ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಉತ್ಸವಕ್ಕೆ ಐದು ಲಕ್ಷ ಜನ: ಹೈರಾಣಾದ ಜಿಲ್ಲಾಡಳಿತ

ಜನಸಾಗರ ನಿಯಂತ್ರಿಸಲು ಹಗಲು, ರಾತ್ರಿ ಶ್ರಮಿಸಿದ ಪೊಲೀಸರು
Last Updated 9 ಜನವರಿ 2023, 19:30 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿರುವ ಬೀದರ್ ಉತ್ಸವಕ್ಕೆ ಮೊದಲ ದಿನ ನಿರೀಕ್ಷೆಯಂತೆ ಒಂದು ಲಕ್ಷಕ್ಕೂ ಅಧಿಕ ಜನ ಬಂದಿದ್ದರು. ಆದರೆ, ಎರಡನೇ ದಿನವಾದ ಭಾನುವಾರ ರಜೆ ಇದ್ದ ಕಾರಣ ಹಾಗೂ ಪತ್ರಿಕೆಗಳು ಅಧಿಕ ಪ್ರಚಾರ ನೀಡಿದ ಫಲವಾಗಿ ಐದು ಲಕ್ಷಕ್ಕೂ ಅಧಿಕ ಜನ ಭೇಟಿ ಕೊಟ್ಟು ಹೋದರು. ಜನ ದಟ್ಟಣೆ ನಿಯಂತ್ರಿಸಲು ಜಿಲ್ಲಾಡಳಿತ ಭಾರಿ ಪ್ರಯಾಸ ಪಡಬೇಕಾಯಿತು.

ಬೆಳಿಗ್ಗೆ ಗ್ರಾಮೀಣ ಪ್ರದೇಶಗಳಿಂದ ರೈತರು ಕೃಷಿ ಮೇಳಕ್ಕೆ ಭೇಟಿ ಕೊಟ್ಟರೆ, ನಗರ ಪ್ರದೇಶದ ಜನ ಮಕ್ಕಳ ಆಟಿಕೆ ಉತ್ಸವ, ಬೋಟಿಂಗ್‌ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬೀದರ್‌ ಕೋಟೆ ಆವರಣಕ್ಕೆ ಬಂದು ಪ್ರದರ್ಶನ ವೀಕ್ಷಿಸಿದರು.

ಮೊದಲ ದಿನ ಚಲನಚಿತ್ರ ನಟ ಕಿಚ್ಚ ಸುದೀಪ ಬಂದಿರಲಿಲ್ಲ. ಬೆಂಗಳೂರಿನಿಂದ ಬಂದಿದ್ದ ಕಲಾವಿದರು ಅನೇಕ ಹಾಡುಗಳನ್ನು ಹಾಡಿದರು. ಪ್ರೇಕ್ಷಕರು ಹೆಚ್ಚು ಆಕರ್ಷಿತರಾಗಲಿಲ್ಲ. ಭಾನುವಾರ ಕುಮಾರಸಾನು ಹಾಗೂ ಹೈದರಾಬಾದ್‌ನ ಗಾಯಕಿ ಮಂಗ್ಲಿ ಅಭಿಮಾನಿಗಳೇ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇವರ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಮೊಬೈಲ್‌ ಟಾರ್ಚ್‌ ಆನ್‌ ಮಾಡಿ ಹುರಿದುಂಬಿಸಿದರು. ಅನುರಾಧಾ ಭಟ್‌ ಹಾಗೂ ವೀರ ಸಮರ್ಥ ಅವರೂ ಪ್ರಬುದ್ಧ ಗಾಹನದ ಮೂಲಕ ಪ್ರೇಕ್ಷಕರ ಮನ ತಣಿಸಿದರು.

ಪ್ರಸಿದ್ಧ ಕಲಾವಿದರನ್ನು ನೋಡಲು ವಿಜಯಪುರ, ಕಲಬುರಗಿ, ನೆರೆಯ ತೆಲಂಗಾಣದ ತಾಲ್ಲೂಕು ಕೇಂದ್ರಗಳಿಂದಲೂ ಅಭಿಮಾನಿಗಳು ಬಂದಿದ್ದರು. ಹೀಗಾಗಿ ಜನ ದಟ್ಟಣೆ ಹೆಚ್ಚಾಗಿತ್ತು. ಮುಖ್ಯರಸ್ತೆಗಳ ಮೂಲಕ ಜನಸಾಗರವೇ ಹರಿದು ಬರುತ್ತಿದ್ದ ಕಾರಣ ಜನವಾಡ ರಸ್ತೆಯ ಸಿದ್ಧಾರ್ಥ ಕಾಲೇಜು, ನೂರು ಹಾಸಿಗೆಗಳ ಆಸ್ಪತ್ರೆ, ವಿಜ್ಞಾನ ಉಪ ಕೇಂದ್ರದ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರ ನಿಯಂತ್ರಿಸಲಾಗಿತ್ತು. ಗಣ್ಯರನ್ನು ಹೊರತು ಪಡಿಸಿ ಜನಸಾಮಾನ್ಯರು ಕೋಟೆ ವರೆಗೆ ನಡೆದುಕೊಂಡೇ ಬಂದರು.

ಕಾರಿನಿಂದ ಇಳಿದು ಕುದುರೆ ಏರಿದ ಅಧಿಕಾರಿ: ಬೀದರ್‌ ಕೋಟೆಯ ಎಎಸ್‌ಐ ಕಚೇರಿ ಹಿಂಬದಿಯಲ್ಲಿ ಕಾರುಗಳ ಓಡಾಟದಿಂದಾಗಿ ಭಾರಿ ಜನ ದಟ್ಟಣೆ ಉಂಟಾಯಿತು. ಜನರು ಮುಂದೆ, ಹಿಂದೆ ಹೋಗದಂತೆ ಪರಿಸ್ಥಿತಿ ಉಂಟಾಯಿತು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ್ ಕೈಯಲ್ಲಿ ಮೈಕ್‌ ಹಿಡಿದು ಜನರಿಗೆ ಮನವಿ ಮಾಡಿಕೊಳ್ಳುತ್ತಲೇ ಇದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಕಾರಿನಿಂದ ಇಳಿದು ಉತ್ಸವಕ್ಕೆ ಬಂದಿದ್ದ ಕುದುರೆಯನ್ನು ಏರಿ ಜನ ದಟ್ಟಣೆ ನಿಯಂತ್ರಿಸಲು ಪ್ರಯತ್ನಿಸಿದರು. ಆದರೂ ಜನದಟ್ಟಣೆ ಕಡಿಮೆಯಾಗಲಿಲ್ಲ. ಕೊನೆಗೆ ಎಎಸ್‌ಐ ಅಧಿಕಾರಿಗಳು ಕಚೇರಿ ಮುಂಭಾಗದ ಇನ್ನೊಂದು ಪ್ರವೇಶ ದ್ವಾರದ ಬೀಗ ತೆಗೆದು ಹೋಗಲು ಅವಕಾಶ ಮಾಡಿಕೊಟ್ಟರು. ನಂತರ ಜನ ದಟ್ಟಣೆ ಕಡಿಮೆ ಆಯಿತು.

ನಿರೀಕ್ಷೆಗೂ ಮೀರಿ ಬಂದ ಜನ
'ಬೀದರ್‌ ಉತ್ಸವದ ಎರಡನೆಯ ದಿನದ ಕಾರ್ಯಕ್ರಮಕ್ಕೆ ಭಾನುವಾರ ಬೆಳಿಗ್ಗೆಯಿಂದ ರಾತ್ರಿ ವರೆಗೂ ಐದು ಲಕ್ಷಕ್ಕೂ ಅಧಿಕ ಜನ ಬಂದು ಹೋಗಿದ್ದಾರೆ' ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ತಿಳಿಸಿದ್ದಾರೆ.

'ಬೀದರ್‌ ಉತ್ಸವಕ್ಕೆ ಒಂದರಿಂದ ಎರಡು ಲಕ್ಷ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಮೊದಲ ದಿನ ಒಂದು ಲಕ್ಷಕ್ಕೂ ಅಧಿಕ ಜನ ಬಂದಿದ್ದರು. ಎರಡನೇ ದಿನ ಭಾನುವಾರದ ರಜೆ ಇದ್ದ ಕಾರಣ ತಾಲ್ಲೂಕು ಕೇಂದ್ರಗಳಿಂದಲೂ ಜನ ವಾಹನಗಳಲ್ಲಿ ಬಂದಿದ್ದರು. ಬೆಳಿಗ್ಗೆಯಿಂದ ತಡ ರಾತ್ರಿಯ ವರೆಗೂ ಕೋಟೆ ಆವರಣದೊಳಗೆ ಐದು ಲಕ್ಷಕ್ಕೂ ಅಧಿಕ ಜನ ಬಂದು ಹೋದರು' ಎಂದು ಹೇಳಿದ್ದಾರೆ.

'ಕೋಟೆಯ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಒಟ್ಟು ಮೂರು ದ್ವಾರಗಳ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪಾಸ್‌ ಹೊಂದಿದವರು, ಗಣ್ಯರು ಬಂದು ಹೋಗಲು ದೆಹಲಿ ದರ್ವಾಜಾ ಮೂಲಕ ವ್ಯವಸ್ಥೆ ಮಾಡಲಾಗಿತ್ತು' ಎಂದು ತಿಳಿಸಿದ್ದಾರೆ.

ಹೃದಯಾಘಾತದಿಂದ ಪಂಚಾಯಿತಿ ಸದಸ್ಯ ಸಾವು
ಬೀದರ್ ಉತ್ಸವಕ್ಕೆ ಜನ ಹರಿದು ಬರುತ್ತಿದ್ದಾಗ ನೂಕು ನುಗ್ಗಲಿನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೋಟೆಯೊಳಗಿನ ಕಾಲಾಭುರ್ಜ್‌ ಕಮಾನ್ ಬಳಿ ಬೀದರ್ ತಾಲ್ಲೂಕಿನ ಯಾಕತಪುರ ಗ್ರಾಮ ಪಂಚಾಯಿತಿ ಸದಸ್ಯ ರಾಚಯ್ಯ ನಾಗಯ್ಯ ಸ್ವಾಮಿ (45) ಅವರಿಗೆ ಹೃದಯಾಘಾತವಾಗಿದೆ. ಆಂಬುಲನ್ಸ್‌ನಲ್ಲಿ ದೆಹಲಿ ದರ್ವಾಜಾ ಮೂಲಕ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರತಿಕಾಂತ ಸ್ವಾಮಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ವಾಮಿಯವರಿಗೆ ಪತ್ನಿ, ಮೂವರು ಪುತ್ರರು ಇದ್ದಾರೆ. ಸಂಜೆ ಯಾಕತಪುರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು ಎಂದು ಗ್ರಾಮದ ಭೀಮರಾವ್‌ ತಿಳಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT