ಸೋಮವಾರ, ಏಪ್ರಿಲ್ 19, 2021
32 °C
ಕತ್ತೆಗಳೊಂದಿಗೆ ಪ್ರತಿಭಟನಾ ರ್‍ಯಾಲಿ ನಡೆಸಿದ ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು

ಕಮಲನಗರ: ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಪಟ್ಟಣದ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ ಪ್ರತಿಯೊಂದು ಎಕ್ಸ್‌ಪ್ರೆಸ್ ರೈಲು ನಿಲುಗಡೆ ಮಾಡಬೇಕು ಎಂದು ನಾಗರಿಕ ಸೇವಾ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಮಂಗಳವಾರ ಈ ಕುರಿತು ಸಿಖಂದರಾಬಾದ್ ವಿಭಾಗೀಯ ರೈಲ್ವೆ ಅಧಿಕಾರಿಗೆ ಬರೆದ ಮನವಿ ಪತ್ರವನ್ನು ಭಾಲ್ಕಿ ರೈಲ್ವೆ ಸೆಕ್ಷನ್ ಅಧಿಕಾರಿ ರವಿಕುಮಾರ ಗುಪ್ತಾ ಅವರ ಮೂಲಕ ಸಲ್ಲಿಸಿದರು.

ಅಲ್ಲಮ ಪ್ರಭು ವೃತ್ತದಿಂದ ರೈಲು ನಿಲ್ದಾಣದವರೆಗೆ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ದಿಲೀಪ ಮುಧಾಳೆ ನೇತೃತ್ವದಲ್ಲಿ ರ್‍ಯಾಲಿ ನಡೆಸಿದ ಪದಾಧಿಕಾರಿಗಳು, ರ್‍ಯಾಲಿಯಲ್ಲಿ ಕತ್ತೆಗಳ ಮುಂದೆ ಕೊಳಲು ಊದುವ ಮೂಲಕ ಗಮನ ಸೆಳೆದರು.

ದಿಲೀಪ ಮುಧಾಳೆ ಮಾತನಾಡಿ, ‘ಕಮಲನಗರವು ಔರಾದ್ ತಾಲ್ಲೂಕಿನ ಗಡಿಭಾಗದ ಏಕೈಕ ರೈಲು ನಿಲ್ದಾಣ ಆಗಿದೆ. ಈ ನಿಲ್ದಾಣದ ಮೂಲಕ ಹಾದು ಹೋಗುವ ಪ್ರತಿ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್-19 ಹಿನ್ನಲೆಯಲ್ಲಿ ಕೆಲ ತಿಂಗಳು ರೈಲು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ರೈಲುಗಳ ಸಂಚಾರ ಮತ್ತೆ ಆರಂಭಗೊಂಡಿದೆ. ಕಮಲನಗರಕ್ಕೆ ಉದಗೀರ 20 ಕಿ.ಮೀ ದೂರ ಇದೆ. ಉದಗೀರದಿಂದ 20 ಕಿ.ಮೀ ದೂರದಲ್ಲಿ 4 ಸ್ಥಳದಲ್ಲಿ ರೈಲುಗಳು ನಿಲುಗಡೆಯಾಗುತ್ತವೆ. ಆದರೆ, ಕಮಲನಗರದಲ್ಲಿ ಯಾಕೆ ರೈಲುಗಳು ನಿಲುಗಡೆ ಇಲ್ಲ’ ಎಂದು ಪ್ರಶ್ನಿಸಿದರು.

ಈ ಕುರಿತು ಸಿಖಂದರಾಬಾದ್ ವಿಭಾಗೀಯ ಅಧಿಕಾರಿಗೆ ಕರೆ ಮಾಡಿದ ರವಿಕುಮಾರ ಗುಪ್ತಾ ಅವರು, ‘ಸದ್ಯ ಶಿರೋಬೆಸ್ ಮಿಟಿಂಗ್‍ನಲ್ಲಿ ಪ್ರಸ್ತಾವ ಇಡಲಾಗಿದೆ. ಏಪ್ರಿಲ್‌ 1ರವರೆಗೆ ಬೇಡಿಕೆ ಈಡೇರಿಸುವುದಾಗಿ’ ಭರವಸೆ ನೀಡಿದರು.

ಅದಕ್ಕೆ ಒಪ್ಪದ ಪ್ರತಿಭಟನಾಕಾರರು ತಕ್ಷಣವೇ ನಾಂದೇಡ್-ಬೆಂಗಳೂರು, ಮುಂಬೈ-ಬೀದರ್‌, ಔರಾಂಗಾಬಾದ್, ಹೈದ್ರಾಬಾದ್, ಪುಣೆ-ಹೈದ್ರಾಬಾದ್-ಔರಂಗಾಬಾದ್-ರೇಣಿಗುಂಟಾ ಮತ್ತು ಮುಂಬೈ-ಬೀದರ್‌ ರೈಲುಗಳು ನಿಲುಗಡೆಯಾಗಬೇಕು. ಈ ಎಲ್ಲ ಸಾರ್ವಜನಿಕರ ನ್ಯಾಯಯುತ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕಿನ ವಿವಿಧ ಸಂಘಟನೆ ನೇತೃತ್ವದಲ್ಲಿ ರೈಲ್ವೆ ಹಳಿಯ ಮೇಲೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಶ್ರೀರಾಮ ಮಿನ್ನರ್, ಸಂತೋಷ ಚಿಗಲೆ, ಎನ್.ಎಸ್. ಜನಗೌಡ್, ಎಸ್.ಕೆ.ಮೀನಾರ, ವಿ.ಎಸ್.ಥೋರೆ, ಚಿದಾನಂದ ಮಠ, ರಾಜಕುಮಾರ ಚಿಕ್ಲೆ, ಶಿವಾನಂದ ರಾಠೋಡ್, ಜಿ.ಎನ್.ದಾಬಕೆಕರ್ ಭೇಟಿ ನೀಡಿದರು.

ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಭೀಮರಾವ ಕಣಜಿ, ಶಾಂತಕುಮಾರ ಬಿರಾದಾರ, ಜನಾರ್ದನ ಸಾವರ್ಗೆಕರ್, ಗಣಪತಿ ಆರ್.ಡಿ, ವೈಜನಾಥ ವಡ್ಡೆ, ಸಿದ್ರಾಮೇಶ್ವರ, ಖತಗಾಂವ್ ವಿಶ್ವನಾಥ, ವಿಠ್ಠಲರಾವ, ಸುಭಾಷ ಇದ್ದರು.

ಕತ್ತೆಗಳ ಬೃಹತ್‌ ಪ್ರತಿಭಟನಾ ರ್‍ಯಾಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐ ಪಾಲಕ್ಷಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಪಿಎಸ್‍ಐ ನಂದಿನಿ ಎಸ್. ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.