ಬುಧವಾರ, ಮಾರ್ಚ್ 29, 2023
24 °C
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಬಡಿಗೇರ ಅಭಿಮತ

ಬೀದರ್: ಮೊಬೈಲ್ ಸಂಸ್ಕೃತಿಯಿಂದ ಜಾನಪದ ಸಂಸ್ಕೃತಿಗೆ ಕುತ್ತು: ಸದಾಶಿವ.ಎಸ್.ಬಡಿಗೇರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಬೀದರ್: ‘ಮೊಬೈಲ್ ಸಂಸ್ಕೃತಿಯಿಂದ ಹಳ್ಳಿಗಾಡಿನ ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯನ್ನೊಳಗೊಂಡ ಜಾನಪದ ಸಂಸ್ಕೃತಿಗೆ ಕುತ್ತು ಬಂದೊದಗಿದೆ’ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸದಾಶಿವ.ಎಸ್.ಬಡಿಗೇರ ಅಭಿಪ್ರಾಯ ಪಟ್ಟರು.

ನಗರದ ಹೊರ ವಲಯದಲ್ಲಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಸತಿ ನಿಲಯದಲ್ಲಿ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಚೇರಿ ಬೆಂಗಳೂರು ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ಸಹಯೋಗದಲ್ಲಿ ಗ್ರಾಮಲೋಕ ಮತ್ತು ಜಾನಪದ ಸಾಹಿತ್ಯ-ಸಂಸ್ಕೃತಿ-ಉಪನ್ಯಾಸ ಹಾಗೂ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮೊಬೈಲ್ ಸಂಸ್ಕೃತಿ ನಮ್ಮನ್ನು ಏಕಾಂಗಿಯನ್ನಾಗಿ ಮಾಡಿದೆ. ಅವಿಭಕ್ತ ಕುಟುಂಬಗಳಿಂದ ನಮ್ಮನ್ನು ದೂರ ತಳ್ಳುತ್ತಿದೆ. ನಮ್ಮ ಮನಸ್ಥಿತಿ ದುರ್ಬಲಗೊಳಿಸುತ್ತಿದ್ದು, ಸದಾ ಚಿಂತೆಯಲ್ಲಿರುವಂತೆ ಮೊಬೈಲ್ ಮಾರ್ಪಡಿಸುತ್ತಿದೆ. ಈ ಆಪತ್ತಿನಿಂದ ಪಾರಾಗಲು ಜಾನಪದ ಅಧ್ಯಯನ ಅಗತ್ಯವಿದ್ದು, ಕರ್ನಾಟಕ ಜಾನಪದ ವಿವಿ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುವ ಕೋರ್ಸ್‌ಗಳ ಸದುಪಯೋಗಕ್ಕೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

 ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೌತಮ ಅರಳಿ ಮಾತನಾಡಿ, ‘ಜಿಲ್ಲೆಯಲ್ಲಿ ಜಾನಪದ ಉಳಿಸಿ ಬೆಳೆಸಲು ಐದು ರೀತಿಯ ಕಲೆಗಳನ್ನು ಪ್ರಚುರಪಡಿಸಲು ನಿರ್ಧರಿಸಲಾಗಿದೆ ಹಾಗೆಯೇ 18 ವರ್ಷ ವಯಸುಳ್ಳ ಪ್ರತಿಯೊಬ್ಬರು ಮತದಾನದ ಹಕ್ಕು ಅನುಭವಿಸಲು ಮೊಬೈಲ್ ಆ್ಯಪ್‌ ಬಳಿಸಿ ಮತದಾನದ ಗುರುತಿನ ಚೀಟಿ ಪಡೆಯಬಹುದಾಗಿದೆ’ ಎಂದರು.

ಜಾನಪದ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ , ‘ಇಂದು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಬದುಕು ಉದ್ದರಿಸಿದ್ದ ಗ್ರಾಮೀಣ ಜನಪದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಸೇರಿದಂತೆ ಇತರೆ ಮೌಲ್ಯಗಳನ್ನು ಮರೆಯುತ್ತಲಿದ್ದೇವೆ. ಸಾಹಿತ್ಯದ ತಾಯಿ ಬೇರು ಜಾನಪದವಾಗಿದೆ. ತ್ರಿಪದಿ, ಒಗಟು, ಒಡುಪು, ಗಾದೆ, ಕಥೆಗಳು ಮನುಷ್ಯನ ಆಂತರಿಕ ಸೌಂದರ್ಯ ಹೆಚ್ಚಿಸುತ್ತದೆ, ನಮ್ಮಲ್ಲಿ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವ ಕಾರ್ಯ ಜಾನಪದ ಸಾಹಿತ್ಯ ಮಾಡುತ್ತದೆ’ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ .ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗದಗೆಪ್ಪ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸುಭಾಷ ನಾಗೂರೆ, ಸಾಹಿತಿ ಡಾ.ಮಹಾನಂದಾ ಮಡಕಿ, ಡಾ.ನೀಲಗಂಗಾ ಹೆಬ್ಬಾಳೆ, ವಸತಿ ನಿಲಯದ ಮೇಲ್ವಿಚಾರಕಿ ಜ್ಯೋತಿ ಪೊದ್ದಾರ್ ಇದ್ದರು.

 ರಾಜಮತಿ ಹಾಗೂ ಸಂಗಡಿಗರು, ಜಾನಪದ ವಿದ್ವಾಂಸ ಶಂಭುಲಿಂಗ ವಾಲ್ದೊಡ್ಡಿ, ವೀರಣ್ಣ ಕುಂಬಾರ ಜಾನಪದ ಗೀತ ಗಾಯನ ಪ್ರಸ್ತುತಪಡಿಸಿದರು. ಶರಣಯ್ಯ ಸ್ವಾಮಿ, ರಾಜಮತಿ, ಡಾ.ಸಿರಾಜುದ್ದಿನ್ ಹಾಗೂ ಆಶಾ ಮುದ್ದಾ ಅವರಿಗೆ ಇದೇ ವೇಳೆ ಎಚ್.ಎಲ್ ನಾಗೇಗೌಡ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಾಲಾಶ್ರೀ ಪ್ರಾರ್ಥನೆ ಗೀತೆ ಹಾಡಿದರು. ರಾಷ್ಟ್ರೀಯ ಜಾನಪದ ಬುಡಕಟ್ಟು ಹಾಗೂ ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಸ್ವಾಗತಿಸಿದರು. ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಡಾ.ಸುನೀತಾ ಕೂಡ್ಲಿಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಬಿ ಕುಚಬಾಳ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು