ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗದ ಬೀಜ: ತಪ್ಪದ ಪರದಾಟ

ಪ್ರತಿದಿನ ರೈತ ಸಂಪರ್ಕ ಕೇಂದ್ರಕ್ಕೆ ಓಡಾಡುತ್ತಿರುವ ಅನ್ನದಾತರು
Last Updated 9 ಜೂನ್ 2020, 11:30 IST
ಅಕ್ಷರ ಗಾತ್ರ

ಔರಾದ್: ಮುಂಗಾರು ಬಿತ್ತನೆ ಆರಂಭಕ್ಕೂ ಮುಂಚೆ ತಾಲ್ಲೂಕಿನಲ್ಲಿ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ವಿತರಣೆ ಆರಂಭವಾದ ನಾಲ್ಕು ದಿನಗಳಲ್ಲೇ ಬೀಜ ಖಾಲಿಯಾಗಿ ರೈತರು ವಿತರಣಾ ಕೇಂದ್ರದ ಬಾಗಿಲು ಕಾಯುತ್ತಿದ್ದಾರೆ.

‘6ನೇ ತಾರೀಖಿಗೆ ಬನ್ನಿ ಬೀಜ ಕೊಡುತ್ತೇವೆ ಎಂದು ಹೇಳಿದ್ದರು. ಈಗ ನಾಲ್ಕು ದಿನಗಳಿಂದ ಬರುತ್ತಿದ್ದೇನೆ. ಆದರೂ ಬೀಜ ಕೊಟ್ಟಿಲ್ಲ’ ಎಂದು ನಾರಾಯಣಪುರ ರೈತ ಶ್ರೀಕಾಂತ ನಾಗೂರೆ ಅಸಮಾಧಾನ ವ್ಯಕ್ತಪಡಿಸಿದರು.

‘ಗ್ರಾಮವಾರು ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಆದರೆ ಇಂದು ಬೀಜ ಕೇಳಲು ಬಂದರೆ ಮುಗಿದು ಹೋಗಿವೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ರೈತರು ವಿನಾ ಕಾರಣ ತೊಂದರೆ ಪಡುವಂತಾಗಿದೆ’ ಎಂದು ಪ್ರಭುರಾವ ಕಸ್ತೂರೆ ದೂರಿದರು.

‘ಭಾನುವಾರ ಬೀಜ ಕೊಡಲಾಗುವುದು ಎಂದು ನಮಗೆ ಹೇಳಿದ್ದರು. ಮೂರು ದಿನಗಳಿಂದ ಸುತ್ತಾಡಿದರೂ ಇಲ್ಲಿ ಯಾರು ಕೇಳುವವರಿಲ್ಲ’ ಎಂದು ನರಸಿಂಹಪುರ ರೈತರು ಅಳಲು ತೋಡಿಕೊಂಡರು.

ಬೀಜ ವಿತರಣೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ. ಪ್ರಭಾವಿಗಳಿಗೆ ಬೇಕಾದಷ್ಟು ಹಾಗೂ ಬೇಗ ಬೀಜ ವಿತರಿಸಲಾಗುತ್ತಿದೆ. ಬಡ ರೈತರಿಗೆ ವಿನಾ ಕಾರಣ ತೊಂದರೆ ಉಂಟು ಮಾಡಲಾಗುತ್ತಿದೆ ಎಂದು ಕೆಲ ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ತಾಲ್ಲೂಕಿನ ವಡಗಾಂವ್ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಬೀಜಕ್ಕಾಗಿ ಮುಗಿ ಬಿಳುತ್ತಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಅಂತರ ಕಾಯ್ದುಕೊಂಡು ಬೀಜ ವಿತರಣೆ ವ್ಯವಸ್ಥೆ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ಸೋಯಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ 19 ಸಾವಿರ ಕ್ವಿಂಟಲ್ ಮಾರಾಟ ಮಾಡಲಾಗಿದೆ. ಇನ್ನು 10 ಸಾವಿರ ಕ್ವಿಂಟಲ್ ಬೇಡಿಕೆ ಇದೆ. ಸರ್ಕಾರ ಬೀಜ ಕಳುಹಿಸಿದರೆ ಕೊಡುತ್ತೇವೆ. ಅಲ್ಲಿಯ ತನಕ ರೈತರು ಸಂಯಮದಿಂದ ವರ್ತಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಅಬ್ದುಲ್ ಮಾಜೀದ್ ಮನವಿ ಮಾಡಿದ್ದಾರೆ.

‘ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬೀಜದ ಕೊರತೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಕ್ಷೇತ್ರದ ಶೇ. 60ರಷ್ಟು ರೈತರಿಗೆ ಇನ್ನೂ ಬೀಜ ಸಿಕ್ಕಿಲ್ಲ’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT