ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಮ ನೀಡದ ಮಳೆ: ತೊಗರಿ, ಉದ್ದು ಬೆಳೆ ಹಾನಿ ಆತಂಕ

ಕೆಲವು ಪಟ್ಟಣಗಳಲ್ಲಿ ಬಡಾವಣೆಗಳಿಗೆ ನೀರು ನುಗ್ಗಿ ನಿವಾಸಿಗಳಿಗೆ ತೊಂದರೆ: ಕೆಲವು ಕಡೆ ರಸ್ತೆ ಮೇಲೆ ಹರಿದ ನೀರು, ವಾಹನ ಸಂಚಾರ ಸ್ಥಗಿತ
Last Updated 8 ಸೆಪ್ಟೆಂಬರ್ 2021, 3:57 IST
ಅಕ್ಷರ ಗಾತ್ರ

ಖಟಕ ಚಿಂಚೋಳಿ: ಹೋಬಳಿಯಾದ್ಯಂತ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಇದರಿಂದ ತಗ್ಗು ಪ್ರದೇಶದ ಹೊಲಗಳಲ್ಲಿ ನೀರು ತುಂಬಿಕೊಂಡು ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಜಲಾವೃತವಾಗಿವೆ. ಇದರಿಂದ ರೈತರು ಮತ್ತೆ ಸಂಕಷ್ಟ ಅನುಭವಿಸುವಂತಾಗಿದೆ.

‘ಈಗಾಗಲೇ ಉದ್ದು ಬೆಳೆ ರಾಶಿ ಮಾಡುವ ಹಂತದಲ್ಲಿದೆ. ಮಳೆ ಹೀಗೆ ಇನ್ನೆರಡು ದಿನ ಮುಂದುವರಿದರೆ ಹೊಲದಲ್ಲಿಯೇ ಮೊಳಕೆಯೊಡೆದು ಹಾಳಾಗುವುದು. ಅಲ್ಲದೆ, ತೊಗರಿ ಬೆಳೆಗೆ ತೇವಾಂಶ ಹೆಚ್ಚಳವಾಗಿ ಹಾಳಾಗುವ ಸಾಧ್ಯತೆ ಇದೆ’ ಎಂದು ರೈತ ನಾಗೇಶ ಪ್ರಭಾ ಅವರು ಕಳವಳ ವ್ಯಕ್ತಪಡಿಸುತ್ತಾರೆ.

ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ತೊಗರಿ ಬೆಳೆಯಲ್ಲಿ ಸೊರಗು ರೋಗ ಕಾಣಿಸುತ್ತಿದೆ.

‘ತಗ್ಗು ಪ್ರದೇಶಗಳಲ್ಲಿ ನೀರು ನಿಂತರೆ ಹೊಲದ ಸುತ್ತಲೂ ಒಂದು ಅಡಿ ಆಳದ ತಗ್ಗು ತೆಗೆದು ನೀರನ್ನು ಹೊರಹಾಕಬೇಕು.

ತೊಗರಿ ಸೊರಗು ರೋಗ ಕಾಣಿಸಿಕೊಂಡರೆ ಕಾರ್ಬನ್‌ಂಡೈಜಿಮ್ ಒಂದು ಲೀಟರ್ ನೀರಿನಲ್ಲಿ ಒಂದು ಗ್ರಾಂ. ಬೆರೆಸಿ ತೊಗರಿ ಬೆಳೆಯ ಬುಡಕ್ಕೆ ಸಿಂಪಡಿಸಬೇಕು. 19: 19 :19 ರಸಗೊಬ್ಬರವನ್ನು ಒಂದು ಲೀಟರ್ ನೀರಿನಲ್ಲಿ ಎರಡು ಗ್ರಾಂ.ಬೆರೆಸಿ ಸಿಂಪಡಿಸಬೇಕು. ಇದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂದು ಖಟಕಚಿಂಚೋಳಿಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಸವಪ್ರಭು ತಿಳಿಸುತ್ತಾರೆ.

‘ಎರಡು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ಏಳು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಸಾಲುಗಳ ಮಧ್ಯೆ ನೀರು ನಿಂತು ತೊಗರಿ ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ನಮಗೆ ತುಂಬಾ ನಷ್ಟವಾಗಿದೆ. ಆದ್ದರಿಂದ ಸರ್ಕಾರ ತಕ್ಷಣ ಹೆಚ್ಚಿನ ಪರಿಹಾರ ನೀಡಬೇಕು’ ಎಂದು ಖಟಕಚಿಂಚೋಳಿಯ ರೈತ ಲೋಕೇಶ ಅಲ್ಲೂರೆ ಒತ್ತಾಯಿಸುತ್ತಾರೆ.

ಹೋಬಳಿಯ ದಾಡಗಿ, ಮದಕಟ್ಟಿ, ಖಟಕಚಿಂಚೋಳಿ, ನಾವದಗಿ, ಚಳಕಾಪುರ, ನೆಲವಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕಪ್ಪು ಮಣ್ಣಿನಿಂದ ಕೂಡಿದ ಉತ್ತಮ ಭೂಮಿ ಇದೆ. ಇದರಿಂದ ಹಸಿ ತೇವಾಂಶ ಸಮಸ್ಯೆ ಕಾಡುತ್ತಿದೆ.

ಮಳೆ ಇದೆ ರೀತಿ ಮುಂದುವರಿದರೆ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ. ಅಲ್ಲದೇ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ತೊಗರಿ ಬೆಳೆಯು ಹಾಳಾಗುವ ಸಾಧ್ಯತೆ ಇದೆ ದಾಡಗಿ ಗ್ರಾಮದ ರೈತ ಭದ್ರು ಭವರಾ ಆತಂಕ ವ್ಯಕ್ತಪಡಿಸಿದರು.

ತೊಗರಿ ಬಿತ್ತಿರುವ ಜಮೀನು ಕಳೆಗಳಿಂದ ಮುಕ್ತವಾಗಿರಬೇಕು. ಕಾಲಕಾಲಕ್ಕೆ ಎಡೆಕುಂಟೆ ಹೊಡೆದು ಸ್ವಚ್ಛಚಗೊಳಿಸಬೇಕು.ಆದರೆ ಮಳೆ ಅವಕಾಶ ನೀಡುತ್ತಿಲ್ಲ.

ಇದರಿಂದ ಹೊಲದಲ್ಲಿ ಕಳೆ ಹೆಚ್ಚಳವಾಗುತ್ತಿದೆ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಅಸಹಾಯಕತೆ ಹೊರಹಾಕಿದರು.

ಜಮೀನಿಗೆ ನುಗ್ಗಿದ ನೀರು
ಕಮಲನಗರ:
ಹಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನದಿ ಹಾಗೂ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ.

‘ಹೊರವಲಯದ ಸೋನಾಳ-ಲಖಣಗಾಂವ, ಹುಲಸೂರು-ಹೊಳಸಮುದ್ರ, ಬೆಳಕೂಣಿ-ಕಮಲನಗರ ಸಂಪರ್ಕ ರಸ್ತೆ ಹಾಗೂ ಸೇತುವೆಗಳಲ್ಲಿ ನೀರು ಸಂಗ್ರಹವಾಗಿ ಕೆಲಕಾಲ ಸಂಪರ್ಕ ಕಡಿತಗೊಂಡಿತು. ಸಂಚಾರಕ್ಕೆ ಸಾರ್ವಜನಿಕರು ಪರದಾಡಿದರು’ ಎಂದು ರಾಜೇಂದ್ರ ಮಾಳಿ ತಿಳಿಸಿದರು.

‘ನಿರಂತರ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ರಾಶಿಗೆ ಬಂದ ಹೆಸರು, ಉದ್ದು ಬೆಳೆ ಹಾಳಾಗುತ್ತಿದೆ. ಇದು ರೈತರ ನಿದ್ದೆಗೆಡಿಸಿದೆ’ ಎಂದು ಬಸನಾಳ ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ಆನಂದರಾವ ಪಾಟೀಲ ಬೇಸರ ವ್ಯಕ್ತಪಡಿಸಿದರು.

ಸತತ ಮಳೆಯಿಂದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಮಾಂಜ್ರಾ ನದಿ ನೀರು, ದೇವನದಿ ನಾಲಾ, ಹಳ್ಳ, ಕೆರೆಗಳು ತುಂಬಿ ಹರಿಯುತ್ತಿವೆ.

ಇದರಿಂದ ಬೆಳೆದು ನಿಂತ ತೊಗರಿ, ಸೋಯಾಬಿನ್, ಸೂರ್ಯಕಾಂತಿ ಬೆಳೆಗಳಿಗೂ ಹಾನಿಯಾಗುವ ಆತಂಕ ಎದುರಾಗಿದೆ ಎಂದು ಅಂಕುಶ ಸೋನಾಳ ಅವರು ಹೇಳಿದರು.

ಕಮಲನಗರ ತಾಲ್ಲೂಕಿನ ದಾಬಕಾದಲ್ಲಿ 20.2 ಮಿ.ಮೀ, ಠಾಣಾಕುಶನೂರುದಲ್ಲಿ 96 ಮಿ.ಮೀ, ಕಮಲನಗರದಲ್ಲಿ 83.6 ಮಿ.ಮೀ, ಚಿಂತಾಕಿ 17.2 ಮಿ.ಮೀ, ಸಂತಪುರದಲ್ಲಿ 96 ಮಿ.ಮೀ, ಔರಾದ್‍ನಲ್ಲಿ 52ಮಿ.ಮೀ ಮಳೆಯಾಗಿದೆ.

ಸೇತುವೆ ಮೇಲೆ ಹರಿದ ನೀರು
ಭಾಲ್ಕಿ:
ಶನಿವಾರದಿಂದ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಹಳ್ಳಕೊಳ್ಳ, ಚೆಕ್ ಡ್ಯಾಂ, ತಗ್ಗು ಪ್ರದೇಶಗಳು ತುಂಬಿ ಹರಿಯುತ್ತಿವೆ. ಕೆರೆಗಳಿಗೆ ಒಳ ಹರಿವು ಹೆಚ್ಚಾಗಿದೆ. ಸೋಮವಾರ ತಾಲ್ಲೂಕಿನ ಆನಂದವಾಡಿ-ನಿಡೇಬನ್‌ ಮಧ್ಯದ ಸೇತುವೆ ಮೇಲಿಂದ ನೀರು ಹರಿದ ಪರಿಣಾಮ ನಿಡೇಬನ್‌, ಕೊರೂರು, ಗೋರಚಿಂಚೋಳಿ, ಕೊಟಗೀರ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಸೇತುವೆ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದ್ದರಿಂದ ಕಾಯಿಕಟ್ಟಿದ ಸೋಯಾ ಅವರೆ ಬೆಳೆ, ತೊಗರಿ ಬೆಳೆಗಳು ರೋಗ ಬಾಧೆಗೆ ತುತ್ತಾಗುತ್ತಿವೆ. ತರಕಾರಿ, ತೋಟಗಾರಿಕೆ ಬೆಳೆಗಳು ನೀರಿನಲ್ಲಿ ಮುಳಗಡೆ ಕಂಡಿವೆ ಎಂದು ಬಿಜೆಪಿ ಮುಖಂಡ ಸಂಗಮೇಶ ಭೂರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT