ಭಾನುವಾರ, ಆಗಸ್ಟ್ 1, 2021
21 °C

ಕ್ವಾರಂಟೈನ್‌ ವಿರೋಧಿಸಿದರೆ ಎಫ್‌ಐಆರ್‌ ದಾಖಲಿಸಿ: ಜಿಲ್ಲಾಧಿಕಾರಿ ರಾಮಚಂದ್ರನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ನಿಗಾ ಇಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್. ‘ಕ್ವಾರಂಟೈನ್‌ ಕೇಂದ್ರದಲ್ಲಿ ನಿಯಮ ಪಾಲಿಸದವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ಏಳು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿ, ಪುನಃ ಏಳು ದಿನ ಹೋಮ್ ಕ್ವಾರಂಟೈನ್‌ದಲ್ಲಿರುವ ಯಾರಾದರೂ ಹೊರಗಡೆ ಸುತ್ತಾಡುವುದು ಹಾಗೂ ಹೋಮ್ ಕ್ವಾರಂಟೈನ್‌ಗೆ ವಿರೋಧಿಸುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು’ ಎಂದು ಡಿಎಚ್‌ಒ ಡಾ.ವಿ.ಜಿ.ರೆಡ್ಡಿ ಹಾಗೂ ಎಲ್ಲ ತಾಲ್ಲೂಕು ಆರೋಗ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

‘ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಪಾಲಿಸಬೇಕಿರುವ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗಿದೆ. ಆದರೆ, ಬೀದರ್‌ ಜಿಲ್ಲೆಯಲ್ಲಿ ತೃಪ್ತಿಕರ ಕೆಲಸ ಆಗಿಲ್ಲ. ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳ ಮೇಲೆ ನಿಗಾ ವಹಿಸದಿದ್ದರೆ ಅಲ್ಲಿ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗಲಿದೆ. ಇದು ಕ್ಷಿಪ್ರಗತಿಯಲ್ಲಿ ಸೋಂಕು ಹರಡಲು ಕಾರಣವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕೋವಿಡ್-19 ಸೋಂಕು ದೃಢಪಟ್ಟ 24 ಗಂಟೆಯೊಳಗಡೆ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಬೇಕು. ಯಾವುದೇ ಕಾರ್ಯವಿರಲಿ ಅದನ್ನು ಬದಿಗೊತ್ತಿ, ವಿಳಂಬಕ್ಕೆ ಅವಕಾಶವಿಲ್ಲದ ಹಾಗೆ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

ಕಂಟೇನ್ಮೆಂಟ್ ಝೋನ್‌ ವ್ಯಾಪ್ತಿಯಲ್ಲಿ ಗುರುತಿಸಿ ಪಟ್ಟಿ ಮಾಡಿದ ತೀವ್ರತರ ಜ್ವರ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆ ಕಾರ್ಯ ಕೂಡ ವಿಳಂಬವಿಲ್ಲದ ಹಾಗೆ ನಡೆಯಬೇಕು. ಪ್ರಯೋಗಾಲಯದಿಂದ ಬೇಗ ವರದಿ ಪಡೆದುಕೊಳ್ಳಲು ಮುತುವರ್ಜಿ ವಹಿಸಬೇಕು’ ಎಂದು ಸೂಚಿಸಿದರು.

’ಉತ್ತಮ ಕಾರ್ಯಯೋಜನೆ ಮತ್ತು ಸಮಯ ನಿರ್ವಹಣೆಗೆ ಒತ್ತು ಕೊಟ್ಟಲ್ಲಿ ಕೋವಿಡ್-19 ಹಿನ್ನೆಲೆಯ ಯಾವುದೇ ಕಾರ್ಯವನ್ನು ಅತ್ಯಂತ ಸರಳವಾಗಿ ಕಾಲಮಿತಿಯೊಳಗಡೆ ಮಾಡಬಹುದಾಗಿದೆ. ಕೋವಿಡ್- 19 ತಡೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ನಿತ್ಯದ ಕಚೇರಿ ಕೆಲಸದ ಜತೆಗೆ ಕೋವಿಡ್ 19 ಕೆಲಸವನ್ನೂ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ್, ಭಂವರಸಿಂಗ್ ಮೀನಾ,
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕೃಷ್ಣಾ ರೆಡ್ಡಿ ಹಾಗೂ ವೈದ್ಯಾಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು