಕ್ಕಿತು. ಐದು ಎಕರೆಗೆ ‘ಓಡಿಸ್ಸಿ’ ತಳಿಯ ಐದು ಸಾವಿರ ಸಸಿಗಳನ್ನು ನೆಟ್ಟಿದ್ದೆ. ಸಮಗ್ರ ತೋಟಗಾರಿಕೆಗೆ ಯೊಜನೆ ಅಡಿಯಲ್ಲಿ ಸಸಿ ನಾಟಿ ಮಾಡಲು ಸಹಾಯಧನ ಒದಗಿಸಿದ್ದರಿಂದ ಇದು ಸಾಧ್ಯವಾಗಿದೆ’ ಎಂದು ಶ್ರೀರಂಗರಾವ ಹೇಳಿದರು.

ಸ್ಥಳಿಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹55 ರಂತೆ ನುಗ್ಗೆ ಮಾರಾಟ ಮಾಡಿದ್ದಾರೆ. ಹೆಚ್ಚು ಫಸಲು ಬಂದಾಗ ಭಾಲ್ಕಿ, ಬೀದರ, ಲಾತುರ ಸೇರಿ ಇತರ ಮಾರುಕಟ್ಟೆಗೆ ರವಾನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ನುಗ್ಗೆ ಸೊಪ್ಪು, ನುಗ್ಗೆ ಬೀಜ ಮಾರಾಟದ ಬಗ್ಗೆಯೂ ಅವರು ಆಸಕ್ತಿ ಹೊಂದಿದ್ದಾರೆ.

‘ನುಗ್ಗೆ ಬೀಜಕ್ಕೆ ಮಾತ್ರ ಹಣ ಖರ್ಚು ಮಾಡಿದ್ದೇನೆ. ರಸಗೊಬ್ಬರದ ಜತೆ ಜೀವಾಮೃತ ನೀಡುತ್ತೇನೆ. ಸಾವಯವ ಕೃಷಿ ಮಾಡುತ್ತಿದ್ದು, ನೈಸರ್ಗಿಕವಾಗಿ ನುಗ್ಗೆ ಬೆಳೆಯುತ್ತಿದ್ದೇನೆ. ನಿರೀಕ್ಷೆ ಮೀರಿದ ಪ್ರತಿಫಲ ಲಭ್ಯವಾಗುತ್ತಿದೆ. ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕೃಷಿ ಮಾಡುತ್ತಿದ್ದೇವೆ’ ಎಂದೂ ಅವರು ತಿಳಿಸಿದರು.

ನುಗ್ಗೆ ಕಾಯಿ ಮಾತ್ರವಲ್ಲ, ಸೊಪ್ಪು ಹಾಗೂ ಬೀಜಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಸೊಪ್ಪು ಒಣಗಿಸಿ ಹದ ಮಾಡಿದರೆ ಉತ್ತಮ ಬೆಲೆ ಸಿಗುತ್ತದೆ. ಕಾಯಿಗೆ ನಿರೀಕ್ಷಿತ ಬೆಲೆ ಸಿಗದೇ ಇದ್ದರೆ ಬೀಜವಾಗುವವರೆಗೆ ಬಿಟ್ಟು ಮಾರಾಟ ಮಾಡಬಹು. ನುಗ್ಗೆ ಕಾಯಿ ಮೊಣಕೈಯಷ್ಟು ಉದ್ದ ಬೆಳೆದಿವೆ. ನುಗ್ಗೆ ಗಾತ್ರ ನೋಡಿಯೇ ಖರೀದಿಗೆ ಹಲವರು ಆಸಕ್ತಿ ತೋರುತ್ತಿದ್ದಾರೆ.

ಕೊಳವೆ ಬಾವಿಯನ್ನೇ ನಂಬಿಕೊಂಡು ಬರದಲ್ಲೂ ತೋಟಗಾರಿಕೆ ಕೃಷಿ ಮಾಡುತ್ತಿದ್ದೇವೆ. ನೀರು ಹನಿ ನೀರಾವರಿಯ ಹೊಸ ಪ್ರಯೋಗದಿಂದ ಅನುಕೂಲವಾಗಿದೆ. ನುಗ್ಗೆಯಿಂದ ಉತ್ತಮ ಆದಾಯವೂ ಲಭ್ಯವಾಗುತ್ತಿದೆ
– ಶ್ರೀರಂಗರಾವ ಗಾಜರೆ, ನುಗ್ಗೆ ಬೆಳೆದ ರೈತ
ಶ್ರೀರಂಗರಾವ ಅವರ ಹೊಲದಲ್ಲಿ 5 ಸಾವಿರ ನುಗ್ಗೆ ಮರಗಳು ಇವೆ. ತೋಟದ ನಿರ್ವಹಣೆ ಉತ್ತಮವಾಗಿದೆ. ನಮ್ಮ ಇಲಾಖೆಯಿಂದ ಹನಿ ನೀರಾವರಿ ಯೋಜನೆ ಹಾಗೂ ಸಮಗ್ರ ತೋಟಗಾರಿಕೆಗೆ ಯೊಜನೆ ಅಡಿಯಲ್ಲಿ ಸಸಿ ನಾಟಿ ಮಾಡಲೂ ಸಹಾಯಧನ ಒದಗಿಸಿದ್ದು ತಿಂಗಳಿಗೊಮ್ಮೆ ಭೇಟಿ ಕೊಟ್ಟು ಸಲಹೆ ನೀಡಿದ್ದೇವೆ.
–ರವೀಂದ್ರ ಜಟಗೊಂಡ, ಸಹಾಯಕ ತೋಟಗಾರಿಕೆ ಅಧಿಕಾರಿ ಸಾಯಗಾಂವ ಹೋಬಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT