ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಬೀಜ, ಸೋಯಾಬೀನ್, ತೊಗರಿ ಅಗ್ನಿಗೆ ಆಹುತಿ

Published 28 ಮಾರ್ಚ್ 2024, 16:44 IST
Last Updated 28 ಮಾರ್ಚ್ 2024, 16:44 IST
ಅಕ್ಷರ ಗಾತ್ರ

ಬೀದರ್ : ವಿವಿಧ ತರಕಾರಿಗಳ ಬೀಜ ಹಾಗೂ ಆಹಾರ ಧಾನ್ಯ ಸಂಗ್ರಹಿಸಿ ಇಟ್ಟಿದ್ದ ತಾಲ್ಲೂಕಿನ ಬಗದಲ್ ಗ್ರಾಮದ ವಿಶಾಲ ಗೋದಾಮಿನಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.

ಗ್ರಾಮದ ತರಕಾರಿ ಬೀಜಗಳ ವ್ಯಾಪಾರಿ ಬಾಕಿ ಸೇಠ್ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಸಂಭವಿಸಿದ ಘಟನೆಯಲ್ಲಿ ಈರುಳ್ಳಿ ಬೀಜ ಅತಿ ಹೆಚ್ಚು ಪ್ರಮಾಣದಲ್ಲಿ ಬೆಂಕಿಗೆ ಆಹುತಿಯಾಗಿದೆ. ಚಿಯಾ, ಗೋಳಿ ಸೊಪ್ಪು ಬೀಜ, ಸೋಯಾಬೀನ್, ತೊಗರಿ, ಪಿವಿಸಿ ಪೈಪ್ ಮೊದಲಾದ ವಸ್ತುಗಳು ಸುಟ್ಟು ಕರಕಲಾಗಿವೆ. ಗೋದಾಮಿನಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ.

ಅಗ್ನಿಶಾಮಕ ದಳದಿಂದ ಬೆಂಕಿ ನಿಯಂತ್ರಣ: ಅಗ್ನಿಶಾಮಕ ದಳದ 18 ಸಿಬ್ಬಂದಿಯ ತಂಡ ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು. ಆಗಬಹುದಾಗಿದ್ದ ಹೆಚ್ಚಿನ ಹಾನಿ ತಪ್ಪಿಸಿತು.

ಸಂಜೆ ಗೋದಾಮಿನಲ್ಲಿ ಬೆಂಕಿ ತಗುಲಿದ ಮಾಹಿತಿ ಬಂದಿತು. ತಕ್ಷಣ ಬೀದರ್‍ನಿಂದ ಎರಡು ಹಾಗೂ ಹುಮನಾಬಾದ್‍ನಿಂದ ಒಂದು ವಾಹನ ಸೇರಿ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ನಿರಂತರ ಎರಡೂವರೆ ತಾಸು ಕಾರ್ಯಾಚರಣೆ ಕೈಗೊಂಡು ಬೆಂಕಿ ನಿಯಂತ್ರಿಸಲಾಯಿತು ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಎ. ಘಾಟಗೆ ತಿಳಿಸಿದರು.

ಹಳೆಯ ಆಸ್ಪತ್ರೆ ಸಮೀಪದ ಗೋದಾಮು ಸುತ್ತಮುತ್ತ ಮನೆಗಳು ಇವೆ. ಇತರೆಡೆ ವ್ಯಾಪಿಸದಂತೆ ಬೆಂಕಿ ನಿಯಂತ್ರಿಸಲಾಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಘಟನೆಗೆ ಕಾರಣ ತಿಳಿದಿಲ್ಲ ಎಂದು ಅವರು ಹೇಳಿದರು.

₹2 ಕೋಟಿ ನಷ್ಟ: ಅವಘಡದಲ್ಲಿ ಸುಮಾರು ₹2 ಕೋಟಿ ನಷ್ಟ ಉಂಟಾಗಿದೆ ಎಂದು ಗೋದಾಮಿನ ಮಾಲೀಕ ಬಾಕಿ ಸೇಠ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

150x140 ಅಡಿಯ ಗೋದಾಮಿನಲ್ಲಿ ಈರುಳ್ಳಿ, ಚಿಯಾ, ಗೋಳಿ ಸೊಪ್ಪು, 65 ಚೀಲ ಸೋಯಾಬೀನ್, 50 ಚೀಲ ತೊಗರಿ, ಪಿವಿಸಿ ಪೈಪ್ ಮೊದಲಾದವುಗಳನ್ನು ಇಡಲಾಗಿತ್ತು. ಅವಘಡದಲ್ಲಿ ಅವುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಿದರು.

ತಮ್ಮಲ್ಲಿ ಸಿದ್ಧಪಡಿಸುವ ತರಕಾರಿ ಬೀಜಗಳನ್ನು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.

ಬಗದಲ್ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ನಿಂಗಪ್ಪ ಮಣ್ಣೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT