ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

77 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಗೆ ಸಿದ್ಧತೆ

ಬೀಜ ಖರೀದಿ ಜೋರು: ಸೋಯಾಬಿನ್‌ ಬೀಜಕ್ಕೆ ಹೆಚ್ಚಿದ ಬೇಡಿಕೆ
Last Updated 3 ಜೂನ್ 2020, 10:48 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮುಂಗಾರು ಬರುವುದಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವಾಗಲೇ ರಾಜೇಶ್ವರ ಹಾಗೂ ಮುಡಬಿ ಹೋಬಳಿಯ ಕೆಲ ಭಾಗದಲ್ಲಿ ಸೋಮವಾರ ಉತ್ತಮ ಮಳೆ ಆಗಿದ್ದರಿಂದ ರೈತರು ಸಂತಸಗೊಂಡಿದ್ದಾರೆ. ಬಸವಕಲ್ಯಾಣ ಮತ್ತು ಹುಲಸೂರ ತಾಲ್ಲೂಕಿನಲ್ಲಿ ಒಟ್ಟು 77000 ಹೆಕ್ಟೇರ್‌ನಲ್ಲಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದು, ಕೃಷಿ ಇಲಾಖೆಯವರು ಬಿತ್ತನೆ ಬೀಜದ ವಿತರಣೆ ಆರಂಭಿಸಿದ್ದಾರೆ.

ಲಾಕ್‌ಡೌನ್‌ ಅನೇಕರಿಗೆ ಶಾಪವಾಗಿ ಪರಿಣಮಿಸಿದ್ದರೂ ರೈತರಿಗೆ ಮಾತ್ರ ತಮ್ಮ ಹೊಲಗಳಲ್ಲಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಅನುಕೂಲ ಕಲ್ಪಿಸಿಕೊಟ್ಟಿತು. ಇದಲ್ಲದೆ ಮಹಾನಗರಗಳಿಗೆ ವಲಸೆ ಹೋಗಿದ್ದವರು ಹಳ್ಳಿಗಳಿಗೆ ವಾಪಸಾಗಿದ್ದರಿಂದ ಕೃಷಿ ಚಟುಚಟಿಕೆಗಳಿಗೆ ಕಾರ್ಮಿಕರ ಕೊರತೆಯೂ ಆಗಲಿಲ್ಲ. ಹೀಗಾಗಿ ಎಲ್ಲೆಡೆ ಹೊಲಗಳಲ್ಲಿನ ಮಣ್ಣನ್ನು ಹದಗೊಳಿಸಲಾಗಿದೆ. ಕಸಕಡ್ಡಿ ತೆಗೆದು ತಿಪ್ಪೆಗೊಬ್ಬರ ಹರಡಿ ಬಿತ್ತನೆಗೆ ಸಿದ್ಧತೆ ಕೈಗೊಳ್ಳಲಾಗಿದೆ. ಕೆಲವೆಡೆ ಬೆಳೆ ನಾಟಿ ಕೂಡ ಮಾಡಲಾಗಿದ್ದು ಮಳೆ ಬರುವುದನ್ನೇ ಎದುರು ನೋಡುವಂತಾಗಿದೆ.

ಪ್ರತಿವರ್ಷ ತಾಲ್ಲೂಕಿನಲ್ಲಿನ ಸೋಯಾಬಿನ್‌ ಬಿತ್ತನೆ ಕ್ಷೇತ್ರದಲ್ಲಿ ಸಾಕಷ್ಟು ಹೆಚ್ಚಳ ಆಗುತ್ತಿದೆ. ಮಳೆ ಕೊರತೆ ಹಾಗೂ ಕಾರ್ಖಾನೆಯವರು ಸಕಾಲಕ್ಕೆ ಕಬ್ಬು ಸಾಗಾಣಿಕೆ ಕೈಗೊಳ್ಳದ ಕಾರಣ ಕಬ್ಬಿನ ಕ್ಷೇತ್ರ ಕ್ಷೀಣಿಸುತ್ತಿದೆ. ಈ ವರ್ಷ 39000 ಹೆಕ್ಟೇರ್‌ನಲ್ಲಿ ಸೋಯಾಬಿನ್ ಬಿತ್ತನೆ ನಡೆಯಬಹುದು ಎಂದು ಅಂದಾಜಿಸಲಾಗಿದೆ. 14000 ಹೆಕ್ಟೇರ್‌ನಲ್ಲಿ ತೊಗರಿ, 3500 ಹೆಕ್ಟೇರ್‌ನಲ್ಲಿ ಹೆಸರು, 2000 ಹೆಕ್ಟೇರ್‌ನಲ್ಲಿ ಉದ್ದು, 2100 ಹೆಕ್ಟೇರ್‌ನಲ್ಲಿ ಜೋಳ ಹಾಗೂ 18400 ಹೆಕ್ಟೇರ್‌ನಲ್ಲಿ ಇತರೆ ಆಹಾರಧಾನ್ಯ ಬಿತ್ತನೆ ಆಗುವ ಸಾಧ್ಯತೆ ಇದೆ.

ದಾಸ್ತಾನು: ‘6 ರೈತ ಸಂಪರ್ಕ ಕೇಂದ್ರಗಳನ್ನು ಒಳಗೊಂಡು ಒಟ್ಟು 30 ಬೀಜ ವಿತರಣಾ ಕೇಂದ್ರಗಳಲ್ಲಿ 9820 ಕ್ವಿಂಟಾಲ್ ಸೋಯಾಬಿನ್ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿತ್ತು. ಅದರಲ್ಲಿ 4500 ಕ್ವಿಂಟಾಲ್ ಮಾರಾಟವಾಗಿದೆ. ಇತರೆ ಬಿತ್ತನೆ ಬೀಜಗಳನ್ನು ಕೂಡ ದಾಸ್ತಾನು ಮಾಡಲಾಗಿದ್ದರೂ ರೈತರು ಸೋಯಾಬಿನ್‌ ಬೀಜವನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ತಿಳಿಸಿದ್ದಾರೆ.

‘ಈಗಾಗಲೇ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮಾರಾಟ ನಡೆದಿದೆ. ಖಾಸಗಿ ಬೀಜ ಮಾರಾಟ ಕೇಂದ್ರಗಳಲ್ಲಿಯೂ ಬೀಜ, ಗೊಬ್ಬರ ದೊರಕುತ್ತಿದೆ. ಈ ಬಗ್ಗೆ ಮಂಗಳವಾರ ಪಟ್ಟಣದಲ್ಲಿನ ಅಡತ್ ಮಾರುಕಟ್ಟೆಯಲ್ಲಿನ ಬೀಜ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ವಿವಿಧ ಬೆಳೆಗಳನ್ನು ಬೆಳೆಯುವ ಕುರಿತು ಹಾಗೂ ಬಿತ್ತನೆ ಬೀಜದ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಬಾರಿ ಬಿತ್ತನೆ ಸಕಾಲಕ್ಕೆ ನಡೆಯುವ ಸಾಧ್ಯತೆ ಇದೆ’ ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT