ಗುರುವಾರ , ಅಕ್ಟೋಬರ್ 29, 2020
19 °C
ಕಣ್ಣೆದುರಲ್ಲೇ ಸೋಯಾ ಬಣವೆ ನೀರು ಪಾಲಾಗಿದ್ದರಿಂದ ಗಳಗಳನೆ ಅತ್ತ ರೈತ ಕುಟುಂಬ

ಬೇಲೂರ, ಮುಚಳಂಬ, ಹತ್ತರ್ಗಾದಲ್ಲಿ ಬೆಳೆ ಹಾನಿ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಮುಚಳಂಬದ ಮಡಿವಾಳಪ್ಪ ಪಾಟೀಲ ಅವರ ಹೊಲದಲ್ಲಿನ ಸೋಯಾಬಿನ್ ಬಣವೆ ಬುಧವಾರ ಕಣ್ಣೆದುರಲ್ಲೇ ಚುಳಕಿನಾಲೆಯಲ್ಲಿ ನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದ್ದರಿಂದ ರೈತ ಕುಟುಂಬ ಗಳಗಳನೆ ಅತ್ತರು. ಸುತ್ತಲಿನವರು ಹತಾಶರಾಗಿ ನೋಡುವಂತಾಯಿತು.

ಭಾರಿ ಮಳೆಗೆ ಚುಳಕಿನಾಲಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ನಾಲ್ಕು ಗೇಟ್‌ಗಳ ಮೂಲಕ ನೀರನ್ನು ನಾಲೆಗೆ ಬಿಡಲಾಯಿತು. ಈ ಕಾರಣ ಮುಚಳಂಬ, ಗೋರಟಾ(ಬಿ), ಮುಸ್ತಾಪುರ, ತೊಗಲೂರ ಗ್ರಾಮಗಳ ವ್ಯಾಪ್ತಿಯಲ್ಲಿನ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಮಡಿವಾಳಪ್ಪ ಪಾಟೀಲ ಅವರ 5 ಎಕರೆ ಜಮೀನಿನಲ್ಲಿನ ಕಟಾವು ಮಾಡಿ ಬಣವೆ ಹಚ್ಚಿ ಇಡಲಾಗಿದ್ದ ಸೋಯಾಬಿನ್ ನೀರು ಪಾಲಾಯಿತಲ್ಲದೆ, ಗೋರಟಾದಲ್ಲಿನ ವೀರಶೆಟ್ಟಿ ಘಾಳೆ ಅವರ ಬಣವೆಯೂ ನೀರಿನಿಂದ ಕೊಚ್ಚಿಕೊಂಡು ಹೋಗಿದೆ. ಗ್ರಾಮದ ದಿಲೀಪಕುಮಾರ ಕಾಶಪ್ಪ, ಅರವಿಂದ ಜ್ಯೋತೆಪ್ಪ, ಗುರುನಾಥ ಹುಡಗೆ, ಚಂದ್ರಕಾಂತ ಮುರುಗೆಪ್ಪ ಅವರ ಕಬ್ಬು ಮಳೆಗೆ ನೆಲಕ್ಕೊರಗಿದೆ.

‘ಬೇಲೂರ, ಧನ್ನೂರ, ಜಾನಾಪುರ ಗ್ರಾಮಗಳಲ್ಲಿ ಜಲಾಶಯದ ಹಿನ್ನೀರು ಹೊಲಗಳಿಗೆ ನುಗ್ಗಿದೆ. ಹಿನ್ನೀರಿನಿಂದ ಬೇಲೂರ ಗ್ರಾಮದ 500 ಎಕರೆಗೂ ಹೆಚ್ಚಿನ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. 50 ಕ್ಕೂ ಹೆಚ್ಚು ರೈತರ ಕಬ್ಬು ನೆಲಕ್ಕೊರಗಿದೆ’ ಎಂದು ಗ್ರಾಮಸ್ಥ ಜಗನ್ನಾಥ ಚಿಲ್ಲಾಬಟ್ಟೆ ಹೇಳಿದ್ದಾರೆ.

‘ಮಳೆ ಹಾಗೂ ಜಲಾಶಯದ ನೀರಿನಿಂದ ಸಾವಿರಾರು ಎಕರೆಯಲ್ಲಿನ ಬೆಳೆ ನಾಶವಾಗಿದೆ' ಎಂದು ಮುಖಂಡರಾದ ಶಿವರಾಜ ನರಶೆಟ್ಟಿ, ಮನೋಜ ಮಾಶೆಟ್ಟಿ ಹೇಳಿದ್ದಾರೆ. ‘ಹಾನಿ ಅನುಭವಿಸಿದ ರೈತರಿಗೆ ಸರ್ಕಾರ ಶೀಘ್ರ ಪರಿಹಾರ ಒದಗಿಸಬೇಕು’ ಎಂದು ವೀರಣ್ಣ ಪಾಟೀಲ ಮೋರಖಂಡಿ, ಗೋವಿಂದ ಶಿಂಧೆ ಆಗ್ರಹಿಸಿದ್ದಾರೆ.

ಕೊಚ್ಚಿಹೋದ ಬೆಳೆ: ‘ಗಂಡೂರಿನಾಲಾ ತುಂಬಿ ಹರಿದು ಹೊಲಗಳಿಗೆ ನೀರು ನುಗ್ಗಿದ್ದರಿಂದ ಸರಜವಳಗಾ, ಶಿರಗಾಪುರ, ಕೊಹಿನೂರವಾಡಿ, ಖೇರ್ಡಾ(ಕೆ) ಗ್ರಾಮಗಳ 800 ಎಕರೆ ಜಮೀನಿನಲ್ಲಿ ಬರೀ ನೀರು ಕಾಣುವಂತಾಗಿತ್ತು. ಹೀಗಾಗಿ ಬೆಳೆಯೊಂದಿಗೆ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ಅನೇಕ ರೈತರು ಕಂಗಾಲಾಗಿದ್ದಾರೆ’ ಎಂದು ಪ್ರಮುಖರಾದ ರಾಜಕುಮಾರ ಶಿರಗಾಪುರ ಹೇಳಿದ್ದಾರೆ.

ಸುತ್ತುವರಿದ ಬೆಣ್ಣೆತೊರೆ: ತಾಲ್ಲೂಕಿನ ಗಡಿಯಂಚಿನಿಂದ ಹರಿಯುವ ಬೆಣ್ಣೆತೊರೆ ನದಿ ತುಂಬಿ ಹರಿಯುತ್ತಿರುವುದರಿಂದ ಹತ್ತರ್ಗಾ ಗ್ರಾಮದಲ್ಲಿನ ಮನೆಗಳು ಜಲಾವೃತಗೊಂಡವು. ಹತ್ತರ್ಗಾ, ಚಿತ್ತಕೋಟಾ, ಗಿಲಗಿಲಿ ಗ್ರಾಮಗಳ ವ್ಯಾಪ್ತಿಯಲ್ಲಿನ ಎಲ್ಲ ಹೊಲಗಳಲ್ಲಿ ಬರೀ ನೀರು ಕಾಣುವಂತಾಯಿತು.

‘ಕಟಾವು ಮಾಡಿ ಇಡಲಾಗಿದ್ದ ಸೋಯಾಬಿನ್ ಬಣವೆಗಳು ನೀರಿನೊಂದಿಗೆ ಸಾಗಿದವು. ತೊಗರಿ ಬೆಳೆ ಕೊಚ್ಚಿಕೊಂಡು ಹೋಯಿತು. ಇದರಿಂದ ಸಾವಿರ ಎಕರೆಯಲ್ಲಿನ ಬೆಳೆ ಹಾನಿಯಾಗಿದೆ' ಎಂದು ಗ್ರಾಮಸ್ಥರಾದ ಬಸವರಾಜ ಚನ್ನಪ್ಪಗೋಳ, ಶ್ರೀನಾಥ ಪಾಟೀಲ ತಿಳಿಸಿದ್ದಾರೆ.

‘ಹತ್ತರ್ಗಾ ಗ್ರಾಮದ ಶ್ರೀಕೃಷ್ಣ ಗುರುಲಿಂಗಪ್ಪ, ಸಿದ್ರಾಮಪ್ಪ ಪರೀಟ್, ಶಿವಪುತ್ರಪ್ಪ ಪಾಟೀಲ, ಬಸವರಾಜಸ್ವಾಮಿ, ರಮೇಶ ಪಾಟೀಲ ಅವರ ಮನೆಗಳು ಜಲಾವೃತಗೊಂಡು ಕುಸಿದಿವೆ. ಸಂಬಂಧಿತರು ಶೀಘ್ರ ಸ್ಥಳಕ್ಕೆ ಬಂದು ಹಾನಿ ಸಮೀಕ್ಷೆ ಮಾಡಬೇಕು' ಎಂದು ರಾಜೇಂದ್ರ ಹಂದ್ರಾಳೆ, ರಮೇಶ ಬಳಬಟ್ಟೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು