ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಭವನ ಕಸಾಪ ಸುಪರ್ದಿನಲ್ಲಿರಲಿ

21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರ
Published 10 ಮಾರ್ಚ್ 2024, 14:25 IST
Last Updated 10 ಮಾರ್ಚ್ 2024, 14:25 IST
ಅಕ್ಷರ ಗಾತ್ರ

ಬೀದರ್‌: ಎರಡು ದಿನಗಳ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದಲ್ಲಿ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.

ಸಂಜೆ ನಡೆದ ಬಹಿರಂಗ ಅಧಿವೇಶನದಲ್ಲಿ ಒಟ್ಟು ಐದು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಲಾದ ಬೀದರ್‌ ಕನ್ನಡ ಭವನವನ್ನು
ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಮರಳಿ ಪಡೆಯುವ ಪ್ರಯತ್ನವನ್ನು ನಿಲ್ಲಿಸಿ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕನ್ನಡ ಭವನ ಕನ್ನಡ ಸಾಹಿತ್ಯ ಪರಿಷತ್ತಿನ ಸುಪರ್ದಿನಲ್ಲಿರಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ವಿಜಯಕುಮಾರ ಸೋನಾರೆ ಓದಿದರೆ, ಬಾಬುರಾವ ದಾನಿ ಅನುಮೋದಿಸಿದರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಎಂದು ಘೋಷಿಸಿರುವ ರಾಜ್ಯ ಸರ್ಕಾರಕ್ಕೆ ಸಮ್ಮೇಳನ ಕೃತಜ್ಞತೆ ಸಲ್ಲಿಸುತ್ತದೆ. ಜೊತೆಗೆ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ರೂಪುರೇಷೆ ರಚಿಸಿ ಕ್ರಿಯಾಯೋಜನೆ ಮೂಲಕ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶಟ್ಟಿ ಸೂಚಿಸಿದರು. ಕೋಶಾಧ್ಯಕ್ಷ ಶಿವಶಂಕರ ಟೋಕರೆ ಅನುಮೋದಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬೀದರ್‌ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ಮತ್ತು ಕನ್ನಡ ಚಟುವಟಿಕೆಗಾಗಿ ಮಾರ್ಗಸೂಚಿ ರೂಪಿಸಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಶಿವಕುಮಾರ ಕಟ್ಟೆ ಸೂಚಿಸಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಟಿ.ಎಮ್. ಮಚ್ಚೆ ಅನುಮೋದಿಸಿದರು.
371(ಜೆ) ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹಂತದ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಈ ಭಾಗದ ಸಮಗ್ರ ಅಭಿವೃದ್ಧಿಗೆ ನೆರವಾಗಬೇಕೆಂದು ರಮೇಶ ಬಿರಾದಾರ ಸೂಚಿಸಿದರು. ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎಮ್. ಎಸ್. ಮನೋಹರ ಅನುಮೋದಿಸಿದರು.

ಸರ್ಕಾರಿ, ಅನುದಾನ ಹಾಗೂ ಅನುದಾನರಹಿತ ಮತ್ತು ಕೇಂದ್ರೀಯ ವಿದ್ಯಾಲಯ ಸಿಬಿಎಸ್ಇ ಮೊದಲಾದ ಎಲ್ಲ ರೀತಿಯ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕೆಂದು ರಮೇಶ ಸಲಗರ ಸೂಚಿಸಿದರು. ನಾಗರಾಜ ಹಾವಣ್ಣ ಅನುಮೋದಿಸಿದರು.

ಬಸವಕಲ್ಯಾಣದದಲ್ಲಿ ವಚನ ವಿಶ್ವವಿದ್ಯಾಲಯ ಆರಂಭಿಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಅವರು ಅಭಿನಂದನಾರ್ಹರು. ಅದನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು. ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಕೇಂದ್ರ ಸರ್ಕಾರ ರಾಷ್ಟ್ರಮಟ್ಟದಲ್ಲಿ ಆಚರಿಸಲು ಕ್ರಮ ಜರುಗಿಸಬೇಕೆಂದು ಪರಿಷತ್ತಿನ ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಮಠಪತಿ ಸೂಚಿಸಿದರೆ, ಶಾಂತಲಿಂಗ ಮಠಪತಿ ಅನುಮೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT